ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳುಗಳಿಗೆ ಪ್ರತಿಕ್ರಿಯೆ ನೀತಿಸಂಹಿತೆ ಉಲ್ಲಂಘನೆಯೇ?

ಬಿಜೆಪಿ ಅಪಪ್ರಚಾರಕ್ಕೆ ಉತ್ತರ ನೀಡುತ್ತಿರುವೆ: ಮುಖ್ಯಮಂತ್ರಿ ಕುಮಾರಸ್ವಾಮಿ ಸಮರ್ಥನೆ
Last Updated 30 ಅಕ್ಟೋಬರ್ 2018, 19:26 IST
ಅಕ್ಷರ ಗಾತ್ರ

ಶಿವಮೊಗ್ಗ:ಸಾಲಮನ್ನಾ ಸೇರಿದಂತೆ ಸರ್ಕಾರದ ಕಾರ್ಯ ಯೋಜನೆಗಳ ಕುರಿತು ಬಿಜೆಪಿ ದಿನಕ್ಕೊಂದು ಸುಳ್ಳು ಹೇಳುತ್ತಿದ್ದರೆ ಪ್ರತಿಕ್ರಿಯೆ ನೀಡದೆ ಸುಮ್ಮನಿರಲು ಆಗುತ್ತದೆಯೇ? ವಾಸ್ತವ ಜನರಿಗೆ ಮನವರಿಕೆ ಮಾಡಿಕೊಟ್ಟರೆ ಅದು ಹೇಗೆ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.

ಬಿಜೆಪಿ ಸಾರ್ವಜನಿಕರಿಗೆ ಸಂಶಯ ಮೂಡುವಂತೆ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿದೆ. ಉತ್ತರ ನೀಡದಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

‘ಯಡಿಯೂರಪ್ಪ ಅವರು ವರ್ಗಾವಣೆ ದಂಧೆಯ ಆರೋಪ ಮಾಡುತ್ತಾರೆ. ಹಿಂದೆ ಅವರ ಜತೆ ಸೇರಿ ಸರ್ಕಾರ ಮಾಡಿದ್ದಾಗ ನಾನು ಗ್ರಾಮ ವಾಸ್ತವ್ಯ ಮಾಡುತ್ತಿದ್ದರೆ ಇತ್ತ ವಿಧಾನಸೌಧದಲ್ಲಿ ಕುಳಿತು ಅವರು ಏನು ಮಾಡುತ್ತಿದ್ದರು ಎನ್ನುವುದು ಗೊತ್ತಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ತಾವು ಇದ್ದಾಗ ಬಳ್ಳಾರಿಯ ಜನಾರ್ದನ ರೆಡ್ಡಿ ಮುಂದಿಟ್ಟುಕೊಂಡು ಏನೆಲ್ಲ ಆಟ ಆಡಿದರು’ ಎಂದು ಮತ್ತೆ ಹೇಳಬೇಕಿಲ್ಲ ಎಂದು ಕುಟುಕಿದರು.

ಯಡಿಯೂರಪ್ಪ ತಮ್ಮ ಒಡೆತನದ ಶಿಕ್ಷಣ ಸಂಸ್ಥೆಗೆ ಚೆಕ್‌ ಮೂಲಕವೇ ಕೋಟಿ ಕೋಟಿ ಹಣ ತೆಗೆದುಕೊಂಡರು. ಮುಖ್ಯಮಂತ್ರಿಯಾಗಿದ್ದ ಮೂರು ವರ್ಷಗಲ್ಲಿ ಸಾಕಷ್ಟು ಆಸ್ತಿ ಮಾಡಿದರು. ಮುಖ್ಯಮಂತ್ರಿ ಸ್ಥಾನದಿಂದ ಇಳಿದ ನಂತರ ಅವರ ಸಂಸ್ಥೆಗಳಿಗೆ ಎಷ್ಟು ಜನ ದೇಣಿಗೆ ನೀಡಿದ್ದಾರೆ? ಅಧಿಕಾರದಲ್ಲಿ ಇದ್ದಾಗ ಏಕೆ ಅಷ್ಟೊಂದು ಹಣ ಬಂತು ಎಂದು ಪ್ರಶ್ನಿಸಿದರು.

ರಾಮನ ಹೆಸರು ಹೇಳಿಕೊಂಡೇ ಬಿಜೆಪಿ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಹಲವು ಬಾರಿ ಅಧಿಕಾರ ಅನುಭವಿಸಿದೆ. ಮೋದಿ ಅಲೆ, ಕೇಂದ್ರ ಸರ್ಕಾರದ ವೈಫಲ್ಯ ಮುಚ್ಚಿಡಲು ಮತ್ತೆ ರಾಮ ಜಪದ ಮೊರೆ ಹೋಗುತ್ತಿದೆ ಎಂದು ಲೇವಡಿ ಮಾಡಿದರು.

‘ನಾನೊಬ್ಬ ಭಾವಜೀವಿ. ಸರಿಯಾದ ಹೆಜ್ಜೆ ಇಟ್ಟಾಗಲೂ ಕೆಲವರು ಅನಗತ್ಯ ಟೀಕೆ ಮಾಡಿದರೆ ನೋವಾಗುತ್ತದೆ. ಕಣ್ಣೀರು ಬರುತ್ತದೆ. ಸಮ್ಮನೆ ಅಳಲು ನಾನೇನು ಗ್ಲಿಸರಿನ್ ಹಚ್ಚಿಕೊಳ್ಳುತ್ತೇನಾ? ಇಸ್ರೆಲ್‌ಗೆ ಹೋದಾಗ ಆದ ಆರೋಗ್ಯ ಸಮಸ್ಯೆ ಪರಿಣಾಮ ಮತ್ತೆ ಬದುಕುವ ನಂಬಿಕೆ ಇರಲಿಲ್ಲ. ಪುನರ್ಜನ್ಮ ಸಿಕ್ಕಿದೆ ಎಂದಿದ್ದೇನೆ. ಸಾಯುವ ಮಾತು ಆಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ವಾಲ್ಮೀಕಿ ಸಮಾಜದ ಕಾರ್ಯಕ್ರಮಕ್ಕೆ ಗೈರುಹಾಜರಾಗಲು ಆರೋಗ್ಯದಲ್ಲಿ ಏರುಪೇರು ಕಾರಣ. ಅದಕ್ಕೆ ಬಿಜೆಪಿ ಬಣ್ಣ ಹಚ್ಚುತ್ತಿದೆ. ವಾಲ್ಮಿಕಿ, ನಾಯಕ ಸಮಾಜ ಎಸ್‌ಟಿಗೆ ಸೇರಲು ದೇವೇಗೌಡರ ಪ್ರಯತ್ನ ಕಾರಣ ಎಂದು ಆ ಸಮಾಜದ ಸಹೋದರರು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಶೇ 52ರಷ್ಟು ಆದಾಯ ಸಂಗ್ರಹ

ಬಜೆಟ್‌ನಲ್ಲಿ ಘೋಷಿಸಿದ ಆದಾಯ ಸಂಗ್ರಹ 6 ತಿಂಗಳಿಗೆ ಶೇ 52 ತಲುಪಿದೆ. ಮಾರ್ಚ್‌ ವೇಳೆಗೆ ಶೇ 100ರ ಗಡಿ ದಾಟಲಾಗುವುದು ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

ಏಪ್ರಿಲ್‌ಗೆ ಶಿಕ್ಷಕರ ಕೌನ್ಸೆಲಿಂಗ್

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಹಲವು ಗೊಂದಲಗಳಿದ್ದವು. ಈಗಾಗಲೇ ಅಕ್ಟೋಬರ್ ಮುಗಿಯುತ್ತಿದೆ. ಶೈಕ್ಷಣಿಕ ವರ್ಷದ ಮಧ್ಯೆ ಮಕ್ಕಳಿಗೆ ತೊಂದರೆಯಾಗುತ್ತದೆ. ಅದಕ್ಕಾಗಿ 2019ರ ಏಪ್ರಿಲ್‌ನಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಪುನರಾರಂಭಿಸಲಾಗುವುದು ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT