‘ಆಪರೇಷನ್‌’ ಮಾಹಿತಿ ಸೋರಿಕೆಯಿಂದಾಗಿ ಹೊಯ್‌ಕೈ;ಆಸ್ಪತ್ರೆಗೆ ದಾಖಲಾದ ಆನಂದ್‌ ಸಿಂಗ್

7

‘ಆಪರೇಷನ್‌’ ಮಾಹಿತಿ ಸೋರಿಕೆಯಿಂದಾಗಿ ಹೊಯ್‌ಕೈ;ಆಸ್ಪತ್ರೆಗೆ ದಾಖಲಾದ ಆನಂದ್‌ ಸಿಂಗ್

Published:
Updated:

ಬೆಂಗಳೂರು/ರಾಮನಗರ: ‘ಆಪರೇಷನ್ ಕಮಲ'ದ ಕುರಿತು ‘ಗೂಢಚರ್ಯೆ’ ನಡೆಸಿ ಕಾಂಗ್ರೆಸ್‌ನ ಹೈಕಮಾಂಡ್‌ ಎದುರು ಮಾಹಿತಿ ಸೋರಿಕೆಯಾದ ವಿಷಯ, ಆ ಪಕ್ಷದ ಶಾಸಕರಾದ ಆನಂದ್‌ ಸಿಂಗ್‌ ಹಾಗೂ ಜೆ.ಎನ್‌. ಗಣೇಶ್‌ ಅವರ ನಡುವೆ ಹೊಡೆದಾಟಕ್ಕೆ ಕಾರಣವಾಗಿದೆ. ಈ ಘಟನೆಯಿಂದ ‘ಕೈ’ ಪಾಳಯದ ನಾಯಕರು ಮುಜುಗರಕ್ಕೆ ಒಳಗಾಗುವಂತಾಗಿದೆ.

ಘಟನೆಯಲ್ಲಿ ಆನಂದ್‌ ಸಿಂಗ್‌ ಅವರ ತಲೆ ಹಾಗೂ ಕಿಬ್ಬೊಟ್ಟೆಗೆ ಗಾಯವಾಗಿದ್ದು, ಅವರನ್ನು ಶೇಷಾದ್ರಿಪುರದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. 

‘ಆಪರೇಷನ್ ಕಮಲ'ಕ್ಕೆ ಬೆದರಿ ಕಾಂಗ್ರೆಸ್‌ ಶಾಸಕರ ದಂಡು ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಎರಡು ದಿನಗಳಿಂದ ವಾಸ್ತವ್ಯ ಹೂಡಿದೆ. ರೆಸಾರ್ಟ್‌ನಿಂದ ವಾಪಸಾಗಲು ಸಿದ್ಧತೆ ನಡೆಸಿದ್ದಾಗಲೇ ಈ ಘಟನೆ ನಡೆದಿದೆ. ‌

ಪೂರ್ವನಿಗದಿಯಂತೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಭಾನುವಾರ ಪ್ರತಿ ಶಾಸಕರ ಅಹವಾಲು ಆಲಿಸಬೇಕಿತ್ತು. ಹೊಡೆದಾಟದ ಘಟನೆಯಿಂದಾಗಿ, ಅಹವಾಲು ಆಲಿಸುವ ಕಾರ್ಯ ಕೈಬಿಟ್ಟು, ಒಡಕಿಗೆ ತೇಪೆ ಹಚ್ಚುವ ಕೆಲಸದಲ್ಲಿ ಎಲ್ಲ ನಾಯಕರು ಮಗ್ನರಾಗುವಂತಾಯಿತು. ಹೊಡೆದಾಟದ ಘಟನೆ ಕಾಂಗ್ರೆಸ್‌ ಶಾಸಕರಲ್ಲಿ ಒಗ್ಗಟ್ಟಿಲ್ಲ ಎಂಬುದರ ಸುಳಿವನ್ನೂ ನೀಡಿತು.

ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದ ಕೈ ಪಾಳಯದ ಗಣಿನಾಡಿನ ಶಾಸಕರು ಭಾನುವಾರ ನಸುಕಿನಲ್ಲಿ ಪಾರ್ಟಿ ಮಾಡಿದ್ದರು. ಈ ವೇಳೆ ‘ಮಾಹಿತಿ ಸೋರಿಕೆ’ ವಿಚಾರ ಚರ್ಚೆಗೆ ಬಂದಿತ್ತು. ಆಗ ಆನಂದ್ ಸಿಂಗ್‌ (ಹೊಸಪೇಟೆ) ಮತ್ತು ಗಣೇಶ್ (ಕಂಪ್ಲಿ) ಮಧ್ಯೆ ಬಿರುಸಿನ ವಾಗ್ವಾದ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತ ತಲುಪಿತು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಆಮಿಷಕ್ಕೆ ಒಳಗಾದ ಶಾಸಕರ ಪಟ್ಟಿಯಲ್ಲಿ ಗಣೇಶ್‌ ಹೆಸರೂ ಇತ್ತು. ಅತೃಪ್ತ ಶಾಸಕರು ಮುಂಬೈನಲ್ಲಿರುವ ಬಗ್ಗೆ ಕಾಂಗ್ರೆಸ್‌ ವರಿಷ್ಠರಿಗೆ ಆನಂದ್ ಸಿಂಗ್ ಮಾಹಿತಿ ನೀಡಿದ್ದರು. ಈ ವಿಷಯವನ್ನು ಏರುಧ್ವನಿಯಲ್ಲಿ ಗಣೇಶ ಪ್ರಶ್ನಿಸಿದ್ದು ಗಲಾಟೆಗೆ ಕಾರಣ ಎಂದು ಹೇಳಲಾಗಿದೆ.

ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಪ್ರಕರಣವನ್ನು ಅಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದಿದೆ.

ಇದನ್ನೂ ಓದಿ: ಆನಂದ್‌ ಸಿಂಗ್‌ ಮೇಲೆ ಹಲ್ಲೆ; ಗುಟ್ಟು ರಟ್ಟು ಮಾಡಿದ್ದಕ್ಕೆ ಸಿಟ್ಟು

ಮಾಹಿತಿ ಸಿಗುತ್ತಿದ್ದಂತೆ ಕೊಚ್ಚಿಯಲ್ಲಿದ್ದ ವೇಣುಗೋಪಾಲ್‌ ನೇರವಾಗಿ ರೆಸಾರ್ಟ್‌ಗೆ ಧಾವಿಸಿ ಬಂದರು. ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಜೊತೆ ಅವರು ಚರ್ಚೆ ನಡೆಸಿದರು.

ಮುಚ್ಚಿ ಹಾಕಲು ಯತ್ನ: ಆರಂಭದಲ್ಲಿ ಘಟನೆಯನ್ನು ಮುಚ್ಚಿ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರು, ಏನೂ ನಡೆದೇ ಇಲ್ಲ ಎಂಬಂತೆ ವಾದಿಸಿದ್ದು ಅನುಮಾನಗಳಿಗೆ ಕಾರಣವಾಗಿತ್ತು.

‘ಆನಂದ್ ಸಂಬಂಧಿಕರ ಮದುವೆಗೆ ಹೋಗಿದ್ದಾರೆ. ಸದ್ಯದಲ್ಲಿಯೇ ಬರುತ್ತಾರೆ’ ಎಂದು ರೆಸಾರ್ಟ್‌ ವಾಸ್ತವ್ಯದ ಉಸ್ತುವಾರಿ ಹೊತ್ತಿರುವ ಸಚಿವ ಡಿ.ಕೆ. ಶಿವಕುಮಾರ್ ಬೆಳಿಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಡಿ.ಕೆ. ಸುರೇಶ್‌, ‘ಎದೆ ನೋವು ಕಾಣಿಸಿಕೊಂಡ ಕಾರಣ ಆನಂದ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ’ ಎಂದರು.

ಹೊರಬರದ ಗಣೇಶ್‌: ಘಟನೆಯಿಂದ ವಿಚಲಿತಗೊಂಡಿರುವ ಗಣೇಶ ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ಕೊಠಡಿಯಿಂದ ಹೊರ ಬರಲಿಲ್ಲ. ಘಟನೆ ಬಳಿಕ ಡಿ.ಕೆ. ಶಿವಕುಮಾರ್ ಅವರು ಗಣೇಶ್‌ ಹಾಗೂ ಭೀಮಾ ನಾಯ್ಕ್‌ ಅವರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಹಲ್ಲೆ ನಡೆದಿದ್ದರೆ ದೂರು

ಆನಂದ್ ಸಿಂಗ್‌ ಪತ್ನಿ ಲಕ್ಷ್ಮಿ ಸಿಂಗ್ ತಮ್ಮ ಮಕ್ಕಳ ಜೊತೆ ಮುಂಬೈನಲ್ಲಿ ಸಂಬಂಧಿಕರ ಮದುವೆ ಅರತಕ್ಷತೆಗೆ ತೆರಳಿದ್ದು, ಸಂಜೆ ಬೆಂಗಳೂರಿಗೆ ವಾಪಸ್ ಆದರು. ‘ಪತಿ ಮೇಲೆ ಹಲ್ಲೆ ನಡೆದಿರುವುದೇ ನಿಜವಾದಲ್ಲಿ ಪೊಲೀಸರಲ್ಲಿ ಪ್ರಕರಣ ದಾಖಲಿಸುತ್ತೇನೆ’ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ನಿಧಿ ಹಂಚಿಕೆಯಲ್ಲೂ ಮನಸ್ತಾಪ

ವಿಧಾನಸೌಧದಲ್ಲಿ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬಳ್ಳಾರಿ ಜಿಲ್ಲಾ ಗಣಿ ನಿಧಿ ಕುರಿತು ಶನಿವಾರ ನಡೆದ ಸಭೆಯಲ್ಲಿ ಈ ಶಾಸಕರು ಭಾಗವಹಿ
ಸಿದ್ದರು. ರಾತ್ರಿ ರೆಸಾರ್ಟ್‌ಗೆ ವಾಪಸು ಬಂದಿದ್ದ ಈ ಶಾಸಕರ ಮಧ್ಯೆ, ಈ ನಿಧಿ ಹಂಚಿಕೆ ವಿಷಯದಲ್ಲೂ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.

* ಕಾಂಗ್ರೆಸ್‌ ಶಾಸಕರು ಮದ್ಯಪಾನ ಮಾಡಿ ಹೊಡೆದಾಡಿಕೊಂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ರಾಜ್ಯಪಾಲರು ವರದಿ ತರಿಸಿಕೊಳ್ಳಬೇಕು

-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ, ರಾಜ್ಯ ಘಟಕದ ಅಧ್ಯಕ್ಷ

* ಶಾಸಕರ ಮಧ್ಯೆ ಗಲಾಟೆ ಆ‌ಗಿರುವುದು ನಿಜ. ಯಾರದು ತಪ್ಪು, ಏನು ಎಂಬುದನ್ನು ಅವರ ಜೊತೆ ಮಾತನಾಡಿದ ಬಳಿಕವಷ್ಟೇ ಗೊತ್ತಾಗಲಿದೆ

-ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

ಬರಹ ಇಷ್ಟವಾಯಿತೆ?

 • 16

  Happy
 • 3

  Amused
 • 1

  Sad
 • 1

  Frustrated
 • 4

  Angry

Comments:

0 comments

Write the first review for this !