ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತರ ಗೈರು ಸಂಭವ? ಸಿಎಲ್‌ಪಿಯತ್ತ ಎಲ್ಲರ ಚಿತ್ತ

ಕಾಂಗ್ರೆಸ್‌ ನಡೆಯ ನಿರೀಕ್ಷೆಯಲ್ಲಿ ಬಿಜೆಪಿ
Last Updated 17 ಜನವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನೇನು ‘ಆಪರೇಷನ್‌ ಕಮಲ’ಕ್ಕೆ ಮುಹೂರ್ತ ನಿಗದಿಯಾಗಿದೆ ಎನ್ನುವಷ್ಟರಲ್ಲಿ ಅತೃಪ್ತರ ಪೈಕಿ ಕೆಲವರನ್ನು ಮತ್ತೆ ತೆಕ್ಕೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ ನಾಯಕರು, ಶುಕ್ರವಾರ (ಜ. 18) ನಡೆಯುವ ಶಾಸಕಾಂಗ ಪಕ್ಷದ (ಸಿಎಲ್‌ಪಿ) ವಿಶೇಷ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಬಿಜೆಪಿಗೆ ಸಡ್ಡು ಹೊಡೆಯಲು ಅಣಿಯಾಗಿದ್ದಾರೆ.

ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ನಡೆಗೆ ಸಾಥ್‌ ನೀಡಿದ್ದರು ಎನ್ನಲಾದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್‌ ಗುರುವಾರ ಕಾಂಗ್ರೆಸ್‌ ಪಾಳಯ ಸೇರಿಕೊಂಡಿದ್ದಾರೆ. ಅತೃಪ್ತರ ಜೊತೆ ಮುಂಬೈಯಲ್ಲಿ ಗುರುತಿಸಿಕೊಂಡಿರುವ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್‌.‌ ನಾಗೇಶ್‌ ಕೂಡಾ ‘ಕೈ’ಜೋಡಿಸಲು ಮುಂದಾಗಿದ್ದರೆ ಎನ್ನಲಾಗಿದ್ದು, ಇದು ಕಾಂಗ್ರೆಸ್‌ ನಾಯಕರಲ್ಲಿ ಹುರುಪು ತಂದಿದೆ.

ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಎಲ್ಲರ ಚಿತ್ತ ಸಿಎಲ್‌ಪಿ ಸಭೆಯತ್ತ ನೆಟ್ಟಿದೆ. ಸಭೆಗೆ ಗೈರಾದರೆ‌ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸಂವಿಧಾನದ ಅನುಚ್ಛೇದ 10ರ ಅಡಿ, ಸ್ವಇಚ್ಛೆಯಿಂದ ಪಕ್ಷದ ಸದಸ್ಯತ್ವ ಬಿಟ್ಟುಕೊಡಲು ಇಚ್ಛಿಸಿದ್ದೀರಾ ಎಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳುವುದಾಗಿ ಸಿಎಲ್‌‍ಪಿ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಅತೃಪ್ತರ ಪಟ್ಟಿಯಲ್ಲಿದ್ದ ಭೀಮಾ ನಾಯ್ಕ್‌ ಮತ್ತು ಬಸನಗೌಡ ದದ್ದಲ್‌ ಬುಧವಾರವೇ ಕಾಂಗ್ರೆಸ್‌ಗೆ ಮರಳಿ ‘ನಿಷ್ಠೆ’ ಪ್ರದರ್ಶಿಸಿದ್ದಾರೆ. ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಉಮೇಶ ಜಾಧವ್, ಬಿ. ನಾಗೇಂದ್ರ ಸೇರಿ ಇನ್ನೂ ಕೆಲವರ ನಡೆ ನಿಗೂಢವಾಗಿಯೇ ಇದೆ.

ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ನಗರದ ಸಿಟಿ ಸಿವಿಲ್ ಕೋರ್ಟ್‌ಗೆ ಗುರುವಾರ ಹಾಜರಾದನಾಗೇಂದ್ರ, ‘ಶುಕ್ರವಾರ ಕೂಡಾ ಕೋರ್ಟ್‌ಗೆ ಹಾಜರಾಗಬೇಕಿದೆ. ಹೀಗಾಗಿ, ಸಿಎಲ್‌ಪಿಗೆ ಸಭೆಗೆ ಹಾಜರಾಗುವುದು ಕಷ್ಟ. ಹಾಗೆಂದು, ನಾನು ಬಿಜೆಪಿ ಸೇರುವುದಿಲ್ಲ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ವಿಜಯನಗರ ಶಾಸಕ ಆನಂದ ಸಿಂಗ್ ಕೂಡಾ ಕೋರ್ಟ್‌ಗೆ ಹಾಜರಾದರು. ಬಿಜೆಪಿ ಜೊತೆ ಹೆಜ್ಜೆ ಹಾಕುತ್ತಾರೆ ಎಂಬ ಅಪವಾದ ಹೊತ್ತುಕೊಂಡಿದ್ದ ಅವರು, ಸಿಎಲ್‌ಪಿ ಸಭೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಅತೃಪ್ತ ಶಾಸಕರ ಪೈಕಿ ಕೆಲವರು ಸಿಎಲ್‌ಪಿ ಸಭೆಗೆ ಕಡ್ಡಾಯ ಹಾಜರಾಗುವಂತೆ ನೀಡಿದ ನೋಟಿಸ್‍ಗೆ ಸೊಪ್ಪು ಹಾಕದಿರಲು ನಿರ್ಧರಿಸಿದ್ದಾರೆ. ಸಭೆಗೂ ಮೊದಲೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಬಗ್ಗೆ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ.

ಆದರೆ, ಎಲ್ಲ ಶಾಸಕರು ಸಿಎಲ್‌ಪಿ ಸಭೆಯಲ್ಲಿ ಭಾಗವಹಿಸುವ ವಿಶ್ವಾಸ ಕಾಂಗ್ರೆಸ್‌ ನಾಯಕರಲ್ಲಿದೆ. ಗೈರಾದವರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳಲು ಸಾಧ್ಯವೇ ಎಂಬ ಜಿಜ್ಞಾಸೆಯೂ ಉಂಟಾಗಿದೆ. ಗೈರಾದವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಶಾಸಕ ಸ್ಥಾನದಿಂದ ಅಮಾನತುಗೊಳಿಸಬಹುದು. ಆದರೆ, ಆ ಕಾಯ್ದೆ ಅನ್ವಯ ಕ್ರಮಕ್ಕೆ ಅವಕಾಶ ಇಲ್ಲ ಎನ್ನಲಾಗಿದೆ. ಆದರೆ. ಬೆದರಿಸುವ ಉದ್ದೇಶದಿಂದ ಕಾಂಗ್ರೆಸ್‌ ಈ ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ.

ಎಂಟು ಶಾಸಕರ ರಾಜೀನಾಮೆ: ಬಿಜೆಪಿ ವಿಶ್ವಾಸ

‘ಆಪರೇಷನ್ ಕಮಲ’ ಠುಸ್ ಆಗಿದೆ ಎಂದು ‘ದೋಸ್ತಿ’ ಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಆದರೆ, ಹರಿಯಾಣದ ಗುರುಗ್ರಾಮದಲ್ಲಿ ಶಾಸಕರ ಜೊತೆ ವಾಸ್ತವ್ಯ ಹೂಡಿರುವ ಬಿಜೆಪಿ ನಾಯಕರು ಸರ್ಕಾರ ಪತನಗೊಳ್ಳುವ ನಿರೀಕ್ಷೆಯಲ್ಲಿ ಇನ್ನೂ ಕಾಯುತ್ತಿದ್ದಾರೆ.

ರಮೇಶ ಜಾರಕಿಹೊಳಿ, ಬಿ. ನಾಗೇಂದ್ರ, ಉಮೇಶ ಜಾಧವ್ ಮತ್ತು ಮಹೇಶ ಕುಮಟಹಳ್ಳಿ ಸೇರಿ ಎಂಟಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್‌ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆ. ನಾಯಕರ ಲೆಕ್ಕಾಚಾರದಂತೆ ಇದು ನಡೆದರೆ ಸರ್ಕಾರಕ್ಕೆ ಆಪತ್ತು ಖಚಿತ ಎಂದು ಬಿಜೆಪಿ ಮೂಲಗಳು ಹೇಳಿವೆ.

ನನಗೆ ರೋಗ ಇಲ್ಲ– ಹೆಬ್ಬಾರ್

‘ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ’ ಎಂದು ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

‘ಆಪರೇಷನ್ ಮಾಡಲು ನನಗೆ ರೋಗ ಇಲ್ಲ. ಬಿಜೆಪಿಗೆ ಬರುವಂತೆ ಆಹ್ವಾನ ಬಂದಿರುವುದು ನಿಜ ಎಂದು ಅವರು ಒಪ್ಪಿಕೊಂಡರು.

***

* ಕಾಂಗ್ರೆಸ್‌ ಆಂತರಿಕ ಕಚ್ಚಾಟ ಮತ್ತು ಮುಖ್ಯಮಂತ್ರಿ ಕಾರ್ಯವೈಖರಿಯಿಂದ ಬೇಸತ್ತು ಕಾಂಗ್ರೆಸ್‌ನ ಕೆಲವು ಶಾಸಕರು ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿರಬಹುದು.

-ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ

* ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ನಾನಂತೂ ಹೇಳಿಲ್ಲ. ಸಂಕ್ರಾಂತಿ ಮಾಡಲು ಹೋಗಿ ಅವರು ‘ಸಂ’ಭ್ರಾಂತಿ ಮಾಡಿಕೊಂಡಿದ್ದಾರೆ

-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT