ಗುರುವಾರ , ಫೆಬ್ರವರಿ 27, 2020
19 °C
ಮಂತ್ರಿ ಸ್ಥಾನ ಕೊಡದಿದ್ದರೆ ನಂಬಿಕೆ ದ್ರೋಹ: ಕುಮಠಳ್ಳಿ

ಮಂತ್ರಿಮಂಡಲ ವಿಸ್ತರಣೆ| ಸಚಿವಗಿರಿಗೆ ಲಾಬಿ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರು ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಆಕಾಂಕ್ಷಿಗಳು ಲಾಬಿ ಆರಂಭಿಸಿದ್ದರೆ, ಅವಕಾಶ ಕೈತಪ್ಪಲಿದೆ ಎಂಬ ಮಾಹಿತಿ ಸಿಕ್ಕಿರುವ ಶಾಸಕರು ಅಸಮಾಧಾನ ವ್ಯಕ್ತಪಡಿಸಲು ಶುರು ಮಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು 11 ‘ಅರ್ಹ’ ಶಾಸಕರ ಜತೆ ಶನಿವಾರ ಚರ್ಚೆ ನಡೆಸಿ, ಕೆಲವರ ಮನವೊಲಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸಚಿವಾಕಾಂಕ್ಷಿಗಳು ಪಟ್ಟು ಬಿಗಿಗೊಳಿಸುತ್ತಿರುವುದು ಯಡಿಯೂರಪ್ಪ ಅವರನ್ನು ಇಕ್ಕಟ್ಟು ಸೃಷ್ಟಿಸಿದ್ದು, ಚರ್ಚೆಯನ್ನು ಮುಂದೂಡಲಾಯಿತು ಎಂದು ಮೂಲಗಳು ಹೇಳಿವೆ.

ಬಿಜೆಪಿ ಸೇರಿ ಶಾಸಕರಾಗಿರುವ ಮಹೇಶ ಕುಮಠಳ್ಳಿ, ‘ನನಗೆ ಸಚಿವ ಸ್ಥಾನ ನೀಡದೇ ಇದ್ದರೆ, ನಂಬಿಕೆ ದ್ರೋಹ ಮಾಡಿದಂತೆ ಆಗುತ್ತದೆ. ಯಡಿಯೂರಪ್ಪ ಅವರು ಪ್ರಾಣ ಬೇಕಾದರೂ ಬಿಡಬಹುದು. ಆದರೆ ಕೊಟ್ಟ ಮಾತಿಗೆ ತಪ್ಪುವವರಲ್ಲ ಎಂಬ ಮಾತು ಇದೆ. ಸಾವಿರಾರು ಜನರ ಮುಂದೆ ನನ್ನನ್ನು ಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದರು’ ಎಂದು ಹೇಳಿದ್ದಾರೆ.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಮುರುಗೇಶ ನಿರಾಣಿ, ಜಿ.ಎಚ್‌.ತಿಪ್ಪಾರೆಡ್ಡಿ, ನೆಹರೂ ಓಲೆಕಾರ್‌ ಮತ್ತಿತರರು ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿಯ ಮೇಲೆ ಒತ್ತಡ ಹಾಕಲು ಆರಂಭಿಸಿದ್ದಾರೆ. ಕರಾವಳಿ ಭಾಗದ ಕೆಲವು ಶಾಸಕರು ಸಂಘಪರಿವಾರದ ನಾಯಕರಲ್ಲಿ ಸಚಿವ ಸ್ಥಾನದ ಆಕಾಂಕ್ಷೆಯನ್ನು ತೋಡಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸಿಎಂ ಕರೆ ಇನ್ನೂ ಬಂದಿಲ್ಲ: ‘ಸಂಪುಟ ವಿಸ್ತರಣೆಗೆ ಯಾವ ದಿನಾಂಕ ನಿಗದಿ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಮುಖ್ಯಮಂತ್ರಿಯವರು ನಮಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ಅವರ ಕರೆಯ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು  ಶಾಸಕ ಎಸ್‌.ಟಿ.ಸೋಮಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು