ಬುಧವಾರ, ಜುಲೈ 28, 2021
23 °C

ಯೋಗೀಶ್‌ಗೌಡ ಕೊಲೆ ಪ್ರಕರಣ: ರಾಜ್ಯ ಪೊಲೀಸರ ಬೆವರಿಳಿಸುತ್ತಿರುವ ಸಿಬಿಐ

ಹೊನೆಕೆರೆ ನಂಜುಂಡೇಗೌಡ Updated:

ಅಕ್ಷರ ಗಾತ್ರ : | |

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತಿ ಬಿಜೆಪಿ ಸದಸ್ಯ ಯೋಗೀಶ್‌‌ಗೌಡ ಕೊಲೆ ಪ್ರಕರಣದ ತನಿಖೆಯನ್ನು ಬೇಕಾಬಿಟ್ಟಿ ನಡೆಸಿ ಕೈತೊಳೆದುಕೊಂಡಿದ್ದ ಪೊಲೀಸರ ಕೊರಳಿಗೆ ಈಗ ನಡೆಯುತ್ತಿರುವ ಸಿಬಿಐ ತನಿಖೆ ಉರುಳಾಗುವ ಸಾಧ್ಯತೆಗಳಿವೆ.

‘ಈ ಪ್ರಕರಣದ ತನಿಖೆಯನ್ನು ಪೊಲೀಸರು ಏಕೆ ಸಮರ್ಪಕವಾಗಿ ನಡೆಸಲಿಲ್ಲ? ತಮ್ಮ ಮುಂದೆ ಶರಣಾದ ಆರೋಪಿಗಳನ್ನು ಹೊರತುಪಡಿಸಿ ಬೇರೆಯವರನ್ನು ಏಕೆ ಹುಡುಕುವ ಗೋಜಿಗೆ ಹೋಗಲಿಲ್ಲ? ಹಿರಿಯ ಪೊಲೀಸ್‌ ಅಧಿಕಾರಿಗಳು ತನಿಖೆ ಪ್ರಗತಿಯನ್ನು ಸರಿಯಾಗಿ ಪರಿಶೀಲಿಸಲಿಲ್ಲವೇಕೆ? ರಾಜಕೀಯ ಒತ್ತಡಗಳು ಅವರ ಕೈ ಕಟ್ಟಿಹಾಕಿದ್ದವೇ?’ ಇತ್ಯಾದಿ ಪ್ರಶ್ನೆಗಳಿಗೆ ಸಿಬಿಐ ಉತ್ತರ ಹುಡುಕುತ್ತಿದೆ.

ಸಿಬಿಐ, ಒಟ್ಟು 14 ಆರೋಪಿಗಳ ವಿರುದ್ಧ ಧಾರವಾಡದ‌ ಕೋರ್ಟ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಅಚ್ಚರಿ  ಸಂಗತಿ ಎಂದರೆ, ಬಸವರಾಜ ಮುತ್ತಗಿ, ವಿಕ್ರಂ ಬಳ್ಳಾರಿ, ಕೀರ್ತಿ ಕುಮಾರ್‌‌ ಕುರಹಟ್ಟಿ, ಸಂದೀಪ್‌ ಸವದತ್ತಿ, ವಿನಾಯಕ ಕಟಗಿ ಮತ್ತು ಮಹಾಬಲೇಶ್ವರ ಹೊಂಗಲ್‌ ವಿರುದ್ಧ ಧಾರವಾಡ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿ ತಟಸ್ಥವಾಗಿದ್ದರು.

ಆದರೆ ಸಿಬಿಐ, ಸಂತೋಷ್‌ ಸವದತ್ತಿ, ದಿನೇಶ್‌, ಅಶ್ವತ್ಥ್‌, ಸುನಿಲ್‌, ನಜೀರ್‌ ಅಹಮದ್‌, ಶಾನವಾಜ್‌, ನೂತನ್‌ ಮತ್ತು ಹರ್ಷಿತ್‌ ಅವರನ್ನೂ ಪ್ರಕರಣದಲ್ಲಿ ಹೆಸರಿಸಿದೆ. ಇವರಲ್ಲಿ ಕೆಲವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ದಿನೇಶ್‌ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು ಸಿಬಿಐ ಪರವಾಗಿ ವಕೀಲ ಪಿ. ಪ್ರಸನ್ನ ಕುಮಾರ್‌ ಹಾಜರಾಗುತ್ತಿದ್ದಾರೆ.

ಮೊಬೈಲ್‌ ಕರೆ ವಿವರ (ಸಿಡಿಆರ್) ಸಿಸಿಟಿವಿ ಕ್ಯಾಮೆರಾ ಮತ್ತು ಪ್ರತ್ಯಕ್ಷ ದರ್ಶಿಗಳ ಮಾಹಿತಿ ಆಧರಿಸಿ ಸಿಬಿಐ, ಪೊಲೀಸರು ಬಂಧಿಸದೆ ಬಿಟ್ಟಿದ್ದ ಎಂಟು ಆರೋಪಿಗಳನ್ನು ಪತ್ತೆ ಹಚ್ಚಿದೆ. ಪೊಲೀಸರು ಇದ್ಯಾವುದನ್ನು ಪರಿಗಣಿಸದೇ ಇದ್ದುದು ಅವರನ್ನು ಪೇಚಿಗೆ ಸಿಲುಕಿಸಿದೆ ಎಂದು ಮೂಲಗಳು ತಿಳಿಸಿವೆ.

‘ಮುತ್ತಗಿ ಮೊಬೈಲ್‌ನಿಂದ (95386 59906) ದಿನೇಶ್‌ಗೆ (78994 29139) 2016ರ ಏಪ್ರಿಲ್‌ 1ರಿಂದ ಜೂನ್‌ 13ರವರೆಗೆ 322 ಸಲ ಕರೆ ಮಾಡಲಾಗಿತ್ತು. ಜೂನ್‌ ಮೊದಲ ವಾರವೇ ಜಿಲ್ಲಾ ಪಂಚಾಯತ್‌ ಸದಸ್ಯನ ಕೊಲೆಗೆ ವಿಫಲ ಯತ್ನ ನಡೆದಿತ್ತು. ಜೂನ್‌ 14 ರಂದು ಮತ್ತೊಮ್ಮೆ ಪ್ರಯತ್ನಿಸಲಾಗಿತ್ತು. ಆರೋಪಿಗಳು 15ರಂದು ಅವರನ್ನು ಕೊಲ್ಲಲು ಯಶಸ್ವಿಯಾದರು’ ಎಂದು ಸಿಬಿಐ ಹೇಳಿದೆ.

ಪೊಲೀಸರ ವೈಫಲ್ಯ ಕುರಿತು ಮಹಾನಗರ ಪೊಲೀಸ್‌ ಕಮಿಷನರ್‌ ಆಗಿದ್ದ ಪಾಂಡುರಂಗ ರಾಣೆ, ಡಿಸಿಪಿಗಳಾದ ಜಿನೇಂದ್ರ ಖನಗಾವಿ, ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ಸಿಬಿಐ ಪ್ರಶ್ನಿಸಿದೆ. ಇನ್ನಷ್ಟು ಅಧಿಕಾರಿಗಳನ್ನು ವಿಚಾರಣೆಗೆ ಕರೆಯಲಿದೆ. ತನಿಖೆಯಲ್ಲಿ ಲೋಪ ಎಸಗಿದ್ದರೆ ಪೊಲೀಸರ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು