ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23ಕ್ಕೆ ಸರ್ಕಾರದ ಭವಿಷ್ಯ ನಿರ್ಧಾರ: ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆ

Last Updated 4 ಮೇ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು/ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟ ಗಳಿಸುವ ಸ್ಥಾನಗಳ ಆಧಾರದಲ್ಲಿ ರಾಜ್ಯ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

ಅತೃಪ್ತ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿದ್ದ ‘ಕಮಲ ಪಡೆ’, ಕಳೆದ ಆರು ತಿಂಗಳಲ್ಲಿ ಮೈತ್ರಿ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ನಡೆಸಿತ್ತು. ಮೂರು ಸಲ ‘ಆಪರೇಷನ್‌ ಕಮಲ’ದ ಯತ್ನ ವಿಫಲಗೊಂಡಿತ್ತು. ಫಲಿತಾಂಶ ಬಂದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂಬ ಅಮಿತ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದಾರೆ.‌

ಬೆಂಗಳೂರಿನಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, ‘ಮೈತ್ರಿ ಸರ್ಕಾರ ಅಪಾಯದಲ್ಲಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಸಾಕಷ್ಟು ಗೊಂದಲವಿದೆ. ಸಿದ್ದರಾಮಯ್ಯ, ಎಚ್‌.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ರಾಜಕೀಯ ಧ್ರುವೀಕರಣದ ಬಗ್ಗೆ ಕಾದು ನೋಡೋಣ. ನಾವು 22 ಸ್ಥಾನಗಳನ್ನು ಗೆಲ್ಲಲಿದ್ದೇವೆ. ಆ ಬಳಿಕ ರಾಜಕೀಯದಲ್ಲಿ ಸಾಕಷ್ಟು ಏರುಪೇರುಗಳಾಗಲಿವೆ’ ಎಂದರು.

‘ಶೀಘ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ’ ಎಂದು ಆ ಪಕ್ಷದ ಶಾಸಕ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಮಾತನಾಡಿದ ಅರಣ್ಯ ಸಚಿವ ಸತೀಶ ಜಾರಕಿಹೊಳಿ, ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಲಭಿಸಿದರೆ ರಾಜ್ಯದಲ್ಲಿ ‘ಆಪರೇಷನ್‌ ಕಮಲ’ ನಡೆಯುವ ಸಾಧ್ಯತೆ ಇದೆ. ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಪ್ರಯತ್ನಿಸಲಿದ್ದಾರೆ’ ಎಂದರು.

‘ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿರುವ ಸಹೋದರ, ಶಾಸಕ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಿದರೆ ಉಪ ಚುನಾವಣೆ ನಡೆಸಲು ನಾವು ಸಿದ್ಧರಿದ್ದೇವೆ. ಅದಕ್ಕಾಗಿ ಪಕ್ಷವನ್ನು ಸಜ್ಜುಗೊಳಿಸಿದ್ದೇವೆ’ ಎಂದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ‘2014ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದಷ್ಟೇ ಸ್ಥಾನಗಳನ್ನು ಬಿಜೆಪಿ ಗಳಿಸಿದರೆ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ಮುಂದುವರಿಸಬಹುದು. ಸರ್ಕಾರ ರಚಿಸುವ ಅವರ ಕನಸು ಕೈಗೂಡುವುದಿಲ್ಲ. ಮೈತ್ರಿ ಸರ್ಕಾರ ಐದು ವರ್ಷ ಆಡಳಿತ ನಡೆಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‌ಅತೃಪ್ತರನ್ನು ಸೆಳೆಯಲು ರಮೇಶ್‌ ಯತ್ನ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಈಗಾಗಲೇ ಪ್ರಕಟಿಸಿರುವ ಕಾಂಗ್ರೆಸ್‌ನ ಬಂಡಾಯ ಶಾಸಕ ರಮೇಶ ಜಾರಕಿಹೊಳಿ ಅವರು ಅತೃಪ್ತರ ಗುಂಪಿನ ಬಲ ಹೆಚ್ಚಿಸಲು ಮತ್ತೊಮ್ಮೆ ಪ್ರಯತ್ನ ಆರಂಭಿಸಿದ್ದಾರೆ.

ಅಥಣಿ ಶಾಸಕ ಮಹೇಶ ಕುಮಠಳ್ಳಿ ಹಾಗೂ ಕೆ‍ಪಿಜೆಪಿ ಶಾಸಕ ಆರ್.ಶಂಕರ್ ಅವರ ಜತೆಯಲ್ಲಿ ನಗರದಲ್ಲಿ ಶನಿವಾರ ಮಾತುಕತೆ ನಡೆಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಶಂಕರ್ ಅವರನ್ನು ಸಂಪುಟ ಪುನರಾಚನೆಯ ವೇಳೆ ಕೈಬಿಡಲಾಗಿತ್ತು. ಬಳಿಕ ಅವರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್‌ ಪಡೆದಿದ್ದರು. ಮಹೇಶ ಅವರು ರಮೇಶ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT