ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡಿಗೆ ಕೊಳ್ಳಿ ಇಟ್ಟಿದ್ದು ದುಬೈನ ನಾಯ್ಫ್‌ ರಸ್ತೆ!

ಕೊರೊನಾ ‘ಹಾಟ್‌ಸ್ಪಾಟ್‌’ ಕಾಸರಗೋಡಿನಲ್ಲಿ ‘ಕೋವಿಡ್‌ 19’ ಆಸ್ಪತ್ರೆ ಆರಂಭ
Last Updated 7 ಏಪ್ರಿಲ್ 2020, 4:17 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ಸೋಂಕು ಅತೀ ಹೆಚ್ಚು ದೃಢಪಟ್ಟು, ಭಾರತದಲ್ಲೇ ‘ಹಾಟ್‌ಸ್ಪಾಟ್‌’ ಎಂದು ಗುರುತಿಸಿಕೊಂಡಿರುವ ಕೇರಳದ ಕಾಸರಗೋಡಿನಲ್ಲಿ, ಸೋಂಕು ಹರಡುವಿಕೆ ಸದ್ಯ ಹತೋಟಿಯಲ್ಲಿದ್ದರೂ, ಪರಿಸ್ಥಿತಿ ಗಂಭೀರವಾಗಿದೆ ಎನ್ನುತ್ತವೆ ವೈದ್ಯಕೀಯ ಮೂಲಗಳು.

‘ಈ ಜಿಲ್ಲೆಯಿಂದ ಬದುಕು ಅರಸಿ ತೆರಳಿದ ನೂರಾರು ಮಂದಿ ದುಬೈಯ ನಾಯ್ಫ್ ರಸ್ತೆಯಲ್ಲಿರುವ ಚಿನ್ನದಂಗಡಿಗಳು, ಮೊಬೈಲ್‌ ಶಾಪ್‌ಗಳಲ್ಲಿ ಕೆಲಸಕ್ಕಿದ್ದಾರೆ. ರಸ್ತೆ ಬದಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲಿ ಸೋಂಕು ತಗಲಿಸಿಕೊಂಡು ತವರಿಗೆ ಮರಳಿದ ಅನೇಕರು, ಸಂಬಂಧಿಕರ ಜೊತೆ ಬೆರೆತಿದ್ದಾರೆ. ಅದೀಗ ಇಲ್ಲಿನವರನ್ನು ಕತ್ತಲೆಗೆ ತಳ್ಳಿದೆ. ಬದುಕಿಗೇ ಕೊಳ್ಳಿ ಇಟ್ಟಿದೆ’ ಎನ್ನುತ್ತಾರೆ ಕಾಸರಗೋಡಿನ ಉದ್ಯಮಿ ಷರೀಫ್‌ ಪಡನ್ನ.

ಈ ಮಧ್ಯೆ, ಕೇರಳ– ಕರ್ನಾಟಕ ಗಡಿ ದಿಗ್ಬಂಧನ ಕಾರಣಕ್ಕೆ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ, ಕಾಸರಗೋಡಿನ ಉಕ್ಕಿನಡ್ಕ ಎಂಬಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿದ್ದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ತರಾತುರಿಯಲ್ಲಿ ಸೋಮವಾರ ಚಾಲನೆ ನೀಡಿದೆ. ಆಡಳಿತ ವಿಭಾಗದ ಕಟ್ಟಡವನ್ನು ‘ಕೋವಿಡ್‌ 19’ ಚಿಕಿತ್ಸೆಯ ಆಸ್ಪತ್ರೆಯಾಗಿ ಮಾಡಿದೆ.

ಕಾಸರಗೋಡಿನಲ್ಲಿ ಈವರೆಗೆ 148 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ, 100 ಮಂದಿ ದುಬೈ ಸೇರಿದಂತೆ ವಿದೇಶಗಳಿಂದ ಸೋಂಕು ತಗಲಿಸಿಕೊಂಡು ಬಂದವರಾಗಿದ್ದು, ಅವರ ಸಂಪರ್ಕದಿಂದ 48 ಮಂದಿಗೆ (ದ್ವಿತೀಯ ಹಂತ) ಸೋಂಕು ಹರಡಿದೆ. ಈ ಪೈಕಿ, ನಾಲ್ವರು ಗುಣಮುಖರಾಗಿದ್ದಾರೆ. 50ರಷ್ಟು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ 300 ಮಂದಿಯ ಗಂಟಲು ದ್ರವ ತಪಾಸಣೆ ವರದಿ ಬರಬೇಕಿದೆ.

‘ಮಾರ್ಚ್‌ ತಿಂಗಳಲ್ಲಿ ದುಬೈಯಿಂದ ಬಂದವರಲ್ಲಿ ಸೋಂಕು ಪತ್ತೆಯಾಗಿತ್ತು. ಅವರ ಸಂಪರ್ಕದಿಂದ ಸೋಂಕು ತಗಲಿಸಿಕೊಂಡ ಪ್ರಕರಣ ಕಡಿಮೆ ಇತ್ತು. ಆದರೆ, ಏಪ್ರಿಲ್‌ನಲ್ಲಿ ಈ ಚಿತ್ರಣ ಬದಲಾಗಿದೆ. ಈವರೆಗೂ ಸಮುದಾಯಕ್ಕೆ (ಮೂರನೇ ಹಂತ) ಹರಡಿದ ಯಾವುದೇ ಪ್ರಕರಣ ದೃಢಪಟ್ಟಿಲ್ಲ. ನಮ್ಮಲ್ಲಿ ಚಿಕಿತ್ಸೆ ನೀಡಲು ಅಗತ್ಯವಾದ ಕನಿಷ್ಠ ಸೌಲಭ್ಯಗಳಿವೆ. ವೆಂಟಿಲೇಟರ್‌ ಅಳವಡಿಸಬೇಕಾದ ಸ್ಥಿತಿಗೆ ಯಾವುದೇ ಸೋಂಕಿತರು ತಲುಪಿಲ್ಲ. ಜನರಲ್ಲಿ ಭೀತಿ ಇದೆ. ಹೀಗಾಗಿ, ರೋಗದ ಲಕ್ಷಣ ಇರುವವರು ತಾವಾಗಿಯೇ ಗಂಟಲು ದ್ರವ ತಪಾಸಣೆಗೆ ಮುಂದಾಗುತ್ತಿದ್ದಾರೆ ಎಂದು ಹಿರಿಯ ವೈದ್ಯಾಧಿಕಾರಿ ಮಾಹಿತಿ ನೀಡಿದರು.

9 ಜೀವ ಬಲಿ!

ಕೇರಳ– ಕರ್ನಾಟಕ ಗಡಿ ದಿಗ್ಬಂಧನದಿಂದ ಮಂಗಳೂರಿಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಲಾಗದೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಕಾಸರಗೋಡಿನಲ್ಲಿರುವ ಹೃದ್ರೋಗಿಗಳು, ಡಯಾಲಿಸಿಸ್‌, ಕ್ಯಾನ್ಸರ್‌ ಪೀಡಿತರು ಸೇರಿದಂತೆ ಶೇ 75ರಷ್ಟು ರೋಗಿಗಳು ಮಂಗಳೂರಿನ ಆಸ್ಪತ್ರೆಗಳನ್ನುಆಶ್ರಯಿಸಿದ್ದಾರೆ. ಆದರೆ, ಸೋಂಕು ಹರಡುವಿಕೆ ನಿಯಂತ್ರಣ ದೃಷ್ಟಿಯಿಂದ ದಿಗ್ಬಂಧನ ಸರಿಯಾದ ನಿರ್ಧಾರ ಎನ್ನುತ್ತಾರೆ ಕಾಸರಗೋಡಿನ ವೈದ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT