ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈತ್ರಿ’ಗೆ ವರ್ಷ: ಸಂಭ್ರಮವೋ, ಶೋಕವೋ?

ದೂರಗಾಮಿ ಯೋಜನೆಗಳಿಗೆ ಸಿಗದ ಪ್ರಾತಿನಿಧ್ಯ: ಕಾಲೆಳೆಯುವುದರಲ್ಲೇ ಕಾಲಹರಣ
Last Updated 21 ಮೇ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ದೋಸ್ತಿ’ ಎಂಬ ಕತ್ತಿಯಲುಗಿನ ಮೇಲೆ ಸಾಗಿ ಬಂದಿರುವ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಇದೇ 23ಕ್ಕೆ ಒಂದು ವರ್ಷ ತುಂಬಲಿದ್ದು, ಆ ದಿನ ಸಂಭ್ರಮಾಚರಣೆಯಾಗಲಿದೆಯೇ ಅಥವಾ ಶೋಕ ಪ್ರಾಪ್ತಿಯಾಗಲಿದೆಯೇ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.

ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಇದ್ದಾಗ ‘ಸಾಂದರ್ಭಿಕ ಶಿಶು’ (ಕುಮಾರಸ್ವಾಮಿಯವರೇ ಹೇಳಿಕೊಂಡಂತೆ) ರೂಪದಲ್ಲಿ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರ ಅಧಿಕಾರಕ್ಕೇರಿದ ದಿನದಿಂದಲೂ ‘ಅತಂತ್ರ’ದ ನೆರಳಿನಲ್ಲೇ ನಲುಗುತ್ತಾ ಬಂದಿದೆ. ಒಂದೆಡೆ ಮೈತ್ರಿಯ ‘ಸೂತ್ರ’ಧಾರರಾದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಅವರ ಆಪ್ತೇಷ್ಟರು ತಂದೊಡ್ಡಿದ ‘ಆತಂಕ’, ಕಿಡಿನುಡಿಗಳ ಬಾರುಕೋಲು ಸರ್ಕಾರದ ಬೆನ್ನಿಗೆ ಬಡಿಯುತ್ತಲೇ ಬಂದಿದ್ದು ಈಗ ಚರಿತ್ರೆ.

ಮೂರು ದಿನಗಳ ಅಲ್ಪಾಯು ಸರ್ಕಾರ ನಡೆಸಿ, ಬಹುಮತ ಸಾಬೀತುಪಡಿಸಲು ಸಾಧ್ಯವೇ ಇಲ್ಲ ಎಂದು ಗೊತ್ತಾಗಿ ರಾಜೀನಾಮೆ ಕೊಟ್ಟು ವಿರೋಧ ಪಕ್ಷದಲ್ಲಿ ಕುಳಿತ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರ ಪಡೆಯ ‘ಆಪರೇಷನ್ ಕಮಲ’ದ ಬಾಂಬ್‌ ಸರ್ಕಾರದ ಬುಡದಲ್ಲೇ ಇತ್ತು. ಆಗ ಸಿಡಿಯುತ್ತದೆ ಈಗ ಸಿಡಿಯುತ್ತದೆ ಎಂಬ ಭೀತಿ ಹುಟ್ಟಿಸುತ್ತಲೇ ಬಂದ ಬಿಜೆಪಿಗರು, ವರ್ಷ ಪೂರ್ತಿ ಯಶಸ್ವಿಯಾಗಲಿಲ್ಲ. ಲೋಕಸಭೆ ಚುನಾವಣೆ ಹೊತ್ತಿನೊಳಗೆ ಚಿಂಚೋಳಿ ಶಾಸಕ ಉಮೇಶ ಜಾಧವ್ ಅವರಿಂದ ರಾಜೀನಾಮೆ ಕೊಡಿಸಿ, ‘ಆಪರೇಷನ್‌’ನಲ್ಲಿ ಮೊದಲ ಬಲಿ ಪಡೆದರು.

ಮೈತ್ರಿ ಸರ್ಕಾರ ಬಂದ ಆರಂಭದಲ್ಲಿ ಬಜೆಟ್ ಮಂಡನೆ ಬೇಡ, ಕುಮಾರಸ್ವಾಮಿ ಹೇಳಿಕೊಂಡಂತೆ ₹46 ಸಾವಿರ ಕೋಟಿ ಸಾಲಮನ್ನಾ ಅಸಾಧ್ಯ ಎಂಬಲ್ಲಿಂದ ಹಿಡಿದು ನಿನ್ನೆ ಮೊನ್ನೆಯವರೆಗೂ ಸ್ವತಃ ಸಿದ್ದರಾಮಯ್ಯ ಸೇರಿ, ಅವರ ಬೆಂಬಲಿಗರು ಸರ್ಕಾರ ನಡೆಗೆ ಅಡಿಗಡಿಗೂ ತಡೆ ಒಡ್ಡುತ್ತಲೇ ಬಂದರು. ‘ರಾಜ್ಯಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೂ ನಮಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ’ ಎಂದು ಸಚಿವ ಸಂಪುಟದ ಸದಸ್ಯರೇ ಆಗಿರುವ ಪುಟ್ಟರಂಗ ಶೆಟ್ಟಿ, ಎಂ.ಟಿ.ಬಿ. ನಾಗರಾಜ್‌ ಬಹಿರಂಗವಾಗಿಯೇ ಹೇಳಿದರು.

ಕಾಂಗ್ರೆಸ್‌ನ ಅನೇಕ ಶಾಸಕರೂ ಅದೇ ಧಾಟಿಯಲ್ಲಿ ಮಾತನಾಡಿದರು. ಸಚಿವ ಸಂಪುಟ ಸದಸ್ಯರಿಗೆ ತಮ್ಮ ನಾಯಕನ (ಮುಖ್ಯಮಂತ್ರಿ) ಮೇಲೆ ವಿಶ್ವಾಸ ಇಲ್ಲ ಎಂದ ಮೇಲೆ ಅದೊಂದು ಪ್ರಜಾಪ್ರಭುತ್ವದ ಅವಹೇಳನವಲ್ಲದೇ ಮತ್ತೇನಲ್ಲ. ಹೀಗೆ ವಿಶ್ವಾಸ ಇಲ್ಲದ ಮೇಲೆ ಸಚಿವರಾಗಿ ಮುಂದುವರಿಯಲು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಅವಕಾಶ ಇಲ್ಲ ಎಂಬ ಸಾಮಾನ್ಯ ತಿಳಿವೂ ಚುನಾಯಿತ ಪ್ರತಿನಿಧಿಗಳಿಗೆ ಇಲ್ಲದೇ ಹೋದುದು ನಮ್ಮ ನಾಡಿನ ದೌರ್ಭಾಗ್ಯವೂ ಹೌದು. ಇದನ್ನು ಪ್ರಶ್ನಿಸಿ, ನ್ಯಾಯಾಲಯದ ಮೊರೆ ಹೋಗಬಹುದಾದ ಅವಕಾಶ ಇದ್ದರೂ ಅದನ್ನು ಮಾಡದೇ ಹಿಂದಿನಿಂದ ಕಾಲೆಳೆಯುವ ಕೆಲಸದಲ್ಲೇ ವಿರೋಧ ಪಕ್ಷ ಬಿಜೆಪಿ ತಲ್ಲೀನವಾಗಿದ್ದು ವಿಪರ್ಯಾಸ.

ಸಿದ್ದರಾಮಯ್ಯ ಬೆಂಬಲಿಗರು ಹೀಗೆ ಆಡುತ್ತಿದ್ದನ್ನು ನೋಡಿ ಜೆಡಿಎಸ್‌ನವರು ಸುಮ್ಮನೇ ಕೂರಲಿಲ್ಲ. ಆಡಳಿತದೊಳಗಿದ್ದು ಎದುರಾಳಿಯಂತೆ ಆಡುತ್ತಿದ್ದ ಸಿದ್ದರಾಮಯ್ಯನವರ ವಿರುದ್ಧ ಅವರು ತಿರುಗಿಬಿದ್ದರು. ತಮ್ಮದೇ ನಿರ್ದಿಷ್ಟ ಉದ್ದೇಶಗಳಿಗಾಗಿ ಒಟ್ಟಿಗೆ ಸೇರಿ ಅಧಿಕಾರ ರಚಿಸಿಕೊಂಡವರು ಪರಸ್ಪರ ಕಾಳೆಲೆಯುವುದರದಲ್ಲಿ ನಿರತರಾದರು. ಇದರಿಂದಾಗಿ ದೂರಗಾಮಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಎಂಬುದು ಬಜೆಟ್‌ ಭಾಷಣದಲ್ಲಿಯೇ ಉಳಿದುಬಿಟ್ಟಿತು.

ವರ್ಷಪೂರ್ತಿ ಸದ್ದು ಮಾಡಿದ್ದು ಭಿನ್ನಮತ, ಬಂಡಾಯ, ಅಪಸ್ವರ, ಕೀಟಲೆ ಹಾಗೂ ಆಪರೇಷನ್ ಎಂಬ ಪದಗಳಷ್ಟೆ.

ಅದು ಬಿಟ್ಟರೆ ಸುಮಾರು 42 ಲಕ್ಷ ರೈತರು ಬ್ಯಾಂಕ್‌ಗಳಲ್ಲಿ ಮಾಡಿದ್ದ ₹46 ಸಾವಿರ ಕೋಟಿ ಸಾಲಮನ್ನಾ ಕುಮಾರಸ್ವಾಮಿಯವರ ಮಹತ್ವಾಕಾಂಕ್ಷೆಯ ಯೋಜನೆ. ಸಾಲಮನ್ನಾದ ಫಲ ಅನರ್ಹರಿಗೆ ಸಿಗಬಾರದು ಎಂಬ ಕಾರಣಕ್ಕೆ ಒಡ್ಡಿದ ಷರತ್ತುಗಳು ರೈತರನ್ನು ಋಣಮುಕ್ತರನ್ನಾಗಿಸುವ ಆಶಯದ ಸ್ವಪ್ನಭಂಗ ಮಾಡಿದವು. ಸರ್ಕಾರ ಹಾಕಿದ ಗೆರೆಗಳನ್ನು ದಾಟಿ ಯೋಜನೆ ಸುಗಮವಾಗಿ ನಡೆಯುತ್ತದೆ ಎಂಬ ಹೊತ್ತಿಗೆ ಚುನಾವಣೆಯ ನೀತಿ ಸಂಹಿತೆ ಬಂದು ಬಿಟ್ಟಿತು. ಹೀಗಾಗಿ 24 ಗಂಟೆಯೊಳಗೆ ಸಾಲಮನ್ನಾ ಘೋಷಣೆ 365 ದಿನವಾದರೂ ಮುಕ್ತಾಯಗೊಳ್ಳಲಿಲ್ಲ.

ಬೆಂಗಳೂರು ಅಭಿವೃದ್ಧಿಗೆ ಬೃಹತ್ತಾದ ನೀಲನಕ್ಷೆ, ಸಾವಿರಾರು ಕೋಟಿ ಯೋಜನೆ ಘೋಷಣೆಗಳು ಅಭಿವೃದ್ಧಿ ದಿಕ್ಕು ಏನು ಎಂದು ತೋರಿಸಿದವು. ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು ಮೀಟರ್ ಬಡ್ಡಿ ದಂಧೆಯಿಂದ ನಲುಗುವುದನ್ನು ತಪ್ಪಿಸಲು ಜಾರಿಗೆ ತಂದ ಬಡವರ ಬಂಧು ಉತ್ತಮ ಯೋಜನೆ. ಕೃಷಿಗೆ ಹೊಸ ಕಸುವು ಕೊಡಲು ಇಸ್ರೇಲ್‌ ಮಾದರಿ ಸಮಗ್ರ ಕೃಷಿ ಪದ್ಧತಿ ಯೋಜನೆ, ಚೀನಾ ವಸ್ತುಗಳಿಗೆ ಸವಾಲು ಒಡ್ಡಬಲ್ಲ ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪಗೆ ಚಾಲನೆ, ಪರಿಶಿಷ್ಟರಿಗಾಗಿ ‘ಪ್ರಬುದ್ಧ’ ಯೋಜನೆಗಳು ಸರ್ಕಾರದ ಹೆಗ್ಗುರುತುಗಳು.

ಇಂತಹ ಜನಪ್ರಿಯ ಯೋಜನೆಗಳನ್ನು ಬಿಟ್ಟರೆ ನೀರಾವರಿ ಯೋಜನೆಗಳಿಗೆ ₹1.5 ಲಕ್ಷ ಕೋಟಿ ನೀಡುವ ಘೋಷಣೆಗೆ ಚಾಲನೆ ಸಿಗಲೇ ಇಲ್ಲ. ಸಾಲಮನ್ನಾ ಹೊರೆಯೇ ಹೆಚ್ಚಾಗಿದ್ದರಿಂದಾಗಿ ಚಾಲ್ತಿಯಲ್ಲಿದ್ದ ಹತ್ತಾರು ನೀರಾವರಿ ಯೋಜನೆಗಳಿಗೆ ನಿರೀಕ್ಷಿತ ಅನುದಾನ ಸಿಗಲೇ ಇಲ್ಲ. ಈ ಸರ್ಕಾರ ಮಾಡಿದೆ ಎಂದು ಹೇಳಬಹು
ದಾದ ಮೂಲಸೌಕರ್ಯ ಯೋಜನೆಗಳಿಗೆ ನಾಂದಿ ಹಾಡಿದ್ದು ಕಾಣಲೇ ಇಲ್ಲ. ‘ದೋಸ್ತಿ’ಗಳ ಮಧ್ಯೆ ಸೃಷ್ಟಿಯಾಗಿದ್ದ ಇಕ್ಕಟ್ಟು, ಬಿಕ್ಕಟ್ಟು ದೂರಗಾಮಿ ಅಭಿವೃದ್ಧಿಗೆ ಹೊಡೆತ ನೀಡಿತು ಎಂದು ವರ್ಷಾಂತ್ಯದಲ್ಲಿ ಹೇಳದೇ ವಿಧಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT