ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳ ಹಿಡಿದ ಸ್ವಚ್ಛ ಭಾರತ

ಕಸ ನಿರ್ವಹಣೆ: ಡಿಪಿಆರ್‌ನಲ್ಲೇ ದೋಷ * ತ್ಯಾಜ್ಯದ ಪ್ರಮಾಣ ಅಂದಾಜಿಸುವ ವಿಧಾನದಲ್ಲೇ ಲೋಪ– ಸಿಎಜಿ ವರದಿ ವಿಶ್ಲೇಷಣೆ
Last Updated 17 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಳಗಾವಿ: ಬಹುತೇಕ ನಗರ ಸ್ಥಳೀಯ ಸಂಸ್ಥೆಗಳು ಕಸ ನಿರ್ವಹಣೆ ಸಲುವಾಗಿ ಸಿದ್ಧಪಡಿಸಿದ ಸಮಗ್ರ ಯೋಜನಾ ವರದಿ
ಗಳೇ (ಡಿಪಿಆರ್‌) ದೋಷದಿಂದ ಕೂಡಿದ್ದರಿಂದ ರಾಜ್ಯದಲ್ಲಿ ಸ್ವಚ್ಛ ಭಾರತಯೋಜನೆ ಆರಂಭದಲ್ಲೇ ಹಳ್ಳ ಹಿಡಿದಿದೆ.

ಮಹಾಲೇಖಪಾಲರು ನಗರ ಸ್ಥಳೀಯ ಸಂಸ್ಥೆಗಳಲ್ಲಿ 2012-13ರಿಂದ 2016–17ರ ನಡುವೆ ಕಸ ನಿರ್ವಹಣೆ ಕುರಿತು ಸಿದ್ಧಪಡಿಸಿದ್ದ ವರದಿಯು ಡಿಪಿಆರ್ ದೋಷಗಳ ಬಗ್ಗೆ ಬಿಚ್ಚಿಟ್ಟಿದೆ.

35 ನಗರ ಸ್ಥಳೀಯ ಸಂಸ್ಥೆಗಳು, ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾ ನಗರಾಭಿವೃದ್ಧಿ ಕೋಶಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ಅದರ ಕ್ಷೇತ್ರೀಯ ಕಚೇರಿಗಳ ದಾಖಲೆಗಳ ಆಧಾರದಲ್ಲಿ ಮಹಾಲೇಖಪಾಲರು ಸಿದ್ಧಪಡಿಸಿದ್ದ ಈ ವರದಿಯನ್ನು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾಯಿತು.

ಕೇಂದ್ರ ಸರ್ಕಾರ 2014ರಲ್ಲಿ ಆರಂಭಿಸಿದ ಸ್ವಚ್ಛ ಭಾರತ ಅಭಿಯಾನದನ್ವಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಡಿಪಿಆರ್‌ ಸಿದ್ಧಪಡಿಸಬೇಕಿತ್ತು. 2018ರ ಮಾರ್ಚ್‌ ವೇಳೆಗೆ 281 ನಗರ ಸ್ಥಳೀಯ ಸಂಸ್ಥೆಗಳ ಪೈಕಿ (ಬಿಬಿಎಂಪಿ ಹೊರತುಪಡಿಸಿ) 223 ಸಂಸ್ಥೆಗಳು ಮಾತ್ರ ಸಿದ್ಧಪಡಿಸಿವೆ. 30 ನಗರ ಸ್ಥಳೀಯ ಸಂಸ್ಥೆಗಳು ಡಿಪಿಆರ್‌ ಸಿದ್ಧಪಡಿಸುವಾಗ ಸೂಕ್ತ ವಿಧಾನ ಅನುಸರಿಸಿಲ್ಲ. ಕೆಲವು ಪುರಸಭೆಗಳು ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳನ್ನೇ ತಯಾರಿಸಿಲ್ಲ.

ಕಸದ ತಪ್ಪು ಅಂದಾಜು: ಕಸ ಸಂಗ್ರಹಣೆಯಾಗುವ ಪ್ರಮಾಣವನ್ನೂ ಸಂಸ್ಥೆಗಳು ತಪ್ಪು ಅಂದಾಜು ಮಾಡಿವೆ. 30 ಡಿಪಿಆರ್‌
ಗಳಲ್ಲಿ 21ರಲ್ಲಿ ಭೂಭರ್ತಿ ನಿವೇಶನಗಳಲ್ಲಿ ರಾಶಿ ಹಾಕಿರುವ ಸಂಸ್ಕರಿಸದ ಕಸದ ಪ್ರಮಾಣವನ್ನು ಪರಿಣಿಸಲಾಗಿಲ್ಲ. ಪೂಜಾ ಸ್ಥಳ ಹಾಗೂ ಕೈಗಾರಿಕಾ ಕಟ್ಟಡಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನೂ ಅಂದಾಜು ಮಾಡಿಲ್ಲ.

ಅಧಿಕ ಮೊತ್ತ ಪಾವತಿ: ಸೇವೆ ಒದಗಿಸುವ ಸಂಸ್ಥೆಗಳ ಜೊತೆ ಕೆಲವು ನಗರ ಸ್ಥಳೀಯ ಸಂಸ್ಥೆಗಳು ಮಾಡಿಕೊಂಡಿದ್ದ ಒಪ್ಪಂದಗಳೂ ದೋಷಪೂರಿತವಾಗಿವೆ. ತುಮಕೂರು ಮಹಾನಗರ ಪಾಲಿಕೆ 2015–17ರ ಅವಧಿಯಲ್ಲಿ ವಿದ್ಯುತ್‌ ಶುಲ್ಕ ಕಡಿತಗೊಳಿಸುವುದನ್ನು ಲೆಕ್ಕ ಹಾಕುವಾಗ ತಪ್ಪೆಸಗಿದ್ದರಿಂದ ₹40.86 ಲಕ್ಷ ಹೆಚ್ಚುವರಿ ಪಾವತಿ ಮಾಡಿದೆ

ಬಳಕೆಯಾಗದ ₹ 93 ಕೋಟಿ: ಕೇಂದ್ರ ಮತ್ತು ರಾಜ್ಯ ಹಣಕಾಸು ನಿಧಿಗಳ ಅಡಿ ಕಸ ನಿರ್ವಹಣೆ ಮೂಲಸೌಕರ್ಯಕ್ಕೆ ಒದಗಿಸಿದ್ದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. 2017ರ ಮಾರ್ಚ್‌ ಅಂತ್ಯಕ್ಕೆ ₹93.19 ಕೋಟಿ ಬಳಕೆ ಆಗದೇ ಉಳಿದಿತ್ತು.

ಕಸ ನಿರ್ವಹಣೆ ಸೆಸ್‌: ಲೆಕ್ಕ ವ್ಯತ್ಯಾಸ

11 ನಗರ ಸ್ಥಳೀಯ ಸಂಸ್ಥೆಗಳು ಕಸ ನಿರ್ವಹಣಾ ಸೆಸ್‌ ವಿಧಿಸುತ್ತಿಲ್ಲ. ಇನ್ನು ಕೆಲವು ಸಂಸ್ಥೆಗಳು ಸಾರ್ವಜನಿಕ ಪ್ರಾರ್ಥನಾ ಮಂದಿರಗಳು, ಸ್ಥಳೀಯ ಸಂಸ್ಥೆಗಳ ಒಡೆತನದ ಕಟ್ಟಡಗಳು ಮತ್ತು ಮಳಿಗೆಗಳ ಬಾಡಿಗೆದಾರರಿಂದ ಈ ಸೆಸ್‌ ಸಂಗ್ರಹಿಸುತ್ತಿಲ್ಲ. 2012–17ರ ನಡುವೆ ಒಟ್ಟು ₹ 3.07 ಕೋಟಿ ನಷ್ಟ ಉಂಟಾಗಿದೆ. ಆರು ನಗರ ಸ್ಥಳೀಯ ಸಂಸ್ಥೆಗಳು ತಪ್ಪು ಅಂದಾಜಿನಿಂದಾಗಿ₹ 5.41 ಕೋಟಿಯನ್ನು ಕಳೆದುಕೊಂಡಿವೆ. ಹುಬ್ಬಳ್ಳಿ–ಧಾರವಾಡ ಪಾಲಿಕೆ₹ 5.11 ಕೋಟಿಯಷ್ಟು ಕಡಿಮೆ ಅಂದಾಜು ಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶೇ 26ರಷ್ಟು ತ್ಯಾಜ್ಯ ಮಾತ್ರ ಸಂಸ್ಕರಣೆ

ರಾಜ್ಯದ ನಗರಾಡಳಿತ ಸಂಸ್ಥೆಗಳಲ್ಲಿ ಶೇ 26ರಷ್ಟು ತ್ಯಾಜ್ಯ ಮಾತ್ರ ಸಂಸ್ಕರಣೆಯಾಗುತ್ತಿದೆ. ಮೂಲಸೌಕರ್ಯ ಕೊರತೆ ಹಾಗೂ ಲಭ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಬಳಸದಿರುವುದೇ ಇದಕ್ಕೆ ಕಾರಣ ಎಂದು ವರದಿ ಅಭಿಪ್ರಾಯಪಟ್ಟಿದೆ.

32 ಸಂಸ್ಥೆಗಳಲ್ಲಿ ಮೂಲದಲ್ಲೇ ಹಸಿ ಮತ್ತು ಒಣ ಕಸವನ್ನು ವಿಂಗಡಣೆ ಮಾಡುವ ಪ್ರಕ್ರಿಯೆಯೂ ಸರಿಯಾಗಿ ನಡೆಯುತ್ತಿಲ್ಲ. ವಾರ್ಡ್‌ವಾರು ತ್ಯಾಜ್ಯ ಸಂಗ್ರಹಣೆ ವಿಧಾನವನ್ನೂ ಅನೇಕ ಸಂಸ್ಥೆಗಳು ಅನುಸರಿಸುತ್ತಿಲ್ಲ. ನಿತ್ಯ ಬೀದಿ ಕಸವನ್ನು ಗುಡಿಸುವ ಕಾರ್ಯವೂ ಸರಿಯಾಗಿ ನಡೆಯುತ್ತಿಲ್ಲ. ಮನೆಗಳ ಕಸವನ್ನು ಬೀದಿ ಬದಿ ರಾಶಿ ಹಾಕಲಾಗುತ್ತಿದೆ. ಇದು ಬೀದಿ ಬದಿ ಪ್ರಾಣಿಗಳ ಹಾವಳಿ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಕಸವನ್ನು ಮುಚ್ಚಿದ ವಾಹನದಲ್ಲೇ ಸಾಗಿಸಬೇಕು ಎಂಬ ನಿಯಮ ಇದ್ದರೂ ಪಾಲನೆ ಆಗುತ್ತಿಲ್ಲ. ಭೂಭರ್ತಿ ನಿವೇಶನಗಳನ್ನು ಆಯ್ಕೆ ಮಾಡುವಾಗಲೂ ಪರಿಸರ ಸಂರಕ್ಷಣೆಯ ಮಾನದಂಡಗಳನ್ನು ಅನುಸರಿಸಿಲ್ಲ. ಕಟ್ಟಡ ತ್ಯಾಜ್ಯ ವಿಲೇವಾರಿಗೆ 32 ಸಂಸ್ಥೆಗಳು ನಿವೇಶವನ್ನೇ ಗುರುತಿಸಿಲ್ಲ ಎಂಬ ಬಗ್ಗೆಯೂ ವರದಿ ಬೆಳಕು ಚೆಲ್ಲಿದೆ.

ನಿಷೇಧದ ಬಳಿಕವೂ ಕಡಿಮೆಯಾಗಿಲ್ಲ ಪ್ಲಾಸ್ಟಿಕ್‌ ಬಳಕೆ

ಪ್ಲಾಸ್ಟಿಕ್‌ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಗರ ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ. ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡ ಬಳಿಕ ಆ ಸರಕನ್ನು ವಿಲೇ ಮಾಡುವಲ್ಲಿ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ. ರಸ್ತೆಗಳ ಡಾಂಬರೀಕರಣಕ್ಕೆ ಇವುಗಳ ಮರುಬಳಕೆ ಮಾಡಲು ಹಾಗೂ ಇದರಿಂದ ಇಂಧನ ಉತ್ಪಾದಿಸಲು ಅವಕಾಶ ಇದೆ. ಯಾವ ಸಂಸ್ಥೆಯೂ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

37 ಜಾನುವಾರು ಸಾವು: ಪ್ಲಾಸ್ಟಿಕ್‌ ತಿಂದು ಜಾನುವಾರುಗಳು ಅನಾರೋಗ್ಯದಿಂದ ಬಳಲುವ ಪ್ರಕರಣಗಳೂ ಹೆಚ್ಚುತ್ತಿವೆ. ಪ್ರಾಣಿಗಳ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್‌ ಸಂಗ್ರಹಗೊಂಡು ಅವುಗಳಿಗೆನಿಶ್ಶಕ್ತಿ, ಅಜೀರ್ಣ, ಸಂತಾನ ಶಕ್ತಿ ಕ್ಷೀಣವಾಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಐದು ವರ್ಷಗಳಲ್ಲಿ 37 ಜಾನುವಾರುಗಳು ಈ ಕಾರಣದಿಂದ ಸತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT