ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಇಡಿ ಬೆಳಕಿನಲ್ಲಿ ಗಾಂಜಾ ಬೆಳೆಸುತ್ತಿದ್ದ !

* ಸಿಸಿಬಿ ಕಾರ್ಯಾಚರಣೆ * ಬಿಎಂಎಸ್ ವಿದ್ಯಾರ್ಥಿ ಸೇರಿ ಮೂವರ ಬಂಧನ
Last Updated 13 ಡಿಸೆಂಬರ್ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯಲ್ಲೇ ವ್ಯವಸ್ಥಿತವಾಗಿ ಹೈಡ್ರೋಗಾಂಜಾ ಗಿಡಗಳನ್ನು ಬೆಳೆಸಿ ಮಾರಾಟ ಮಾಡುತ್ತಿದ್ದ ಆರೋಪದಡಿ ಬಿಎಂಎಸ್ ವಿದ್ಯಾರ್ಥಿ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಬಿಹಾರದ ಅಮಾತ್ಯ ರಿಶಿ (23), ಮಂಗಲ್ ಮುಕ್ಯ (30) ಹಾಗೂ ಹೊಸಕೆರೆಹಳ್ಳಿಯ ದ್ವಾರಕಾನಗರದ ಆದಿತ್ಯ ಕುಮಾರ್ (21) ಬಂಧಿತರು. ಅವರಿಂದ ಗಾಂಜಾ ಗಿಡಗಳಿದ್ದ ಕುಂಡಗಳು, ಎಲ್‌ಇಡಿ ದೀಪಗಳನ್ನು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆರೋಪಿ ಅಮಾತ್ಯ ರಿಶಿ ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿ.ಎಂ.ಎಸ್ ವ್ಯಾಸಂಗ ಮಾಡುತ್ತಿದ್ದ. ಕೆಂಗೇರಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ವಾಸವಿದ್ದ. ವಿದೇಶದಿಂದ ಹೈಡ್ರೋ ಗಾಂಜಾ ಬೀಜಗಳನ್ನು ತರಿಸುತ್ತಿದ್ದ ಆರೋಪಿ ತನ್ನ ಮನೆಯಲ್ಲೇ ಗಿಡಗಳನ್ನು ಬೆಳೆಸುತ್ತಿದ್ದ’ ಎಂದು ಹೇಳಿದರು.

‘ಕೊಠಡಿಯೊಂದರಲ್ಲಿ ನಾಲ್ಕೈದು ಕುಂಡಗಳನ್ನು ಇಟ್ಟಿದ್ದ ಆರೋಪಿ ಅವುಗಳಲ್ಲಿ ಬೀಜಗಳನ್ನು ಹಾಕಿದ್ದ. ಗಾಂಜಾ ಗಿಡಗಳು ಬೆಳೆಯಲು ಅನುಕೂಲವಾಗಲೆಂದು ಎಲ್‌ಇಡಿ ಬಲ್ಬ್‌ಗಳ ಮೂಲಕ ಬೆಳಕು ಬರುವಂತೆ ವ್ಯವಸ್ಥೆ ಮಾಡಿದ್ದ. ಕೋಳಿ ಫಾರ್ಮ್ ರೀತಿಯಲ್ಲೇ ಗಿಡಗಳನ್ನು ಬೆಳೆಸುತ್ತಿದ್ದ. ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಎಲ್‌ಇಡಿ ದೀಪಗಳ ಸಮೇತ ಕುಂಡಗಳನ್ನೂ ಜಪ್ತಿ ಮಾಡಿದ್ದಾರೆ’ ಎಂದು ತಿಳಿಸಿದರು.

‘ಕುಂಡಗಳಲ್ಲಿ ನಿರ್ದಿಷ್ಟಪಡಿಸಿದಷ್ಟು ಎತ್ತರಕ್ಕೆ ಬೆಳೆದ ಗಾಂಜಾ ಗಿಡಗಳನ್ನೇ ಕತ್ತರಿಸಿ ಒಣಗಿಸಿ ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ಮಂಗಲ್ ಮುಕ್ಯ ಹಾಗೂ ಆದಿತ್ಯ ಕುಮಾರ್ ಸಹಕಾರ ನೀಡುತ್ತಿದ್ದರು’ ಎಂದರು.

ಡಾರ್ಕ್‌ ಜಾಲತಾಣ ಮೂಲಕ ಡ್ರಗ್ಸ್ ಖರೀದಿ: ‘ಗಾಂಜಾ ಗಿಡ ಬೆಳೆಸುವುದರ ಜೊತೆಯೇ ಆರೋಪಿಗಳು ನೆದರ್‌ಲ್ಯಾಂಡ್‌ನಿಂದ ಡ್ರಗ್ಸ್‌ ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು’ ಎಂದು ಭಾಸ್ಕರ್‌ ರಾವ್ ಹೇಳಿದರು.

‘ನೆದರ್‌ಲ್ಯಾಂಡ್‌ನಲ್ಲಿರುವ ಡ್ರಗ್ಸ್ ಮಾರಾಟಗಾರರನ್ನುಡಾರ್ಕ್ ಜಾಲತಾಣದ ಮೂಲಕ ಆರೋಪಿ ಸಂಪರ್ಕಿಸುತ್ತಿದ್ದ. ಅವರಿಂದಲೇ ಡ್ರಗ್ಸ್ ಖರೀದಿಸಿ ಕೋರಿಯರ್ ಮೂಲಕ ನಗರಕ್ಕೆ ತರಿಸಿಕೊಳ್ಳುತ್ತಿದ್ದ. ಅದನ್ನೇ ಖಾಸಗಿ ಕಂಪನಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ಮಾರುತ್ತಿದ್ದ’ ಎಂದರು.

‘ಡ್ರಗ್ಸ್ ಮಾರಾಟದಿಂದ ಬಂದ ಹಣವನ್ನು ಆರೋಪಿಗಳು ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದರು. ಬಂಧಿತರಿಂದ 225 ಎಲ್‌.ಎಸ್‌.ಡಿ ಮಾತ್ರೆಗಳು ಹಾಗೂ 2 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT