ಮತ ಬೇಟೆಗೆ ‘ಜಾತಿ’ ರಂಗು

ಶುಕ್ರವಾರ, ಏಪ್ರಿಲ್ 26, 2019
33 °C
ಉರಿಬಿಸಿಲಿನ ಮಧ್ಯೆ ಚುನಾವಣೆಯ ಕಾವು; ಆರೋಪ– ಪ್ರತ್ಯಾರೋಪ

ಮತ ಬೇಟೆಗೆ ‘ಜಾತಿ’ ರಂಗು

Published:
Updated:

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಲೋಕಸಭೆಯ 14 ಕ್ಷೇತ್ರಗಳಲ್ಲಿ ಪ್ರಚಾರ ಭರಾಟೆ ತಾರಕಕ್ಕೇರಿದ್ದು, ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ವಾಗ್ಯುದ್ಧವೇ ನಡೆಯುತ್ತಿದೆ. ಜಾತಿ ನಿಂದನೆ, ಆರೋಪಗಳ ಸುರಿಮಳೆಯಾಗುತ್ತಿದೆ.

ಬಿಜೆಪಿಗೆ ಸೋಲುಣಿಸಲೇಬೇಕೆಂದು ಪಣ ತೊಟ್ಟಿರುವ ‘ದೋಸ್ತಿ’ಗಳು (ಜೆಡಿಎಸ್‌– ಕಾಂಗ್ರೆಸ್‌) ಮತದಾರರನ್ನು ಸೆಳೆಯಲು ನಾನಾ ತಂತ್ರ ಪ್ರಯೋಗಿಸುತ್ತಿದ್ದಾರೆ. ಪ್ರಧಾನಿ ಮೋದಿ ವರ್ಚಸ್ಸನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ, ರಾಷ್ಟ್ರೀಯತೆ, ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ.

ಬಣಗಳ ನಡುವೆ ಸಂಘರ್ಷ: ಕೋಲಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ, ಸಂಸದ ಕೆ.ಎಚ್‌. ಮುನಿಯಪ್ಪ, ವಿಧಾನಸಭಾಧ್ಯಕ್ಷ ಕೆ.ಆರ್‌. ರಮೇಶ್‌ಕುಮಾರ್‌ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಚುನಾವಣಾ ಪ್ರಚಾರದ ಸಿದ್ಧತೆ ಸಂಬಂಧ ಚರ್ಚಿಸಲು ನಡೆದ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ರಮೇಶ್‌ಕುಮಾರ್‌ ಬೆಂಬಲಿಗರು, ಮುನಿಯ‍ಪ್ಪ ಬೆಂಬಲಿಗ ಗೋಪಾಲಕೃಷ್ಣ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಮತ್ತೆ ‘ಜಾತಿ‘ ಅಸ್ತ್ರ: ಮಂಡ್ಯದಲ್ಲಿ ಮತ್ತೆ ‘ಜಾತಿ’ ವಿಷಯ ಮುನ್ನೆಲೆಗೆ ಬಂದಿದೆ. ‘ಸುಮಲತಾ ನಾಯ್ಡು, ಗೌಡ್ತಿಯಲ್ಲ’ ಅಸ್ತ್ರ ಪ್ರಯೋಗಿಸುವ ಮೂಲಕ ಒಕ್ಕಲಿಗ ಮತಗಳನ್ನು ಕ್ರೋಡೀಕರಿಸಲು ಜೆಡಿಎಸ್‌ ಮುಂದಾಗಿದೆ. ಎದುರಾಳಿ ಮಣಿಸಲು ಜಾತಿ ಅಸ್ತ್ರ ಮಂಡ್ಯದಲ್ಲಿ ಮೊದಲಲ್ಲ. ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಜಾತಿ ವಿಷಯ ಕೆಲಸ ಮಾಡಿತ್ತು ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ವ್ಯಕ್ತವಾಗಿತ್ತು.

ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಕೆಲಸ ಮಾಡಲು ಸ್ಥಳೀಯ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಕಾಂಗ್ರೆಸ್‌ ಬಾವುಟ ಹಿಡಿದು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ನಡೆಸುತ್ತಿರುವುದು ಕಾಂಗ್ರೆಸ್‌ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಸಂಧಾನ ಫಲಕೊಟ್ಟಿಲ್ಲ.

ರಾಷ್ಟ್ರವಾದಿ– ಜಾತಿವಾದಿ: ‘ನಾನು ರಾಷ್ಟ್ರವಾದಿ, ಸಿದ್ದರಾಮಯ್ಯ ಜಾತಿವಾದಿ‌. ಕುರುಬರ ಹೆಸರಲ್ಲಿ ಉದ್ಧಾರವಾಗಿರುವ ಅವರಿಗೆ ಇದನ್ನು ನೇರವಾಗಿ ಹೇಳಿದರೆ ಸಿಟ್ಟು ಬರುತ್ತದೆ. ಅವರಿಗೆ ಜಾತಿ ಬಿಟ್ಟರೆ ಬೇರೆ ಗೊತ್ತಿಲ್ಲ. ಎಷ್ಟು ಜನ ಕುರುಬರಿಗೆ ಅವರು ಅನುಕೂಲ ಮಾಡಿದ್ದಾರೆ’ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಬೆಳಗಾವಿಯಲ್ಲಿ ಪ್ರಶ್ನಿಸಿದರು.

ನಾಮಪತ್ರ: ಮಲ್ಲಿಕಾರ್ಜುನ ಖರ್ಗೆ (ಗುಲಬರ್ಗಾ), ಪ್ರಹ್ಲಾದ್ ಜೋಷಿ (ಧಾರವಾಡ), ಸಂಗಣ್ಣ ಕರಡಿ (ಕೊಪ್ಪಳ),  ಮಧು ಬಂಗಾರಪ್ಪ (ಶಿವಮೊಗ್ಗ) ಸೇರಿದಂತೆ ಹಲವರು ಬುಧವಾರ ನಾಮಪತ್ರ ಸಲ್ಲಿಸಿದರು.

ಸಿ.ಎಂ ಬೆಂಗಾವಲು ವಾಹನ ತಪಾಸಣೆ‌
ಹಿರೀಸಾವೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ ಚೆಕ್‌ಪೋಸ್ಟ್‌ನಲ್ಲಿ ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕಾರು ಹಾಗೂ ಬೆಂಗಾವಲು ಪಡೆಯ ವಾಹನಗಳನ್ನು ಚುನಾವಣಾ ಸಿಬ್ಬಂದಿ ಮತ್ತು ಪೊಲೀಸರು ತಪಾಸಣೆ ನಡೆಸಿದರು.

ಬೆಂಗಳೂರಿನಿಂದ ಹಿರೀಸಾವೆ ಮೂಲಕ ಶಿವಮೊಗ್ಗಕ್ಕೆ ಸಿ.ಎಂ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಹಾಸನ ಗಡಿಯ ಚೆಕ್‌ಪೋಸ್ಟ್‌ ಬಳಿಗೆ ಬರುತ್ತಿದ್ದಂತೆ ಕಾರನ್ನು ನಿಲ್ಲಿಸಿದ ಅಧಿಕಾರಿಗಳು, ಕಾರಿನ ಹಿಂಬದಿಯ ಡಿಕ್ಕಿ ಮತ್ತಿತರ ಕಡೆ ಪರಿಶೀಲನೆ ನಡೆಸಿದರು. ‘ಸರಿಯಾಗಿ ಚೆಕ್ ಮಾಡಿ, ವಿಡಿಯೊ ಹಾಗೂ ಫೋಟೊ ತೆಗೆದು ಚುನಾವಣಾ ಆಯೋಗಕ್ಕೆ, ಮೇಲಧಿಕಾರಿಗಳಿಗೆ ಕಳುಹಿಸಿ’ ಎಂದು ಕಾರಿನಲ್ಲಿ ಕುಳಿತಿದ್ದ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ಬೆಂಗಾವಲಿಗೆ ಬಂದಿದ್ದ ವಾಹನಗಳನ್ನೂ ಪರಿಶೀಲಿಸಲಾಯಿತು.

2ನೇ ಹಂತ: ನಾಮಪತ್ರ ಸಲ್ಲಿಕೆ ಇಂದು ಕೊನೆ
ರಾಜ್ಯದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಿಗೆ ಉಮೇದುವಾರಿಕೆ ಸಲ್ಲಿಸಲು ಗುರುವಾರ (ಏ. 4) ಕೊನೆಯ ದಿನ. ಈವರೆಗೆ 172 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

**
ಪ್ರಾದೇಶಿಕ ಪಕ್ಷಗಳಿಗೆ ರಾಷ್ಟ್ರೀಯ ಹಿತಾಸಕ್ತಿ ಇಲ್ಲ ಎನ್ನುವ ಬಿಜೆಪಿ ಹಾಗೂ ಮೋದಿ ಬುರುಡೆ ಬಿಡುವುದನ್ನೇ ರಾಷ್ಟ್ರೀಯ ಹಿತಾಸಕ್ತಿ ಎಂದುಕೊಂಡಿದ್ದಾರೆ.
ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

**
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶದ್ರೋಹ ಕಾಯ್ದೆ ರದ್ದು ಮಾಡುತ್ತೇವೆ ಎಂದು ಹೇಳಿರುವುದು ಮೂರ್ಖತನ.
–ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !