ಭಾನುವಾರ, ಜನವರಿ 19, 2020
20 °C

‘ಸರ್ಕಾರದ ಕಣ್ಣು ತೆರೆಸಿದ ವರದಿ’; ‘ಪ್ರಜಾವಾಣಿ’ ವರದಿಗೆ ಶ್ರೀರಾಮುಲು ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಗ್ಯ ಸಚಿವ ಶ್ರೀರಾಮುಲು

ಬೆಂಗಳೂರು: ‘ಕಳೆದ ಐದು ವರ್ಷಗಳಲ್ಲಿ 57 ಸಾವಿರ ಶಿಶುಗಳ ಸಾವಿನ ವರದಿ ಓದಿ ಅಚ್ಚರಿ ಮತ್ತು ಆಘಾತ ಆಗಿದೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

‘ಮಕ್ಕಳು ದೇವರ ಸಮಾನ, ಆ ದೇವರುಗಳ ಸಾವಿನಿಂದ ಮನುಕುಲಕ್ಕೆ ಒಳಿತಾಗದು. ಈ ಬಗ್ಗೆ ಸರ್ಕಾರ, ಸಮಾಜ ಎಲ್ಲರೂ ಗಮನಹರಿಸಬೇಕು. ಲೋಪ ಸರಿಪಡಿಸುವುದು ನಮ್ಮ ಆದ್ಯ ಕರ್ತವ್ಯ’ ಎಂದು ಅವರು ‘ಪ್ರಜಾವಾಣಿ’ ವರದಿಗೆ ಪ್ರತಿಕ್ರಿಯಿಸಿದ್ದಾರೆ.

‘ವರದಿಯಿಂದ ಸರ್ಕಾರದ ಕಣ್ಣು ತೆರೆಸುವ ಕೆಲಸ ಆಗಿದೆ. ಈ ಬಗ್ಗೆ ತಕ್ಷಣವೇ ಗಮನಹರಿಸಿ ಶಿಶು ಮತ್ತು ಗರ್ಭಿಣಿಯರ ಆರೋಗ್ಯ ಸುಧಾರಣೆ, ಪೌಷ್ಟಿಕ ಆಹಾರ ವಿತರಣೆಗೆ ಹೆಚ್ಚಿನ ಗಮನ ಹರಿಸಲು ಸೂಚಿಸಿದ್ದೇನೆ’ ಎಂದು ಹೇಳಿದ್ದಾರೆ.

‘ನವಜಾತ ಶಿಶುಗಳ ಸಾವಿನ ಪ್ರಮಾ ಣ ವನ್ನು ಗಣನೀಯವಾಗಿ ತಗ್ಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪೌಷ್ಟಿಕತೆಯ ಕೊರತೆಯೇ ಈ ಪ್ರಮಾಣದಲ್ಲಿ ಮಕ್ಕಳ ಸಾವಿಗೆ ಕಾರಣ ವಾಗಿರಬಹುದು. ಸರ್ಕಾರಿ ಆಸ್ಪತ್ರೆ ಗಳಲ್ಲಿ ಸೌಲಭ್ಯಗಳ ಕೊರತೆ ಇದಕ್ಕೆ ಕಾರಣವಲ್ಲ’ ಎಂದಿದ್ದಾರೆ.

‘ರಾಜ್ಯದಲ್ಲಿ ತಜ್ಞವೈದ್ಯರ ಕೊರತೆ ಇರುವುದು ನಿಜ. ಆದರೆ, ಇರುವ ವೈದ್ಯರು ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ವೈದ್ಯರಿಗೆ ಸೂಚನೆ ನೀಡುತ್ತೇನೆ’. 

‘ಜನಿಸಿದ ಒಂದು ವರ್ಷದಲ್ಲಿ ಪ್ರತಿ ಸಾವಿರ ಮಕ್ಕಳಿಗೆ 25 ಮಕ್ಕಳು ಸಾವನ್ನಪ್ಪುತ್ತಿರುವುದು ನಿಜಕ್ಕೂ ದುರಂತ.  ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ₹12 ಕೋಟಿಗೂ ಅಧಿಕ ಹಣವನ್ನು ಶಿಶುಗಳ ಕಲ್ಯಾಣಕ್ಕಾಗಿ ಬಳಸುತ್ತಿದ್ದೇವೆ. ಆದರೂ ಇಷ್ಟೊಂದು ಪ್ರಮಾಣದ ಹಸುಳೆಗಳ ಸಾವು ದುಃಖ ತರುವ ಸಂಗತಿ’ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಇದನ್ನೂ ಓದಿ:  5 ವರ್ಷದಲ್ಲಿ 57 ಸಾವಿರ ಶಿಶುಗಳ ಸಾವು: ಇದು ಕರ್ನಾಟಕ ಕತೆ

ನವಜಾತ ಶಿಶುಗಳ ಮೇಲೆ ನಿಗಾ: ಸೂಚನೆ

ನವಜಾತ ಶಿಶುಗಳು ಇರುವ ಮನೆಗಳಿಗೆ 42 ದಿನಗಳಲ್ಲಿ ಕನಿಷ್ಠ ಆರು ಬಾರಿಯಾದರೂ ಭೇಟಿ ನೀಡಿ, ಶಿಶುಗಳ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಇಲಾಖೆ ಸೂಚಿಸಿದೆ.

ಐದು ವರ್ಷಗಳಲ್ಲಿ 57 ಸಾವಿರ ಶಿಶುಗಳ ಮರಣದ ಕುರಿತ ‘ಪ್ರಜಾವಾಣಿ’ ವರದಿಗೆ ಆರೋಗ್ಯ ಇಲಾಖೆ ಪ್ರತಿಕ್ರಿಯೆ ನೀಡಿದೆ.

ರಾಜ್ಯದಲ್ಲಿ 42 ಸಾವಿರ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಶಿಶು ಆರೈಕೆ ಘಟಕದಿಂದ ಮಗು ಬಿಡುಗಡೆಯಾದ ಬಳಿಕ ಮನೆಗಳಿಗೆ ಭೇಟಿ ನೀಡಿ, ಶಿಶುಗಳ ಆರೋಗ್ಯ ವಿಚಾರಿಸಬೇಕು. ಒಂದು ವೇಳೆ ಶಿಶುಗಳು ಅನಾರೋಗ್ಯಕ್ಕೆ ಒಳಪಟ್ಟಿರುವುದು ಕಂಡುಬಂದಲ್ಲಿ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯಲು ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ತಿಳಿಸಿದೆ. 

‘ನವಜಾತ ಶಿಶುಗಳನ್ನು ಚಿಕಿತ್ಸೆಗೆ ಸಾಗಿಸಲು ವಿಶೇಷ ಆಂಬುಲೆನ್ಸ್‌ ಸೇವೆಯನ್ನು ಪ್ರಾರಂಭಿಸಲಾಗುತ್ತದೆ. ಕಡಿಮೆ ತೂಕ ಇರುವ ಮಕ್ಕಳಿಗೆ ಚಿಕಿತ್ಸೆ ಒದಗಿಸಲು ಸದ್ಯ ಕಾರ್ಯನಿರ್ವಹಿಸುತ್ತಿರುವ ಕಾಂಗರೂ ಮದರ್‌ಕೇರ್‌ಗಳಲ್ಲಿ ತರಬೇತಿ ಹೊಂದಿದ ಶುಶ್ರೂಷಕಿಯರನ್ನು ನೇಮಕ ಮಾಡಲಾಗುವುದು’ ಎಂದು ಇಲಾಖೆಯ ಮಕ್ಕಳ ಆರೋಗ್ಯದ ಜಂಟಿ ನಿರ್ದೇಶಕಿ ಡಾ.ಎಂ.ಸಿ.ಹೇಮಲತಾ ತಿಳಿಸಿದ್ದಾರೆ.

‘ಶಿಶು ಮರಣ ದರವನ್ನು ಇಳಿಕೆ ಮಾಡಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಾರ್ಷಿಕ ಮೂರು ಸಾವಿರ ಹೆರಿಗೆಗಳು ಸಂಭವಿಸುವ ಆಸ್ಪತ್ರೆಗಳಲ್ಲಿ 12 ಹಾಸಿಗೆಗಳುಳ್ಳ ನವಜಾತ ಶಿಶು ವಿಶೇಷ ಆರೈಕೆ ಘಟಕಗಳನ್ನು ತೆರೆದು, ಚಿಕಿತ್ಸೆ ನೀಡುತ್ತಿದ್ದೇವೆ’ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು