ಶುಕ್ರವಾರ, ಜುಲೈ 30, 2021
23 °C
ಜೆಜೆಎಂ ವೈದ್ಯಕೀಯ ಕಾಲೇಜಿನ ಪಿಜಿ ವಿದ್ಯಾರ್ಥಿಗಳಿಗೆ 16 ತಿಂಗಳ ಶಿಷ್ಯ ವೇತನ ಬಾಕಿ ವಿವಾದ

ಸರ್ಕಾರದ ಆದೇಶ ಆಡಳಿತ ಮಂಡಳಿ ಪಾಲಿಸದಿದ್ದರೆ ಎಂಸಿಐಗೆ ಪತ್ರ: ಯಡಿಯೂರಪ್ಪ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಾವಣಗೆರೆ ಜೆಜೆಎಂ ವೈದ್ಯಕೀಯ ಕಾಲೇಜಿನ ಪಿಜಿ ವಿದ್ಯಾರ್ಥಿಗಳಿಗೆ 16 ತಿಂಗಳುಗಳಿಂದ ಬಾಕಿ ಇರುವ ಶಿಷ್ಯವೇತನ ಕುರಿತಂತೆ ಕಾಲೇಜು ಆಡಳಿತ ಮಂಡಳಿ ಸರ್ಕಾರದ ಆದೇಶ ಪಾಲಿಸದೇ ಇದ್ದರೆ‌ ಭಾರತೀಯ ವೈದ್ಯಕೀಯ ಪರಿಷತ್‌ಗೆ (ಎಂಸಿಐ) ಪತ್ರ ಬರೆಯುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಸಚಿವರ ಜೊತೆ ಭಾನುವಾರ ಮಾತನಾಡಿದ ಮುಖ್ಯಮಂತ್ರಿ, ‘ಆಡಳಿತ ಮಂಡಳಿ ಜೊತೆ ಮತ್ತೊಮ್ಮ ಚರ್ಚೆ‌ ನಡೆಸಿ ಮನವೊಲಿಸಬೇಕು. ಒಂದು ವೇಳೆ ಒಪ್ಪದೇ ಇದ್ದರೆ ತಕ್ಷಣ ಅಗತ್ಯ ಕ್ರಮ‌ ಕೈಗೊಳ್ಳಬೇಕು’ ಎಂದಿದ್ದಾರೆ.

‘ಸರ್ಕಾರ ವಿದ್ಯಾರ್ಥಿಗಳ ಪರವಾಗಿ ಇದ್ದು, ಅವರಿಗೆ ಸೂಕ್ತ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕ್ರಮ‌ಕೈಗೊಂಡು, ಪ್ರತಿಭಟನೆ ಕೈಬಿಡುವಂತೆ ಮನವೊಲಿಸಬೇಕು’ ಎಂದೂ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ಬಾಕಿ ಇರುವ ಶಿಷ್ಯವೇತನಕ್ಕೆ ಪಟ್ಟು ಹಿಡಿದಿರುವ ವಿದ್ಯಾರ್ಥಿಗಳು, ಕೋವಿಡ್‌ 19 ಸೇವೆ ಹೊರತುಪಡಿಸಿ ಎಲ್ಲ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ ಎಂದೂ ವಿದ್ಯಾಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಶಿಷ್ಯವೇತನ ನೀಡಲು ನಮ್ಮಿಂದ ಆಗದು, ಸರ್ಕಾರವೇ ಶಿಷ್ಯವೇತನ ನೀಡಬೇಕು’ ಎಂದು ಕಾಲೇಜಿನ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿ, ಶಾಸಕ ಶಾಮನೂರು ಶಿವಶಂಕರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಧರಣಿ ನಿರತ ವಿದ್ಯಾರ್ಥಿಗಳು ಭೇಟಿ ನೀಡಿದ ವೇಳೆ ಅವರು, ‘ಸರ್ಕಾರ ಆರಿಸಿರುವ ರ‍್ಯಾಂಕ್ ‍ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರವೇ ಶಿಷ್ಯವೇತನ ನೀಡಬೇಕು. ನಮ್ಮ ಕಾಲೇಜಿನ 80 ವೈದ್ಯರು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸಂಬಳವನ್ನು ನಾವೇ ನೀಡುತ್ತಿದ್ದೇವೆ. ವೈದ್ಯಕೀಯ ಸೌಲಭ್ಯಗಳಿಗೆ ₹ 2 ಕೋಟಿ ನೀಡುತ್ತಿದ್ದೇವೆ. ಮೊದಲು ಸರ್ಕಾರವೇ ಶಿಷ್ಯವೇತನ ನೀಡುತ್ತಿತ್ತು. ಆದರೆ, ಒಂದು ವರ್ಷದಿಂದ ನೀಡುವುದಿಲ್ಲ ಎಂದು ಹೇಳುತ್ತಿದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು