ಮಂಗಳವಾರ, ಸೆಪ್ಟೆಂಬರ್ 21, 2021
26 °C
ಬಿಜೆಪಿ ವಿರುದ್ಧ ದೇವೇಗೌಡರಿಂದ ಗಂಭೀರ ಆರೋಪ

ಬಿಎಸ್‌ವೈ ಪುತ್ರನಿಂದಲೇ ಸ್ವಾಮೀಜಿಗೆ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಥಣಿ ಮತ್ತು ಹಿರೇಕೆರೂರುಗಳಲ್ಲಿ ಬಿಜೆಪಿಯ ತೀವ್ರ ಒತ್ತಡದ ಕಾರಣಕ್ಕೇ ಜೆಡಿಎಸ್‌ ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದಾರೆ’ ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಗಂಭೀರ ಆರೋಪಿಸಿದರು.

‘ಹೈದರಾಬಾದ್‌ನಲ್ಲಿದ್ದ ಗುರು ಅವರ ಮೇಲೆ ಯಾರೆಲ್ಲ ಒತ್ತಡ ಹಾಕಿದರು ಎಂಬುದು ಗೊತ್ತಿದೆ. ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಕಣದಲ್ಲೇ ಉಳಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂಬ ರೀತಿಯಲ್ಲಿ ಒತ್ತಡ ಹಾಕಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಸಹ ನಾಮಪತ್ರ ವಾಪಸ್ ಪಡೆಯಲು ಒತ್ತಡ ಹಾಕಿದ್ದಾರೆ, ವಿವಿಧ ಮಠಗಳ ಸ್ವಾಮೀಜಿಗಳು ಸಹ ಒತ್ತಾಯ ಮಾಡಿದ್ದಾರೆ’ ಎಂದು ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳುವುದು ಕಷ್ಟ ಎಂದು ಸ್ವಾಮೀಜಿ ಹೇಳಿಕೊಂಡರು. ಅದಕ್ಕೆ ನಾವು ಸ್ವಾಮೀಜಿ ಅವರಿಗೆ ನಾಮಪತ್ರ ವಾಪಸ್ ಪಡೆಯಿರಿ ಎಂದೆವು. ಹಿರೇಕೆರೂರಿನಲ್ಲಿ ನಾವು ಮೊದಲು ಉಜಿನಪ್ಪ ಜಟ್ಟಪ್ಪ ಕೋಡಿಹಳ್ಳಿ ಅವರಿಗೆ ಮೊದಲು ಬಿ ಫಾರಂ ಕೊಟ್ಟಿದ್ದೆವು. ಇದೀಗ ಅವರು ಪಕ್ಷೇತರರಾಗಿ ನಿಂತಿದ್ದು, ಅವರಿಗೆ ಬೆಂಬಲ ನೀಡುವ ವಿಚಾರವನ್ನು ಇನ್ನೂ ಅಂತಿಮಗೊಳಿಸಿಲ್ಲ, ಅವರೂ ಸಹ ನಮ್ಮ ಬೆಂಬಲ ಕೋರಿಲ್ಲ’ ಎಂದರು.

‘ಜೆಡಿಎಸ್ ಅಭ್ಯರ್ಥಿಗಳು ಓಡಿ ಹೋಗುವ ಪ್ರಶ್ನೆಯೇ ಇಲ್ಲ. ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಆಗುತ್ತಿದ್ದರೂ ನಾವು ಸುಮ್ಮನಿದ್ದೇವೆ. ಕೆ.ಆರ್‌.ಪೇಟೆಯಲ್ಲಿ ಪಕ್ಷದ ಕಾರ್ಯಕರ್ತರು ಚಪ್ಪಲಿ ಎಸೆದಿಲ್ಲ’ ಎಂದರು.

ಕೆ.ಆರ್‌.ಪೇಟೆಯಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೆಲ್ಲಲಿ ಅಂತ ಪ್ರಚಾರ ಮಾಡುತ್ತಾರಾ? ಜೆಡಿಎಸ್ ಹೋರಾಟ ನಿರಂತರವಾಗಿರಲಿದೆ, ಅದು ಯಾರದ್ದೋ ಪಾಲಾಗಲು ಬಿಡುವುದಿಲ್ಲ. ಹೊಸಕೋಟೆಯಲ್ಲಿ ಶರತ್‌ ಬಚ್ಚೇಗೌಡರು ಕರೆದರೆ ಕುಮಾರಸ್ವಾಮಿ ಪ್ರಚಾರಕ್ಕೆ ಹೋಗುತ್ತಾರೆ’ ಎಂದು ದೇವೇಗೌಡರು ಹೇಳಿದರು.

‘ಮಹಾಲಕ್ಷ್ಮಿ ಲೇಔಟ್‌ನಲ್ಲಿ ಗೋಪಾಲಯ್ಯ ಅವರ ಪತ್ನಿಗೆ ಉಪಮೇಯರ್‌ ಸ್ಥಾನ ಕೊಡುವುದು ಬೇಡ ಎಂಬ ಬಲವಾದ ಒತ್ತಾಯ ಇದ್ದರೂ ಕುಮಾರಸ್ವಾಮಿ ಅದಕ್ಕೆ ಕಿವಿಗೊಡದೆ ನೀಡಿದರು. ನಾವೆಲ್ಲಿ ಅವರಿಗೆ ಅನ್ಯಾಯ ಮಾಡಿದ್ದೇವೆ?’ ಎಂದು ಪ್ರಶ್ನಿಸಿದರು.

12 ಕ್ಷೇತ್ರದಲ್ಲಷ್ಟೇ ಜೆಡಿಎಸ್ ಸ್ಪರ್ಧೆ

ಉಪಚುನಾವಣೆಯ ನಡೆಯುವ 15ರಲ್ಲಿ 15ಕ್ಕೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಜೆಡಿಎಸ್‌ ಮೊದಲಿನಿಂದ ಹೇಳುತ್ತ ಬಂದಿತ್ತು. ಕೊನೆಯ ಕ್ಷಣದಲ್ಲಿ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಾಗಿ ಹೇಳಿತ್ತು. ಅಥಣಿ ಮತ್ತು ಹಿರೇಕೆರೂರುಗಳಲ್ಲಿ ಪಕ್ಷದಿಂದ ಬಿ ಫಾರಂ ಪಡೆದಿದ್ದ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿರುವುದರಿಂದ ಇದೀಗ 12 ಕ್ಷೇತ್ರಗಳಲ್ಲಷ್ಟೇ ಜೆಡಿಎಸ್‌ ಸ್ಪರ್ಧಾಕಣದಲ್ಲಿ ಉಳಿದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು