ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್ ಬಾಸ್‌ಗೆ ಎಂಟ್ರಿ ಕೊಡ್ಸು, ಸೆಲಿಬ್ರಿಟಿ ಮಾಡು: ಹಾಸನಾಂಬೆಗೆ ಬಗೆಬಗೆ ಪತ್ರ

ಇಷ್ಟಾರ್ಥ ಸಿದ್ಧಿಗೆ ಹಾಸನಾಂಬೆ ತಾಯಿಗೆ 150 ಪತ್ರ !
Last Updated 30 ಅಕ್ಟೋಬರ್ 2019, 14:25 IST
ಅಕ್ಷರ ಗಾತ್ರ

ಹಾಸನ: ‘ಪತಿ ನನ್ನ ಮಾತು ಕೇಳಬೇಕು, ಅವ್ನೇ ನನ್ನ ಪತಿ ಆಗಬೇಕು, ನನ್ನ ಸೆಲೆಬ್ರಿಟಿ ಮಾಡು, ಬಿಗ್‌ಬಾಸ್‌ಗೆ ಎಂಟ್ರಿ ಕೊಡ್ಸು, ಮಗಳಿಗೆ ಮೆಡಿಕಲ್ ಸೀಟು ಕೊಡಿಸು, ಅಕ್ಕನ ಜೀವನ ಸರಿ ಮಾಡು, ಅಪ್ಪನ ಕೋಪ ಕಡಿಮೆ ಮಾಡು, ಎಸಿ. ನಾಗರಾಜ್ ವರ್ಗಾವಣೆ ಆಗಬಾರದು’.

ಶಕ್ತಿ ದೇವತೆ ಹಾಸನಾಂಬೆಗೆ ಭಕ್ತರ ನಿವೇದನೆಯಿದು. ಬುಧವಾರ ಸಿದ್ದೇಶ್ವರ ಸ್ವಾಮಿ ದೇವಾಲಯ ಪ್ರಾಂಗಣದಲ್ಲಿ ನಡೆದ ಹುಂಡಿ ಕಾಣಿಕೆ ಎಣಿಕೆ ವೇಳೆ ತಾಯಿ ಹಾಸನಾಂಬ ದೇವಿಗೆ ಮೊರೆಯಿಟ್ಟ 150ಕ್ಕೂ ಹೆಚ್ಚುವ ವಿಶೇಷ ಚೀಟಿಗಳು ಲಭ್ಯವಾದವು.

ಒಬ್ಬರು ನನಗೆ ಸರ್ಕಾರಿ ಕೆಲಸ ಕೊಡಿಸು ತಾಯೆ ಎಂದು ಕೇಳಿದ್ದರೆ, ಮತ್ತೊಬ್ಬರು ನನ್ನನ್ನು ಸೆಲೆಬ್ರಿಟಿಯನ್ನಾಗಿ ಮಾಡು ಎಂದು ಬೇಡಿದ್ದಾರೆ.

ಹಾಗೆಯೇ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಫಸ್ಟ್‌ ಬರುವಂತೆ ಮಾಡು, ಎಂಟೂವರೆ ಲಕ್ಷ ರೂಪಾಯಿ ಸಾಲ ಹಣವನ್ನು ವಾಪಸ್ ಕೊಡಿಸು, ಜೈಲಿನಲ್ಲಿರುವ ನನ್ನ ಲವರ್ ಬಿಡುಗಡೆ ಮಾಡಿಸು, ಸ್ವಂತ ಸೈಟ್ ಖರೀದಿಸಿ ಶೀಘ್ರವೇ ಹೊಸ ಮನೆ ಕಟ್ಟುವಂತೆ ಮಾಡು, ಗಂಡ ನನ್ನ ಮಾತು ಕೇಳುವಂತೆ ಮಾಡಿ ಸಂಸಾರ ಸರಿ ಪಡಿಸು ಎಂದು ಬರೆದಿದ್ದಾರೆ.

ಹೀಗೆ ನೂರಾರು ಪತ್ರಗಳು ಕಾಣಿಸಿಕೊಂಡಿದ್ದು, ಹುಂಡಿ ಹಣ ಎಣಿಸುತ್ತಿದ್ದ ಕಂದಾಯ, ಪೊಲೀಸ್‌ ಸಿಬ್ಬಂದಿ ನಗುತ್ತಲೇ ಚೀಟಿಗಳನ್ನು ಓದಿ ಪಕ್ಕಕ್ಕೆ ಸರಿಸುತ್ತಿದ್ದರು.

ಪತ್ರದಲ್ಲಿರುವ ಬೇಡಿಕೆ ತರೇಹೇವಾರಿ ಇವೆ. ‘ಕೋರ್ಟ್ ನಲ್ಲಿರುವ ಕೇಸ್ ವಾಪಸ್ ಪಡೆಯುವಂತೆ ಮಾಡು ತಾಯೆ, ನನಗೆ ಬರಬೇಕಿರುವ ₹ 8.50 ಲಕ್ಷ ಸಾಲ ವಾಪಸ್ ಕೊಡಿಸು, ಮುಂದಿನ ವರ್ಷ ನಿನ್ನ ಹುಂಡಿಕೆ ₹ 1001 ಕಾಣಿಕೆ ಹಾಕುತ್ತೇನೆ. ರಾಘವೇಂದ್ರನಿಗೆ ಕಂಕಣ ಭಾಗ್ಯ ಕರುಣಿಸು, ಮದುವೆಯಾಗಿ 10 ವರ್ಷ ಕಳೆದಿದ್ದು ಸಂತಾನಫಲ ನೀಡು ಅಮ್ಮ’ ಎಂದು ಹಾಳೆಯಲ್ಲಿ ಹಸ್ತಾಕ್ಷರ ಬರೆದು ನಿವೇದಿಸಿಕೊಂಡಿರುವ ಸ್ವಾರಸ್ಯಕರ ಪತ್ರಗಳು ದೊರೆತಿವೆ.

ಹಾಸನಾಂಬೆ ಹುಂಡಿಯಲ್ಲಿ ವೈಯಕ್ತಿಕ ಬೇಡಿಕೆ ಪತ್ರಗಳ ಜತೆಗೆ ಸಾಮಾಜಿಕ ಕಾಳಜಿ ಹೊಂದಿರುವ ಪತ್ರಗಳು ದೊರೆತಿವೆ. ‘ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಇದಕ್ಕೆ ಕಾರಣವಾಗಿರುವ ಆಯುಕ್ತರನ್ನು ಜಿಲ್ಲೆಯಿಂದ ದೂರ ಇರಿಸು’ ಎಂದು ಒಬ್ಬರು ದೇವಿಗೆ ಪತ್ರ ಬರೆದಿದ್ದಾರೆ.
‘ಕೃಷ್ಣಾನಗರದಲ್ಲಿ ಸೈಟು ಹಂಚುವಾಗ ಆಯುಕ್ತ ಮತ್ತು ಹಿಂದಿನ ಅಧ್ಯಕ್ಷ ಸೇರಿ ಬಡವರು, ದಲಿತರಿಗೆ ಸೇರಬೇಕಿದ್ದ ನಿವೇಶನಗಳನ್ನು ಬೇರೆಯವರಿಗೆ ಹಂಚಿಕೆ ಮಾಡಿದ್ದಾರೆ. ಅರ್ಹರಿಗೆ ಬಿಟ್ಟು ಹಣದ ಆಸೆಗೆ ಉಳ್ಳವರಿಗೆ ನೀಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಕೋರ್ಟ್ಗೆ ಹೋಗಿ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಇವರ ವಿರುದ್ಧ ಕ್ರಮ ಜರುಗಿಸುವ ಶಕ್ತಿಯನ್ನು ಜಿಲ್ಲಾಡಳಿತ ಹಾಗೂ ಮಾಧ್ಯಮದವರಿಗೆ ನೀಡು’ ಎಂದು ಭಕ್ತರೊಬ್ಬರು ಹಾಸನಾಂಬೆಯಲ್ಲಿ ಬೇಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT