ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯವರ್ತಿಗಳ ಕಿರುಕುಳ ತಪ್ಪಿಸಲು ಮನವಿ

Last Updated 6 ಫೆಬ್ರುವರಿ 2018, 6:23 IST
ಅಕ್ಷರ ಗಾತ್ರ

ಮೈಸೂರು: ಸಾಲ, ಬೇಬಾಕಿ ಪ್ರಮಾಣಪತ್ರ (ಎನ್‌ಡಿಸಿ) ಪಡೆಯಲು ಮಧ್ಯವರ್ತಿಗಳು ನೀಡುತ್ತಿರುವ ಕಿರುಕುಳ ತಪ್ಪಿಸುವಂತೆ ಹಾಗೂ ರಾತ್ರಿ ಗಸ್ತು ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವಂತೆ ಬ್ಯಾಂಕ್‌ ಅಧಿಕಾರಿಗಳು ಪೊಲೀಸರನ್ನು ಕೋರಿದರು.

ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್‌ಪಿ ರವಿ ಡಿ.ಚನ್ನಣ್ಣನವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಬ್ಯಾಂಕ್‌ ವ್ಯವಸ್ಥಾಪಕರು ಹಲವು ಸಮಸ್ಯೆಗಳನ್ನು ಬಿಚ್ಚಿಟ್ಟರು.

ಬ್ಯಾಂಕ್‌ ಶಾಖೆ ಹಾಗೂ ಎಟಿಎಂಗಳಲ್ಲಿ ಕೈಗೊಂಡಿರುವ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಿದರು. ಉದ್ಬೂರು, ಹಂಪಾಪುರ, ಹೊಮ್ಮರಗಳ್ಳಿ ಸೇರಿ ಗ್ರಾಮೀಣ ಪ್ರದೇಶದ ಶಾಖೆಗಳ ಭದ್ರತೆಯ ದೃಷ್ಟಿಯಿಂದ ರಾತ್ರಿ ಗಸ್ತಿಗೆ ಪೊಲೀಸರನ್ನು ನಿಯೋಜಿಸುವಂತೆ ಮನವಿ ಮಾಡಿದರು.

ವ್ಯವಸ್ಥಾಪಕರಿಗೆ ಬ್ಲ್ಯಾಕ್‌ಮೇಲ್‌:

‘₹ 25 ಲಕ್ಷ ಸುಸ್ತಿ ಹೊಂದಿರುವವರೂ ಸಾಲಕ್ಕೆ ಮತ್ತೆ ಅರ್ಜಿ ಹಾಕುತ್ತಾರೆ. ಬೇರೊಬ್ಬರ ಹೆಸರಿಗೆ ಸಾಲ ನೀಡುವಂತೆ ತಾಕೀತು ಮಾಡುತ್ತಾರೆ. ಇದಕ್ಕೆ ಒಪ್ಪದೆ ಇದ್ದರೆ ಬ್ಯಾಂಕ್‌ ಎದುರು ಧರಣಿ ಕೂರುವುದಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಾರೆ. ಆರ್‌ಬಿಐ ಒಂಬಡ್ಸ್‌ಮನ್‌, ಪ್ರಧಾನಿ, ಮುಖ್ಯಮಂತ್ರಿಗೂ ಪತ್ರ ಬರೆದು ಒತ್ತಡ ಹೇರುತ್ತಾರೆ’ ಎಂದು ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿಯ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ವ್ಯವಸ್ಥಾಪಕ ಶ್ರೀರಾಮಯ್ಯ ಆತಂಕ ತೋಡಿಕೊಂಡರು.

‘ಸಾಲ ಮರುಪಾವತಿಗೆ ಬರೆದ ಪತ್ರದೊಂದಿಗೆ ಶಾಖೆಗೆ ಬರುವ ಸುಸ್ತಿದಾರರು ಬ್ಯಾಂಕ್‌ ಸಿಬ್ಬಂದಿಯ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಾರೆ. ಸಾಲ ನೀಡಲು ಹಿಂದೇಟು ಹಾಕಿದರೆ ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸುತ್ತಾರೆ. ಶಿಥಿಲಾವಸ್ಥೆಯಲ್ಲಿರುವ ಶಾಖೆಯ ಕಟ್ಟಡ ಬದಲಾವಣೆಗೂ ಅವಕಾಶ ನೀಡುತ್ತಿಲ್ಲ’ ಎಂದರು.

ಇದಕ್ಕೆ ತಿ.ನರಸೀಪುರ ತಾಲ್ಲೂಕಿನ ಬ್ಯಾಂಕುಗಳ ವ್ಯವಸ್ಥಾಪಕರೂ ದನಿಗೂಡಿಸಿದರು. ಬೇಬಾಕಿ ಪ್ರಮಾಣಪತ್ರ (ಎನ್‌ಡಿಸಿ), ಸ್ತ್ರೀಶಕ್ತಿ ಸಂಘಗಳಿಗೆ ಸಾಲ ಹಂಚಿಕೆ ವಿಚಾರದಲ್ಲಿಯೂ ಮಧ್ಯವರ್ತಿಗಳು ಹೇರುವ ಒತ್ತಡವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ದೂರು ದಾಖಲಿಸಲು ಸೂಚನೆ: ನಿಯಮ ಮೀರಿ ಸಾಲ ನೀಡುವಂತೆ ಒತ್ತಡ ಹೇರುವ ಹಾಗೂ ಸಾರ್ವಜನಿಕರ ದಿಕ್ಕು ತಪ್ಪಿಸಲು ಯತ್ನಿಸುವ ಮಧ್ಯವರ್ತಿಗಳ ವಿರುದ್ಧ ಸಮೀಪದ ಠಾಣೆಗೆ ದೂರು ನೀಡುವಂತೆ ಎಸ್‌ಪಿ ರವಿ ಡಿ.ಚನ್ನಣ್ಣನವರ ಸೂಚಿಸಿದರು.

‘ಸಾಲ ಹಾಗೂ ಮರುಪಾವತಿ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ. ಸ್ತ್ರೀಶಕ್ತಿ ಸಂಘ ಹಾಗೂ ರೈತರನ್ನು ಕರೆದು ಸಭೆ ನಡೆಸಿ ಅರಿವು ಮೂಡಿಸಿ. ಸಾಲ ಪಡೆಯಲು ಮಧ್ಯವರ್ತಿಗಳನ್ನು ಕರೆತರದಂತೆ ಸೂಚಿಸಿ. ಆ ಬಳಿಕವೂ ಕಿರುಕುಳ ಮುಂದುವರಿದರೆ ಲಿಖಿತ ದೂರು ದಾಖಲಿಸಿ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ’ ಎಂದು ಆಶ್ವಾಸನೆ ನೀಡಿದರು.

‘ಬ್ಯಾಂಕ್‌ ಭದ್ರತೆಯ ಹೊಣೆ ಅಧಿಕಾರಿಗಳ ಮೇಲೂ ಇದೆ. ಶಾಖೆ ಹಾಗೂ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದು ಕಡ್ಡಾಯ. ಲಾಕರ್‌ ವ್ಯವಸ್ಥೆ ಹೊಂದಿದ ಶಾಖೆಯಲ್ಲಿ ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ ಇರುತ್ತದೆ. ಇದು ಕಳವಾದರೆ ನಿರ್ಲಕ್ಷ್ಯ ತೋರಿದ ಆರೋಪದಡಿ ಬ್ಯಾಂಕ್‌ ವ್ಯವಸ್ಥಾಪಕರ ವಿರುದ್ಧವೂ ಪ್ರಕರಣ ದಾಖಲಿಸಲು ಅವಕಾಶವಿದೆ’ ಎಂದು ಮನವರಿಕೆ ಮಾಡಿಕೊಟ್ಟರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ರುದ್ರಮುನಿ ಇದ್ದರು.

ಗೃಹರಕ್ಷಕ ದಳ ಸೂಕ್ತ

ಬ್ಯಾಂಕ್‌ ಹಾಗೂ ಎಟಿಎಂ ಭದ್ರತೆಗೆ ಖಾಸಗಿ ಭದ್ರತಾ ಏಜೆನ್ಸಿ (ಸೆಕ್ಯುರಿಟಿ ಏಜೆನ್ಸಿ) ನೆರವು ಪಡೆಯುವುದಕ್ಕಿಂತ ಗೃಹರಕ್ಷಕ ದಳದ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದು ಉತ್ತಮ ಎಂದು ಎಸ್‌ಪಿ ರವಿ ಅಭಿಪ್ರಾಯಪಟ್ಟರು.

‘ಖಾಸಗಿ ಭದ್ರತಾ ಸಿಬ್ಬಂದಿ ದೈಹಿಕವಾಗಿ ಸದೃಢರಾಗಿರುವುದಿಲ್ಲ. ವೃದ್ಧರು, ಕಾಯಿಲೆಯಿಂದ ಬಳಲುತ್ತಿರುವರು ಈ ಕೆಲಸ ಮಾಡುತ್ತಿದ್ದಾರೆ. ಮನೆಯ ಬದಲು ಎಟಿಎಂ ಕೇಂದ್ರಗಳ ಎದುರು ಮಲಗುತ್ತಿದ್ದಾರೆ. ಅಪರಾಧ ಹಿನ್ನೆಲೆ ಹೊಂದಿದವರೂ ಇದ್ದಾರೆ’ ಎಂದರು.

‘ಗೃಹರಕ್ಷಕ ದಳವು ಪೊಲೀಸ್‌ ಇಲಾಖೆಯ ಅವಿಭಾಜ್ಯ ಅಂಗ. ಸಮರ್ಥರು ಹಾಗೂ ಸಚ್ಚಾರಿತ್ರ್ಯ ಹೊಂದಿದವರನ್ನು ಮಾತ್ರ ನೇಮಕ ಮಾಡಿಕೊಳ್ಳುತ್ತೇವೆ. ಶಸ್ತ್ರಾಸ್ತ್ರ ಬಳಕೆಗೆ ಗೃಹರಕ್ಷಕರಿಗೆ ಅನುಮತಿ ಇದೆ. ಈ ಕುರಿತು ಬ್ಯಾಂಕ್‌ ಅಧಿಕಾರಿಗಳು ಗಂಭೀರವಾಗಿ ಆಲೋಚಿಸಬೇಕು’ ಎಂದು ಸಲಹೆ ನೀಡಿದರು.

ಭೂದಾಖಲೆ ಪಡೆದು ವಂಚನೆ

ಶುಂಠಿ ಬೆಳೆಯಲು ರೈತರೊಂದಿಗೆ ಮಾಡಿಕೊಂಡ ಒಪ್ಪಂದ ಹಾಗೂ ಭೂದಾಖಲೆಗಳನ್ನು ಕೇರಳದ ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲ ಪಡೆದು ವಂಚಿಸುತ್ತಿರುವ ಪ್ರಕರಣಗಳು ಹುಣಸೂರು ಮತ್ತು ಎಚ್‌.ಡಿ.ಕೋಟೆ ತಾಲ್ಲೂಕುಗಳಲ್ಲಿ ಹೆಚ್ಚಾಗುತ್ತಿವೆ.

‘ಕೇರಳದ ಅನೇಕರು ಈ ಎರಡೂ ತಾಲ್ಲೂಕುಗಳಲ್ಲಿ ಜಮೀನು ಗುತ್ತಿಗೆ ಪಡೆದಿದ್ದಾರೆ. ರೈತರೊಂದಿಗೆ ಮಾಡಿಕೊಂಡ ಒಪ್ಪಂದ ಪತ್ರದೊಂದಿಗೆ ಭೂದಾಖಲೆಗಳನ್ನು ಪಡೆಯುತ್ತಾರೆ. ಇವುಗಳನ್ನು ಮಾನಂದವಾಡಿ ಹಾಗೂ ವೈನಾಡು ಜಿಲ್ಲೆಯ ಬ್ಯಾಂಕುಗಳಲ್ಲಿ ಅಡವಿಟ್ಟು ಸಾಲ ಪಡೆಯುತ್ತಿದ್ದಾರೆ. ಸುಸ್ತಿದಾರರಾದ ಬಳಿಕ ರೈತರಿಗೆ ವಾರೆಂಟ್‌ ಹಾಗೂ ನೋಟಿಸ್‌ ಬರುತ್ತಿವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT