ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಬಲಪಡಿಸಲು ಮುಂದಾದ ಕಾಂಗ್ರೆಸ್ ಮುಖಂಡರು: ಅನರ್ಹರ ಕ್ಷೇತ್ರಕ್ಕೆ ವೀಕ್ಷಕರ ತಂಡ

Last Updated 1 ಆಗಸ್ಟ್ 2019, 19:01 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್, ಜೆಡಿಎಸ್‌ನ 17 ಕ್ಷೇತ್ರಗಳಲ್ಲೂ ಪಕ್ಷ ಬಲಪಡಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈಹಾಕಿದ್ದು, ಪ್ರತಿ ಕ್ಷೇತ್ರಕ್ಕೂ ಹಿರಿಯ ಮುಖಂಡರ ನೇತೃತ್ವದಲ್ಲಿ ತಂಡ ರಚಿಸಲು ನಿರ್ಧರಿಸಿದೆ.

ಈ ತಂಡ ಭೇಟಿ ನೀಡಿ, ಪಕ್ಷ ಬಲಪಡಿಸುವ ಕುರಿತು ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಜತೆಗೆ ಚರ್ಚೆ ನಡೆಸಲಿದೆ. ನಂತರ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಲಿದೆ. ಈ ವರದಿ ಆಧರಿಸಿ ಪಕ್ಷಕ್ಕೆ ಶಕ್ತಿ ತುಂಬಲು ನಾಯಕರುಮುಂದಾಗಿದ್ದಾರೆ.

ಅನರ್ಹರಿಗೆ ಕೋರ್ಟ್ ತಡೆಯಾಜ್ಞೆ ನೀಡುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಉಪಚುನಾವಣೆಗೆ ಸಜ್ಜಾಗುವುದು, ಎಲ್ಲ 17 ಕ್ಷೇತ್ರಗಳನ್ನು ಕೇಂದ್ರೀಕರಿಸಿ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಬಗ್ಗೆ ಗುರುವಾರ ಸುಮಾರು ಎರಡು ಗಂಟೆ ಹಿರಿಯ ಮುಖಂಡರು ಸುದೀರ್ಘ ಚರ್ಚೆ ನಡೆಸಿದರು.

ಜೆಡಿಎಸ್‌ನಿಂದ ಆಯ್ಕೆಯಾಗಿ ಆ ಪಕ್ಷ ತೊರೆದವರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬಲಪಡಿಸುವ ಕೆಲಸ ಆಗಬೇಕು. ಆ ಮೂರು ಕ್ಷೇತ್ರಗಳಲ್ಲಿ ಹಿಂದೆ ಸ್ಪರ್ಧಿಸಿ ಪರಾಭವಗೊಂಡಿರುವವರನ್ನೇ ಮತ್ತೆ ನಿಲ್ಲಿಸಬೇಕೆ, ಇಲ್ಲವೆ ಪರ್ಯಾಯ ನಾಯಕರ ಅಗತ್ಯವಿದೆಯೆ ಎಂಬ ಬಗ್ಗೆ ಕ್ಷೇತ್ರಕ್ಕೆ ಭೇಟಿ ನೀಡುವ ತಂಡ ಅಧ್ಯಯನ ನಡೆಸಲಿದೆ.

ಪಕ್ಷ ಗೆದ್ದಿದ್ದ 14 ಕ್ಷೇತ್ರಗಳನ್ನು ಶತಾಯಗತಾಯ ಮತ್ತೆ ಕೈವಶ ಮಾಡಿಕೊಳ್ಳಲೇಬೇಕು. ಇಲ್ಲವಾದರೆ ಬಿಜೆಪಿ ಮುಂದೆ ಪಕ್ಷದ ಶಕ್ತಿ ಕುಗ್ಗಿದೆ ಎಂಬ ಸಂದೇಶ ರವಾನೆಯಾಗುತ್ತದೆ. ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದು, ಈಗ ಮತ್ತೆ ಕ್ಷೇತ್ರಗಳನ್ನು ಉಳಿಸಿಕೊಳ್ಳದಿದ್ದರೆ ಪಕ್ಷ ಮುಜುಗರ ಅನುಭವಿಸಬೇಕಾಗುತ್ತದೆ.

ಸಾರ್ವಜನಿಕವಾಗಿ ಬೇರೆಯದೇ ರೀತಿಯ ಸಂದೇಶ ರವಾನೆಯಾಗಲಿದೆ. 17ರಲ್ಲಿ 10 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಸರ್ಕಾರ ಗಂಡಾಂತರದಿಂದ ಪಾರಾಗುತ್ತದೆ. ಈ ಎಲ್ಲ ಆಪತ್ತಿನಿಂದ ಪಾರಾಗಬೇಕಾದರೆ ಶತಾಯಗತಾಯ 14 ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಬಗ್ಗೆ ಎಲ್ಲರೂ ಶಕ್ತಿಮೀರಿ ಪ್ರಯತ್ನ ಹಾಕುವಂತೆ ಸಲಹೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಪಕ್ಷಕ್ಕೆ ದ್ರೋಹ ಬಗೆದು ಹೋದವರಿಗೆ ತಕ್ಕ ಶಾಸ್ತಿ ಮಾಡಬೇಕಿದೆ. ಉಪಚುನಾವಣೆ ಎದುರಾದರೆ ಪಕ್ಷ ನಿಷ್ಠರು, ಬದ್ಧತೆ ಇರುವವರಿಗೆ ಟಿಕೆಟ್ ನೀಡಬೇಕು. ಈಗಿನಿಂದಲೇ ಚುನಾವಣೆಗೆ ಸಿದ್ಧತೆ ಆರಂಭಿಸುವುದು, ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಮರೆತು ಒಮ್ಮತದಿಂದ ಕೆಲಸ ಮಾಡಲು ಚರ್ಚಿಸಲಾಯಿತು’ ಎಂದು ಸಭೆನಂತರ ಕೆ‍ಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.

ನಿಲ್ಲದ ಪ್ರಯತ್ನ: ‘ಆಪರೇಷನ್ ಕಮಲ’ ಮುಂದುವರಿದಿದ್ದು, ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಈಗಲೂ ಸೆಳೆಯಲಾಗುತ್ತದೆ. ಹಣ, ಅಧಿಕಾರಕ್ಕೆ ಬಗ್ಗದಿದ್ದರೆ ಬೇರೆ ರೀತಿಯ ಒತ್ತಡ ಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ಮೈತ್ರಿಯಿಂದ ಅಂತರ
ಜೆಡಿಎಸ್ ಜತೆ ಮೈತ್ರಿ ಮುಂದುವರಿಸುವ ಬಗ್ಗೆ ಸಭೆಯಲ್ಲಿ ಸ್ಪಷ್ಟತೆ ಮೂಡಿಲ್ಲ. ಮೈತ್ರಿ ಸರ್ಕಾರ ಪತನದ ನಂತರ ನಾವು, ಜೆಡಿಎಸ್‌ನವರು ಪ್ರತ್ಯೇಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲೂ ಇದೇ ರೀತಿ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ಸಾರ್ವಜನಿಕವಾಗಿ ಎಲ್ಲೂ ಮೈತ್ರಿ ಮಾತುಗಳನ್ನಾಡಬಾರದು. ಆಗ ತಾನಾಗಿಯೇ ಮೈತ್ರಿ ವಿಚಾರ ದೂರ ಸರಿಯುತ್ತದೆ ಎಂಬ ನಿಲುವನ್ನು ಕಾಂಗ್ರೆಸ್ ಮುಖಂಡರು ತಾಳಿದ್ದಾರೆ.

‘ದಾಖಲೆ ಇದ್ದರೆ ಸಿದ್ದರಾಮಯ್ಯ ಬಿಡುಗಡೆಗೊಳಿಸಲಿ’
ಶಿರಸಿ:
‘ಪಕ್ಷ ಬಿಡಲು ಕೋಟಿ ಹಣ ಪಡೆದಿದ್ದೇವೆ ಎನ್ನುವುದಕ್ಕೆ ಸಿದ್ದರಾಮಯ್ಯ ಅವರಲ್ಲಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ’ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶಿವರಾಮ ಹೆಬ್ಬಾರ್ ಸವಾಲೆಸೆದರು.

‘ಅನರ್ಹರಾದ ಶಾಸಕರ ಮೇಲೆ ಅನಗತ್ಯ ಆರೋಪ ಮಾಡುವುದು, ಬೇಜವಾಬ್ದಾರಿ ಹೇಳಿಕೆ ನೀಡುವುದು ಸಿದ್ದರಾಮಯ್ಯ ಅವರ ಸ್ಥಾನಮಾನಕ್ಕೆ ಭೂಷಣವಲ್ಲ. ನಾವು ಅಧಿಕಾರ ಮತ್ತು ಹಣಕ್ಕಾಗಿ ಪಕ್ಷದಿಂದ ಹೊರ ಹೋಗಿದ್ದೇವೆ ಎಂದು ಮಾತನಾಡುವವರು, ಅಧಿಕಾರ ಬಿಡಲು ಸಿದ್ಧವಿದ್ದಿದ್ದರೆ ಪಕ್ಷಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಕೊನೆಯ ತನಕವೂ ಅಧಿಕಾರ ಹಿಡಿದಿರಬೇಕು ಎಂಬ ಕಾಂಗ್ರೆಸ್‌ನ ಕೆಲವರ ಮಾನಸಿಕ ಸ್ಥಿತಿಯೇ ಈ ಪರಿಸ್ಥಿತಿಗೆ ಕಾರಣವಾಯಿತು. ಪಕ್ಷದ ನಾಯಕತ್ವ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಇದಾಗಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT