ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಸಬ್ಸಿಡಿ: ಆದೇಶ ಮುಂದೂಡಿಕೆಗೆ ಒತ್ತಡ?

ಸಿನಿಮಾ ಸಬ್ಸಿಡಿ: ಅರ್ಹತೆ ನಿಯಮಕ್ಕೆ ಬದಲಾವಣೆ
Last Updated 13 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಸಬ್ಸಿಡಿ ಪಡೆಯಲು ಅರ್ಹವಾಗಿರುವ ಸಿನಿಮಾಗಳು ಯಾವುವು ಎಂಬ ನಿಯಮಕ್ಕೆ ತಂದಿರುವ ಬದಲಾವಣೆಯನ್ನು ಈ ವರ್ಷದಿಂದ ಜಾರಿಗೆ ತರಬಾರದು ಎನ್ನುವ ಒತ್ತಡ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೇಲೆ ಬಂದಿದೆ.

ರಾಜ್ಯದಲ್ಲಿ ಪ್ರತಿವರ್ಷ ಒಟ್ಟು 125 ಚಿತ್ರಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ಮಕ್ಕಳ ಚಲನಚಿತ್ರ ಪ್ರಶಸ್ತಿ ಪಡೆದ ಚಿತ್ರ ಸೇರಿದಂತೆ ಗರಿಷ್ಠ ನಾಲ್ಕು ಮಕ್ಕಳ ಚಿತ್ರಗಳಿಗೆ ವಿಶೇಷ ಸಬ್ಸಿಡಿ ನೀಡಲಾಗುತ್ತದೆ. ಹಾಗೆಯೇ, ರಾಷ್ಟ್ರಮಟ್ಟದಲ್ಲಿ ಸ್ವರ್ಣ ಕಮಲ ಮತ್ತು ರಜತ ಕಮಲ ಪ್ರಶಸ್ತಿ ಪಡೆದ ಚಲನಚಿತ್ರಗಳು, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು, ಭಾರತೀಯ ಪನೋರಮಾ ಮತ್ತು ಅಧಿಕೃತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಚಿತ್ರಗಳಿಗೂ ಸಬ್ಸಿಡಿ ನೀಡಲಾಗುತ್ತದೆ ಎಂಬ ನಿಯಮ ಇತ್ತು.

ಈ ನಿಯಮದಲ್ಲಿ ತುಸು ಬದಲಾವಣೆ ತಂದ ಇಲಾಖೆಯು, ‘ಅಧಿಕೃತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿ, ಪ್ರದರ್ಶನಗೊಂಡ’ ಸಿನಿಮಾಕ್ಕೆ ಸಬ್ಸಿಡಿ ನೀಡಬೇಕು ಎಂಬ ಆದೇಶವನ್ನು ಡಿಸೆಂಬರ್ 2ರಂದು ಹೊರಡಿಸಿತ್ತು. ಇಂತಹ ಸಿನಿಮಾಗಳು ತಲಾ₹ 18.75 ಲಕ್ಷ ಸಬ್ಸಿಡಿಗೆ ನೇರವಾಗಿ ಅರ್ಹವಾಗುತ್ತವೆ. ಸಬ್ಸಿಡಿ ಆಯ್ಕೆ ಸಮಿತಿಯು ಇವುಗಳನ್ನು ವೀಕ್ಷಿಸಬೇಕಾಗಿಲ್ಲ. ಈ ಆದೇಶಕ್ಕೂ ಮೊದಲು, ‘ಅಧಿಕೃತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ’ ಚಿತ್ರಗಳಿಗೆ ಸಬ್ಸಿಡಿ ಸಿಗುತ್ತಿತ್ತು. ಆ ಚಿತ್ರಗಳು ‘ಸ್ಪರ್ಧಾ ವಿಭಾಗಕ್ಕೆ’ ಆಯ್ಕೆಯಾಗಿರಬೇಕು ಎಂಬ ಷರತ್ತು ಇರಲಿಲ್ಲ.

ಹೊಸ ಆದೇಶವು 2019ರ ಸಾಲಿಗೆ ಅನ್ವಯವಾಗುತ್ತದೆ ಎಂದೂ ಸ್ಪಷ್ಟಪಡಿಸಲಾಗಿತ್ತು. ಈ ಆದೇಶದ ಪರಿಣಾಮವಾಗಿ, ಈ ವರ್ಷದಲ್ಲಿ ‘ಅಧಿಕೃತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ’ ಸಿನಿಮಾಗಳಿಗೆ ಸಬ್ಸಿಡಿ ಇಲ್ಲವಾಗಲೂಬಹುದು. ‘ಈ ಕಾರಣದಿಂದಾಗಿ, ಆದೇಶವನ್ನು ಮುಂದಿನ ವರ್ಷದಿಂದ ಅನ್ವಯ ಮಾಡಬೇಕು ಎಂದು ಸಿನಿಮಾ ವಲಯದ ಕೆಲವು ಗುಂಪುಗಳು ಇಲಾಖೆಯ ಮೇಲೆ ಒತ್ತಡ ತರುತ್ತಿವೆ’ ಎಂದು ಮೂಲಗಳು ತಿಳಿಸಿವೆ.

‘ಕೆಲವು ಅಧಿಕೃತ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಚಿತ್ರವನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡುವ ಏಜೆಂಟರು ಇದ್ದಾರೆ. ಅಲ್ಲಿ ಚಿತ್ರ ಪ್ರದರ್ಶನ ಆದರೆ ಸಾಕು, ಸುಲಭವಾಗಿ ಸಬ್ಸಿಡಿ ಸಿಗುತ್ತದೆ. ಇದನ್ನು ಗಮನಿಸಿ ನಿಯಮಗಳಲ್ಲಿ ಬದಲಾವಣೆ ತರಲಾಗಿತ್ತು. ಚಿತ್ರೋತ್ಸವದಲ್ಲಿ ಪ್ರದರ್ಶನ ಆದರೆ ಸಾಕಾಗದು, ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರಬೇಕು ಎಂದು ಹೊಸ ನಿಯಮ ಹೇಳುತ್ತದೆ. ಹೊಸ ನಿಯಮದಿಂದಾಗಿ ಸಬ್ಸಿಡಿ ಮೊತ್ತ ಕೈತಪ್ಪಬಹುದು ಎಂದು, ನಿಯಮವನ್ನು ಮುಂದಿನ ವರ್ಷದಿಂದ ಜಾರಿಗೆ ತರುವಂತೆ ಒತ್ತಡ ಹೇರಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯೆಗೆ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಅವರನ್ನು ಸಂಪರ್ಕಿಸಿದಾಗ, ‘ಆದೇಶವು 2019ರಿಂದಲೇ ಜಾರಿ ಆಗಬೇಕು ಎಂದು ತಪ್ಪಾಗಿ ಉಲ್ಲೇಖವಾಗಿದೆ. ಈ ರೀತಿ ನಿಯಮಗಳಲ್ಲಿ ಬದಲಾವಣೆ ತರುವುದನ್ನು ಪೂರ್ವಾನ್ವಯಗೊಳಿಸಲು ಸಾಧ್ಯವೇ, ನಿಯಮಗಳನ್ನು ಮುಂದಿನ ವರ್ಷದಿಂದ ಅನುಷ್ಠಾನಕ್ಕೆ ತರಬಹುದೇ ಎನ್ನುವ ವಿಚಾರವಾಗಿ ಸ್ಪಷ್ಟನೆ ಕೇಳಲಾಗಿದೆ. ಯಾವುದೇ ತೀರ್ಮಾನ ಆಗಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT