ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಮಾಡುತ್ತೇನೆ ಬನ್ನಿ ಎಂದು ಪ್ರಧಾನಿಯೇ ಕರೆದಿದ್ದರು– ಎಚ್‌.ಡಿ.ಕುಮಾರಸ್ವಾಮಿ

Last Updated 28 ಅಕ್ಟೋಬರ್ 2019, 14:48 IST
ಅಕ್ಷರ ಗಾತ್ರ

ಮೋಳೆ (ಬೆಳಗಾವಿ ಜಿಲ್ಲೆ): ‘ಬಿಜೆಪಿ ಜೊತೆ ಸರ್ಕಾರ ನಡೆಸುವುದಾಗಿದ್ದರೆ ಲೋಕಸಭಾ ಚುನಾವಣೆಗಿಂತಲೂ ಮುಂಚೆಯೇ ನಡೆಸುತ್ತಿದ್ದೆ. ನನಗೆ ಪ್ರಧಾನಮಂತ್ರಿ ಅವರಿಂದಲೇ ಆಹ್ವಾನ ಬಂದಿತ್ತು. ಮುಖ್ಯಮಂತ್ರಿ ಮಾಡುತ್ತೇನೆ ಬನ್ನಿ ಎಂದು ಕರೆದಿದ್ದರು. ಆದರೆ, ನಾನು ಹೋಗಲಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮದ ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸಲು ಬಂದಿದ್ದಾಗ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ನಾನು ಯಾರ ಹಂಗಿನಲ್ಲಿಲ್ಲ. ಇಂಥವರಿಗೆ ಬೆಂಬಲ ಕೊಡುತ್ತೇನೆಂದು ಯಾರಿಗೂ ಬರೆದು ಕೊಟ್ಟಿಲ್ಲ’ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.

‘ನಾನ್ಯಾಕೆ ಹೇಳುತ್ತಿದ್ದೇನೆಂದರೆ, ನನಗೆ ರಾಜಕೀಯ ಮುಖ್ಯವಲ್ಲ. ಜನರು ಮುಖ್ಯ. ಅವರ ಸಮಸ್ಯೆಗಳು ಬಗೆಹರಿಯಬೇಕು. ಸರ್ಕಾರ ಕೆಡವಿ, ಮತ್ತೊಮ್ಮೆ ಸರ್ಕಾರ ಬರುವವರೆಗೆ ಇಲ್ಲಿನ ಜನರು ಬೀದಿಯಲ್ಲಿಯೇ ಬಿದ್ದಿರಬೇಕಾ?’ ಎಂದು ಪ್ರಶ್ನಿಸಿದರು.

‘ಉಪ ಚುನಾವಣೆ ನಡೆದ ತಕ್ಷಣ ಈಗಿನ ಸರ್ಕಾರ ಬಿದ್ದುಹೋಗುತ್ತದೆ. ಪುನಃ ಚುನಾವಣೆ ನಡೆಯಲಿದೆ ಎಂದು ಮೇಲಿಂದ ಮೇಲೆ ಹೇಳುತ್ತಿದ್ದೀರಿ ಏಕಿಷ್ಟು ಅರ್ಜೆಂಟು?’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತಿವಿದ ಅವರು, ‘ಹೊಸ ಸರ್ಕಾರ ಬರಬೇಕಾದರೆ ಇನ್ನೂ 5– 6 ತಿಂಗಳು ಬೇಕು. ಅಲ್ಲಿಯವರೆಗೆ ಇನ್ನೂ ಎಷ್ಟು ಜನ ರೈತರು ಸಾಯಬೇಕು? ಎಂದು ಹರಿಹಾಯ್ದರು.

‘ರಾಜ್ಯದಲ್ಲಿ ಯಾವ ಪಕ್ಷದ ಆಡಳಿತ ಇರುತ್ತದೆಯೋ, ಯಾರು ಮುಖ್ಯಮಂತ್ರಿ ಯಾಗಿರುತ್ತಾರೋ ಎಂಬುದು ಮುಖ್ಯವಲ್ಲ. ರಾಜ್ಯದ ಜನರ ಸಮಸ್ಯೆ ಬಗೆಹರಿಯುವುದು ಮುಖ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT