ಬುಧವಾರ, ಸೆಪ್ಟೆಂಬರ್ 29, 2021
21 °C
ಕೊಳವೆ ಬಾವಿ: ಜೂನ್‌ 15ರವರೆಗೆ ಟೆಂಡರ್‌ ಪ್ರಕ್ರಿಯೆಯಿಂದ ವಿನಾಯಿತಿ

ಟ್ಯಾಂಕರ್ ನೀರು: ತಹಶೀಲ್ದಾರ್‌ಗೆ ಅಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬರ ಪೀಡಿತ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಅನುಮತಿ ಕೊಡುವ ಅಧಿಕಾರವನ್ನು ತಹಶೀಲ್ದಾರ್‌ಗಳಿಗೆ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯ ಬಳಿಕ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ‘ಕುಡಿಯುವ ನೀರು ಪೂರೈಸುವ ಟ್ಯಾಂಕರ್‌ಗಳಿಗೆ ಜಿಲ್ಲಾಧಿಕಾರಿಗಳು ನೀಡಬೇಕಾಗಿದ್ದ ಅನುಮತಿ ಅಧಿಕಾರವನ್ನು ಈಗ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ. ನೀರಿನ ಕೊರತೆ ಕಂಡುಬಂದರೆ ಎರಡು ದಿನದೊಳಗೆ ಟ್ಯಾಂಕರ್ ಮೂಲಕ ಪೂರೈಸಲಾಗುವುದು’ ಎಂದರು.

‘ಕಂದಾಯ ಇಲಾಖೆಯಿಂದ ಕುಡಿಯುವ ನೀರಿಗಾಗಿ ₹ 324 ಕೋಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಿಂದ ₹ 201 ಕೋಟಿ ಮೀಸಲಿಡಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಗಳಲ್ಲಿ ₹ 727 ಕೋಟಿ ಲಭ್ಯವಿದೆ. ಏಪ್ರಿಲ್‌ 1ರಿಂದ ಟೆಂಡರ್‌ ಕರೆದು ಕೊಳವೆಬಾವಿ ಕೊರೆಯಬೇಕು ಎಂದು ಆರ್ಥಿಕ ಇಲಾಖೆ ಹೊರಡಿಸಿದ್ದ ಆದೇಶಕ್ಕೆ ಜೂನ್‌ 15ರ ವರೆಗೆ ವಿನಾಯಿತಿ ನೀಡಲಾಗಿದೆ. ಬರಪೀಡಿತ ತಾಲ್ಲೂಕುಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಮತ್ತು ಅಗತ್ಯ ಪ್ರಮಾಣದ ನೀರು ಪೂರೈಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

‘ವಾರ್ಷಿಕ ₹ 2,600 ಕೋಟಿ ಕುಡಿಯುವ ನೀರಿನ ಯೋಜನಾ ವೆಚ್ಚ ಹೊರತುಪಡಿಸಿ ಹೆಚ್ಚುವರಿಯಾಗಿ ಈ ಬಾರಿ ₹ 201 ಕೋಟಿ ನೀಡಲಾಗಿದೆ. ಕಳೆದ ವರ್ಷ ಕುಡಿಯುವ ನೀರಿಗಾಗಿ ₹ 2,800 ಕೋಟಿ ವೆಚ್ಚ ಮಾಡಲಾಗಿತ್ತು. ಈ ವರ್ಷ ₹ 3,600 ಕೋಟಿಯ ಕ್ರಿಯಾ ಯೋಜನೆ ರೂಪಿಸಲಾಗಿದೆ’ ಎಂದು ಸಚಿವರು ವಿವರಿಸಿದರು.

‘ಜಾನುವಾರುಗಳಿಗಾಗಿ 150 ಮೇವಿನ ಬ್ಯಾಂಕ್ ತೆರೆಯಲಾಗಿದೆ. ಪ್ರತಿ ಕೆ.ಜಿಗೆ ₹ 2ರಂತೆ ರೈತರಿಗೆ ಮೇವು ವಿತರಿಸಲಾಗುತ್ತಿದೆ. 12 ಗೋಶಾಲೆಗಳಲ್ಲಿ 11,614 ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ. 16,080 ಮೇವಿನ ಕಿಟ್‍ ವಿತರಿಸಲಾಗಿದೆ’ ಎಂದರು.

ಕೇಂದ್ರದಿಂದ ₹ 1,697 ಕೋಟಿ ಬಾಕಿ: ‘ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಕೇಂದ್ರ ಸರ್ಕಾರದಿಂದ ₹ 1,697 ಕೋಟಿ ಪಾವತಿ ಬಾಕಿ ಉಳಿದಿದೆ. 15 ದಿನದೊಳಗಾಗಿ ಹಣ ಪಾವತಿಸಬೇಕು ಎಂಬ ಕಾಯ್ದೆ ಇದ್ದರೂ, 3–4 ತಿಂಗಳಿನಿಂದ ಹಣ ಬಿಡುಗಡೆ ಆಗಿಲ್ಲ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಕೂಲಿ ಹಣವನ್ನು ಫಲಾನುಭವಿಗಳಿಗೆ ಪಾವತಿಸಲು ಕ್ರಮಕೈಗೊಂಡಿದ್ದರೂ, ಕೇಂದ್ರ ಹಣ ಮರು ಪಾವತಿ ಮಾಡುತ್ತಿಲ್ಲ’ ಎಂದು ಕೃಷ್ಣ ಬೈರೇಗೌಡ ಆರೋಪಿಸಿದರು.

ಸಂಪುಟ ಸಭೆ ಅತೃಪ್ತಿ: ಮುಂಗಾರು ಹಂಗಾಮಿನ ಬರ ಪರಿಹಾರದ ನೆರವಿಗೆ ಕೇಂದ್ರ ಸರ್ಕಾರ ₹ 949 ಕೋಟಿ ಮಂಜೂರು ಮಾಡಿದ್ದು, ₹ 439 ಕೋಟಿ ಬಿಡುಗಡೆ ಮಾಡಿದೆ. ಆದರೆ, ಮಹಾರಾಷ್ಟ್ರಕ್ಕೆ ₹ 4,700 ಕೋಟಿ ಬಿಡುಗಡೆ ಮಾಡಿತ್ತು. ಈ ಬಗ್ಗೆ ಸಂಪುಟ ಸಭೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.

‘ಹಿಂಗಾರು ಹಂಗಾಮಿನಲ್ಲಿ ಕೇಂದ್ರದ ಮಾನದಂಡದ ಪ್ರಕಾರ ₹ 2064 ಕೋಟಿ ಬರ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಈವರೆಗೂ ಕೇಂದ್ರದಿಂದ ಪರಿಹಾರ ಘೋಷಣೆಯಾಗಿಲ್ಲ. ಆದರೂ ಬಿಜೆಪಿ ಮುಖಂಡರು ರಾಜಕೀಯಕ್ಕಾಗಿ ಬರ ವಿಚಾರವನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಸಚಿವರು ಟೀಕಿಸಿದರು.

ನರೇಗಾದಲ್ಲಿ ಸಾರ್ವಕಾಲಿಕ ದಾಖಲೆ

ತೀವ್ರ ಬರದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ (ನರೇಗಾ) ಮಾರ್ಚ್ ಅಂತ್ಯದವರೆಗೂ 8.5 ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿತ್ತು. ಆದರೆ, 10.47 ಕೋಟಿ ಸೃಜಿಸಲಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಯೋಜನೆಗೆ ₹ 4,600 ಕೋಟಿ ವ್ಯಯವಾಗಿದೆ. ಈ ಯೋಜನೆಯಡಿ ಈ ಹಿಂದೆ ಅತೀ ಹೆಚ್ಚು 9.18 ಕೋಟಿ ಮಾನವ ದಿನಗಳನ್ನು 2015–16ರಲ್ಲಿ ಸೃಜಿಸಲಾಗಿತ್ತು ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಚಿನ್ನದ ರಥ: ₹ 80 ಕೋಟಿಗೆ ಒಪ್ಪಿಗೆ

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿನ್ನದ ರಥ ನಿರ್ಮಾಣ ಕಾಮಗಾರಿಯ ₹ 80 ಕೋಟಿಯ ಅಂದಾಜು ಪಟ್ಟಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ದೇವಾಲಯಕ್ಕೆ 240 ಕೆ.ಜಿ ಚಿನ್ನದಿಂದ ₹ 15 ಕೋಟಿ ಅಂದಾಜು ವೆಚ್ಚದಲ್ಲಿ ರಥ ನಿರ್ಮಿಸಿ, ಅರ್ಪಿಸುವ ಯೋಜನೆಗೆ ಸರ್ಕಾರ 2005ರ ಆಗಸ್ಟ್‌ ತಿಂಗಳಲ್ಲೇ ಅನುಮೋದನೆ ನೀಡಿತ್ತು. ಬಳಿಕ ಈ ಯೋಜನೆ ನನೆಗುದಿಗೆ ಬಿದ್ದಿತ್ತು.

ದೇವಸ್ಥಾನದ ಭಕ್ತರು ಇತ್ತೀಚೆಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಹಿಂದಿನ ಸರ್ಕಾರಿ ಆದೇಶಗಳನ್ನು ಹಾಜರುಪಡಿಸಿ, ಯೋಜನೆಗೆ ಮತ್ತೆ ಚಾಲನೆ ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ, ಈಗಿನ ಮಾರುಕಟ್ಟೆ ದರದಲ್ಲಿ ಚಿನ್ನದ ದರ, ನಿರ್ಮಾಣ ವೆಚ್ಚ ಎಲ್ಲ ಅಂದಾಜುಗಳನ್ನೂ ಪರಿಷ್ಕರಿಸಿ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಂಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದರು.

ಬೆಂಗಾವಲು ವಾಹನಗಳಿಗೆ ತಡೆ ಸಚಿವರು ಗರಂ

ಸಚಿವರ ಬೆಂಗಾವಲು ವಾಹನಗಳಿಗೆ ಚುನಾವಣಾ ಆಯೋಗ ಅನುಮತಿ ನೀಡದಿರುವ ವಿಷಯ ಸಂಪುಟ ಸಭೆಯಲ್ಲಿ ಪ್ರಸ್ತಾವಗೊಂಡು, ಕೆಲಹೊತ್ತು ಗಂಭೀರ ಚರ್ಚೆಗೆ ಗ್ರಾಸವಾಯಿತು.

ಸಚಿವರು ಪ್ರಯಾಣಿಸುವ ವಾಹನದ ಹಿಂದೆ ಮತ್ತು ಮುಂದೆ ಎಸ್ಕಾರ್ಟ್‌ ವಾಹನಗಳು ಸಂಚರಿಸುತ್ತವೆ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ವಾಹನಗಳ ಸಂಚಾರಕ್ಕೆ ಅವಕಾಶ ಇಲ್ಲ. ಇದು ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ.

***

* 2,575 - ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳು

* 1,324 - ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುವ ಗ್ರಾಮಗಳು

* 1,251 - ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸುವ ಗ್ರಾಮಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು