ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹವಾಲುಗಳ ಜತೆ ಅಭಿಮಾನದ ಮಾತು

ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿ ಗ್ರಾಮವಾಸ್ತವ್ಯ l ಮಿತವ್ಯಯಕ್ಕಾಗಿ ಹೆಲಿಕಾಪ್ಟರ್‌ ಪ್ರಯಾಣ ಬಿಟ್ಟ ಸಿ.ಎಂ
Last Updated 27 ಜೂನ್ 2019, 19:30 IST
ಅಕ್ಷರ ಗಾತ್ರ

ಉಜಳಂಬ (ಬೀದರ್‌ ಜಿಲ್ಲೆ): ಗ್ರಾಮ ವಾಸ್ತವ್ಯಕ್ಕೆ ಬಂದ ಮುಖ್ಯಮಂತ್ರಿ ಅವರನ್ನು ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡರು. ಚಕ್ಕಡಿಯ ಮೂಲಕ ಮೆರವಣಿಗೆಯಲ್ಲಿ ಕರೆತಂದು ಅಭಿಮಾನ ಮೆರೆದರು.

ಮೆರವಣಿಗೆ ಕನಕದಾಸ ವೃತ್ತಕ್ಕೆ ಬಂದಾಗ, ಆನೆಯಿಂದ ಕುಮಾರಸ್ವಾಮಿ ಅವರಿಗೆ ಪುಷ್ಪಮಾಲೆ ಹಾಕಿಸಲಾಯಿತು.

ರಾಯಚೂರು ಜಿಲ್ಲೆ ಕರೇಗುಡ್ಡದಿಂದ ಅಂದಾಜು 285 ಕಿ.ಮೀ ದೂರದಲ್ಲಿರುವ ಬಸವ ಕಲ್ಯಾಣದವರೆಗೆಮುಖ್ಯಮಂತ್ರಿ ಹೆಲಿಕಾಪ್ಟರ್‌ ಮೂಲಕ ಬರಬೇಕಿತ್ತು. ‘ಹೆಲಿಕಾಪ್ಟರ್‌ ಬಳಸಿದರೆ ₹15 ಲಕ್ಷ ಖರ್ಚಾಗುತ್ತದೆ. ಮಿತವ್ಯಯಕ್ಕಾಗಿ ನಾನು ಕಾರಿನಲ್ಲೇ ತೆರಳುತ್ತೇನೆ’ ಎಂದು ಮುಖ್ಯಮಂತ್ರಿ ಕರೇಗುಡ್ಡದಲ್ಲಿ ಪ್ರಕಟಿಸಿದ್ದರು. ಅದರಂತೆ ಅಲ್ಲಿ ನಸುಕಿನ 4.30ಕ್ಕೇ ಎದ್ದು, 5.30ರ ಹೊತ್ತಿಗೆ ಅಲ್ಲಿಂದ ಹೊರಟು ಕಲಬುರ್ಗಿ ಮಾರ್ಗವಾಗಿ ಕಾರಿನ ಮೂಲಕ ಬಸವ ಕಲ್ಯಾಣಕ್ಕೆ ಬಂದರು.

ಬಸವ ಕಲ್ಯಾಣದಲ್ಲಿ ಮನೆ ಕುಸಿದು ಆರು ಜನರು ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿ, ಮೃತರ ಕುಟುಂಬದವರಿಗೆ ₹24 ಲಕ್ಷ ಮೊತ್ತದ ಪರಿಹಾರದ ಚೆಕ್‌ ನೀಡಿದರು.

ಬಸವಕಲ್ಯಾಣ ತಲುಪುವಷ್ಟರಲ್ಲಿ ಸಾಕಷ್ಟು ವಿಳಂಬವಾಗಿತ್ತು. ಹೀಗಾಗಿ ಸಾರಿಗೆ ಸಂಸ್ಥೆಯ ಬಸ್‌ ಪ್ರಯಾಣ ರದ್ದುಪಡಿಸಿ ಬಸವ ಕಲ್ಯಾಣದಿಂದ ಕಾರಿನಲ್ಲಿಯೇ ಗ್ರಾಮಕ್ಕೆ ಬಂದರು.

ಜನತಾ ದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಉಜಳಂಬ ಗ್ರಾಮದ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಂದ ₹ 32 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಪ್ರಕಟಿಸಿದರು.

‘ಗ್ರಾಮ ವಾಸ್ತವ್ಯದ ವೇಳೆ 8 ಗಂಟೆಗಳ ಕಾಲ ನಿರಂತರವಾಗಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸುತ್ತೇನೆ. ಪರಿಹಾರಕ್ಕೆ ಸ್ಥಳದಲ್ಲೇ ಆದೇಶ ಮಾಡುತ್ತೇನೆ. ಜನರ ಮನವಿಗಳಿಗೆ ಗೌರವಯುತವಾಗಿ ಸ್ಪಂದಿಸುತ್ತಿದ್ದೇನೆ. ಗ್ರಾಮ ವಾಸ್ತವ್ಯ ಟೀಕಿಸುವವರುಒಂದು ಇಡೀ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಮನವಿ ಸ್ವೀಕರಿಸಿ ನೋಡಲಿ. ಆಗ ಅವರಿಗೆ ಅದರ ಕಷ್ಟದ ಅರಿವಾಗುತ್ತದೆ’ ಎಂದು ಬಿಜೆಪಿಯವರಿಗೆ ಪ್ರತ್ಯುತ್ತರ ನೀಡಿದರು.

‘ನಿಮ್ಮೂರಿಗೆ ಬರುವಾಗ ಹಸಿರು ಕಾಣಲಿಲ್ಲ. ನಾವು ಕೃಷಿಯಲ್ಲಿ ಹಿಂದುಳಿದಿದ್ದೇವೆ. ಮಹಾರಾಷ್ಟ್ರದ ಕಡವಂಚಿ ಗ್ರಾಮಸ್ಥರು ಆಧುನಿಕ ಕೃಷಿ ಪದ್ಧತಿ ಅನುಸರಿಸಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಆ ರೈತರ ಯಶೋಗಾಥೆಯ ಸಾಕ್ಷ್ಯಚಿತ್ರ ತೋರಿಸಿದ್ದೇವೆ. ನೀವೂ ಅವರಂತಾಗಬೇಕು’ ಎಂದು ರೈತರನ್ನು ಹುರಿದುಂಬಿಸಿದರು.ಕೃಷಿಹೊಂಡ, ಬ್ಯಾರೇಜ್‌ ನಿರ್ಮಾಣದ ಭರವಸೆಯನ್ನೂ ನೀಡಿದರು.

‘ಗೋದಾವರಿ ಜಲಾನಯನ ಪ್ರದೇಶದಿಂದ ಬೀದರ್ ಜಿಲ್ಲೆಗೆ 7.86 ಟಿಎಂಸಿ ಅಡಿ ನೀರು ಸಿಗುವ ಸಾಧ್ಯತೆ ಇದೆ. ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಈ ನೀರು ದೊರೆತರೆ ಅದನ್ನು ರೈತರ ಜಮೀನಿಗೆ ಹರಿಸಲು ಬದ್ಧ. ನಮ್ಮ ಸರ್ಕಾರದ ಯೋಜನೆಗಳ ಫಲ ಇನ್ನು ಐದಾರು ತಿಂಗಳಲ್ಲಿ ನಿಮಗೆಲ್ಲ ದೊರೆಯಲಿದೆ’ ಎಂದು ತಿಳಿಸಿದರು.

ಪೊಲೀಸರಿಗೇ ಅಚ್ಚರಿ

ಟೊಂಕ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿರುವ ಬೀದರ್ ತಾಲ್ಲೂಕಿನ ಅಷ್ಟೂರ್‌ನ ಜಹಾಂಗೀರಶಾ ಅವರನ್ನು ಪತ್ನಿ ಆಯೇಷಾ ಹಾಗೂ ಸಂಬಂಧಿಕರು ಹಾಸಿಗೆಯಲ್ಲಿ ಸುತ್ತಿಕೊಂಡು ಜನತಾ ದರ್ಶನಕ್ಕೆ ಹೊತ್ತುಕೊಂಡು ಬಂದಿದ್ದರು.

ಪ್ರವೇಶ ದ್ವಾರದಲ್ಲಿದ್ದ ಪೊಲೀಸರು ಅವರನ್ನು ಕಂಡು ಅಚ್ಚರಿಗೊಂಡರು. ತಕ್ಷಣ ಅವರನ್ನು ಒಳಗೆ ಕಳಿಸಿಕೊಟ್ಟರು. ಇವರ ಸ್ಥಿತಿ ಕಂಡು ಮಮ್ಮಲ ಮರುಗಿದ ಮುಖ್ಯಮಂತ್ರಿ ಸೂಕ್ತ ಪರಿಹಾರದ ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT