ರಾಜಧಾನಿ ಸೆರಗಿನಲ್ಲೇ ಹೆಚ್ಚಿದ ಬಾಲ್ಯವಿವಾಹ!

7

ರಾಜಧಾನಿ ಸೆರಗಿನಲ್ಲೇ ಹೆಚ್ಚಿದ ಬಾಲ್ಯವಿವಾಹ!

Published:
Updated:

ಬೆಂಗಳೂರು: ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ, ಅನಕ್ಷರಸ್ಥರೇ ಹೆಚ್ಚಿರುವ ಕಡೆಗಳಲ್ಲಿ ಮಾತ್ರ ಬಾಲ್ಯ ವಿವಾಹ ನಡೆಯುತ್ತಿಲ್ಲ. ರಾಜಧಾನಿ ಬೆಂಗಳೂರಿನ ಸೆರಗಿನಲ್ಲಿರುವ ಗ್ರಾಮಗಳಲ್ಲೂ ಚಿಕ್ಕವಯಸ್ಸಿನಲ್ಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಕಾನೂನು ಬಾಹಿರ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಬಾಲ್ಯವಿವಾಹ ಯತ್ನಗಳ ವಿರುದ್ಧ 11 ದೂರುಗಳು ದಾಖಲಾಗಿರುವುದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೇ ದೃಢಪಡಿಸಿದೆ. 

ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ದಾಖಲೆಗಳ ಪ್ರಕಾರ 2017–18ರಲ್ಲಿ ದೊಡ್ಡಬಳ್ಳಾಪುರ ಪ್ರದೇಶದಲ್ಲಿ 47 ಬಾಲ್ಯ ವಿವಾಹಗಳು ನಡೆದ ಬಗ್ಗೆ ದೂರುಗಳು ಸಲ್ಲಿಕೆಯಾಗಿವೆ.

‘ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ 11 ದೂರುಗಳು ಬಂದಿದ್ದವು, ಅವುಗಳಲ್ಲಿ 10ನ್ನು ತಡೆದಿದ್ದು, ಒಂದು ಮದುವೆ ಮಾತ್ರ ನಡೆದಿದೆ’ ಎಂದು ಗ್ರಾಮಾಂತರ ಜಿಲ್ಲೆಯ ಅಧಿಕಾರಿಗಳು ಹೇಳುತ್ತಾರೆ. 

ಸಮೀಕ್ಷೆಗಳ ಪ್ರಕಾರ, ಜಿಲ್ಲೆಯಲ್ಲಿ ನಡೆಯುವ ಒಟ್ಟು ಮದುವೆಗಳಲ್ಲಿ ಶೇ 21ರಷ್ಟು ಬಾಲ್ಯವಿವಾಹಗಳಾಗಿವೆ. ‘ಪೋಷಕರಲ್ಲಿ ಹೆಣ್ಣಿನ ರಕ್ಷಣೆ ಕುರಿತು ತಲ್ಲಣಗಳಿವೆ. ಹೆಣ್ಣು ಮಕ್ಕಳನ್ನು ಸೆರಗಿನಲ್ಲಿ ಇಟ್ಟುಕೊಂಡ ಕೆಂಡ ಎಂಬಂತೆ ಕಾಣುತ್ತಿದ್ದಾರೆ ಅವರು. ಮದುವೆ ಮಾಡಿಕೊಟ್ಟರೆ ಸಾಕು ಜವಾಬ್ದಾರಿ ಕಳೆಯಿತು ಎನ್ನುವ ಸಂಪ್ರಾದಾಯಿಕ ಆಲೋಚನೆ ಅವರದ್ದು’ ಎನ್ನತ್ತಾರೆ ಮಹಿಳಾ ಸಮಾಜದ ಅಧ್ಯಕ್ಷೆ ಕೆ.ಎಸ್‌. ಪ್ರಭಾ.

‘ಹೆಣ್ಣು ಮಕ್ಕಳು ಬೇರೆ ಜಾತಿ ಯುವಕರನ್ನು ಇಷ್ಟಪಡುತ್ತಾರೆ. ಇದರಿಂದ ಮನೆ ಮರ್ಯಾದೆ ಹಾಳಾಗುತ್ತದೆ. ಬೇಗ ಮದುವೆ ಮಾಡಿ ಮುಗಿಸಲು ಚಿಂತಿಸುತ್ತಾರೆ. ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು ಕಾಣೆಯಾಗುತ್ತಿರುವ ಪ್ರಕರಣಗಳು ಹೆಚ್ಚಿವೆ’ ಎಂದರು.

‘ಪೋಷಕರು ಮಕ್ಕಳೊಂದಿಗೆ ಮುಕ್ತವಾಗಿ ಸಂವಾದ ನಡೆಸುವುದಿಲ್ಲ. ಸಂಯಮ ಮತ್ತು ತಾಳ್ಮೆಯೂ ತೋರುವುದಿಲ್ಲ. ಕಿರುಕುಳದ ಬಗ್ಗೆ ಪೋಷಕರ ಬಳಿ ಹೆಣ್ಣು ಮಕ್ಕಳು ಅವಲತ್ತುಕೊಂಡರೂ ನಿನ್ನದೇ ತಪ್ಪಿರುತ್ತದೆ. ಹಾಗಾಗಿಯೇ ನಿನ್ನ ಹಿಂದೆ ಯುವಕರು ಬೀಳಲು ಕಾರಣ ಎಂದು ಚುಚ್ಚಿ ಮಾತನಾಡುತ್ತಾರೆ. ಇದು ಅವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತಿದೆ’ ಎಂದು ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ಕಾರ್ಯದರ್ಶಿ ಅಮಲಿ ನಾಯಕ್ ವಿವರಿಸುತ್ತಾರೆ.

‘ಶಾಲೆಯಲ್ಲಿ ಆಧುನಿಕ ಶಿಕ್ಷಣ ಸಿಗುತ್ತಿದ್ದರೆ, ಮನೆಯಲ್ಲಿ ಇನ್ನು ಸಾಂಪ್ರದಾಯಿಕ ವಾತಾವರಣ ಇದೆ. ಈ ತೊಳಲಾಟದಲ್ಲಿ ಹಲವು ವಿದ್ಯಾರ್ಥಿಗಳಿದ್ದಾರೆ’ ಎಂದು ಅವರು ಹೇಳುತ್ತಾರೆ.

ಪೋಷಕರ ಮನಸ್ಥಿತಿ ಬದಲು ಮಾಡಬೇಕು

ಹೆಣ್ಣು ಮಕ್ಕಳು ಕಾಣೆಯಾಗುತ್ತಿದ್ದಾರೆ ಎನ್ನುವುದೊಂದೇ ಇಲ್ಲಿನ ಸಮಸ್ಯೆ ಅಲ್ಲ; ಈ ಜಿಲ್ಲೆಯಲ್ಲಿ ವಲಸಿಗರ ಸಂಖ್ಯೆ ಹೆಚ್ಚಿದೆ. ಇದಕ್ಕೆ ಮೌಢ್ಯ ಮತ್ತು ಬಡತನವೇ ಮುಖ್ಯ ಸಮಸ್ಯೆ ಆಗಿದೆ. ಸರ್ಕಾರ ಹಾಗೂ ಸರ್ಕಾರೇತರ ಹಲವು ಸಂಸ್ಥೆಗಳು ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಶಾಲೆಯಲ್ಲೂ ಸಹ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿವೆ. ಬಾಲ್ಯ ವಿವಾಹ, ಮಕ್ಕಳ ಕಾರಣದಿಂದ ಎನ್ನುವುದಕ್ಕಿಂತ ಪೋಷಕರಿಂದ ಆಗುತ್ತಿದೆ ಎನ್ನುವುದು ಸೂಕ್ತ. ಆದ್ದರಿಂದ ಪೋಷಕರಿಗೆ ನೇರವಾಗಿ ಬಾಲ್ಯ ವಿವಾಹದಿಂದ ತಮ್ಮ ಮಕ್ಕಳ ಮೇಲಾಗುವ ದೈಹಿಕ ಹಾಗೂ ಮಾನಸಿಕ ತೊಂದರೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಬೇಕು’ ಎನ್ನುತ್ತಾರೆ ಯುವ ಸಂಚಲನದ ಅಧ್ಯಕ್ಷ ಚಿದಾನಂದ.

ಹೆಚ್ಚು ಬಾಲ್ಯ ವಿವಾಹ ಪ್ರಕರಣ ದಾಖಲಾಗಿರುವ ಜಿಲ್ಲೆಗಳ ವಿವರ (2015–16)

ಜಿಲ್ಲೆ;          ಶೇಕಡವಾರು

ಕೊಪ್ಪಳ;         35.9

ಬೆಳಗಾವಿ;       35.7

ಬಾಗಲಕೋಟೆ; 32.2

ವಿಜಯಪುರ;    31.9

ಯಾದಗಿರಿ;       29.6

‘ಆಧಾರ್‌ ಕಾರ್ಡ್‌ ತಿದ್ದುತ್ತಾರೆ’

‘ಬಾಲ್ಯ ವಿವಾಹಕ್ಕೆ ಒಳಗಾಗುವ ಹೆಣ್ಣು ಮಕ್ಕಳ ಸ್ನೇಹಿತರು, ಕೆಲವೊಮ್ಮೆ ಆ ಹೆಣ್ಣು ಮಕ್ಕಳೇ ಮಕ್ಕಳ ಸಹಾಯವಾಣಿಗೆ ಕರೆ ಮಾಡುತ್ತಾರೆ. ಇಷ್ಟರ ಮಟ್ಟಿಗೆ ಜಾಗೃತಿ ಮೂಡಿದೆ. ಆದರೆ, ಹಲವು ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಶಾಲಾ ಶಿಕ್ಷಕರಿಗೆ, ನೆರೆಹೊರೆ ಜನರಿಗೆ ಈ ಬಗ್ಗೆ ಮಾಹಿತಿ ಇದ್ದರೂ ತಿಳಿಸುವುದಿಲ್ಲ. ಮುಂದೆ ಅದೇ ಹಳ್ಳಿಯಲ್ಲಿ ಇರಬೇಕು. ಬೆಳಿಗ್ಗೆ ಎದ್ದರೆ ಅವರ ಮುಖವನ್ನೇ ನೋಡಬೇಕು ಎಂಬಂಥ ಕಾರಣ ಕೊಟ್ಟು ವಿಷಯ ಮುಚ್ಚಿಡುತ್ತಾರೆ’ ಎಂದು ಶಿಕ್ಷಕ ಲೋಕೇಶ್‌ ತಿಳಿಸಿದರು.

‘ಇದರ ಜತೆಗೆ, ಹೀಗೊಂದು ಮದುವೆ ನಡೆಯುತ್ತಿದೆ ಎಂದು ಸ್ಥಳಕ್ಕೆ ಹೋಗಿ ದಾಖಲೆ ಕೇಳಿದರೆ, ಬಾಲಕಿಯ ಆಧಾರ್‌ ಕಾರ್ಡ್‌ ಅಥವಾ ಅದರ ಜೆರಾಕ್ಸ್‌ ಪ್ರತಿ ನೀಡುತ್ತಾರೆ. ಸುಳ್ಳು ಜನನ ದಿನಾಂಕವನ್ನು ನಮೂದಿಸಿದ ಜೆರಾಕ್ಸ್‌ ಮಾಡಿರುತ್ತಾರೆ. ಜನನ ಪ್ರಮಾಣ ಪತ್ರ ನೋಡಿದ ಮೇಲೆಯೇ ಬಾಲಕಿಯ ನಿಜವಾದ ವಯಸ್ಸು ತಿಳಿಯುತ್ತದೆ’ ಎಂದು ಕರಾಳ ಮುಖ ತೆರೆದಿಟ್ಟರು.

* ತಿಳಿವಳಿಕೆ ಹಾಗೂ ಶಿಕ್ಷಣ ಇಲ್ಲದೇ ಇರುವುದರಿಂದ ಭಾವನೆಗಳ ನಿರ್ವಹಣೆಯಲ್ಲಿ ಕೆಲ ಯುವತಿಯರು ಸೋಲುತ್ತಿದ್ದಾರೆ

ಅಮಲಿ ನಾಯಕ್‌‌, ಕಾರ್ಯದರ್ಶಿ, ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ

* ಯುವಕರ ಜತೆಗೆ ಹೋಗಿ ಮದುವೆ ಆಗುವ ಪ್ರಕರಣಗಳೇ ಅಧಿಕ. ಸುಮಾರು 16, 17 ವರ್ಷದ ಬಾಲಕಿಯರು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.

ವರಲಕ್ಷಿ , ಎಎಸ್‌ಐ ದೊಡ್ಡಬಳ್ಳಾಪುರ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !