ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರ ವಾಸ್ತವ್ಯ, ತಡರಾತ್ರಿ ಶಾಸಕರೊಂದಿಗೆ ಸಭೆ

Last Updated 19 ಜನವರಿ 2019, 0:49 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ಕಾಂಗ್ರೆಸ್ ಶಾಸಕರ ಪಡೆಯು ಇಲ್ಲಿನ ಈಗಲ್‌ಟನ್ ರೆಸಾರ್ಟಿನಲ್ಲಿ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಿದ್ದು, ತಡರಾತ್ರಿವರೆಗೂ ಶಾಸಕರ ಸಭೆ ನಡೆದಿತ್ತು.

ರಾತ್ರಿ 8.50ರ ಸುಮಾರಿಗೆ ಶಾಸಕರ ಒಂದು ತಂಡವು ಬಸ್‌ನಲ್ಲಿ ರೆಸಾರ್ಟಿಗೆ ಬಂದಿಳಿಯಿತು. ನಂತರದಲ್ಲಿ ಉಳಿದ ಶಾಸಕರು, ಸಚಿವರು ಖಾಸಗಿ ವಾಹನಗಳಲ್ಲಿ ರೆಸಾರ್ಟಿನತ್ತ ಧಾವಿಸಿದರು. ರಾತ್ರಿ 10 ಗಂಟೆ ವೇಳೆಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್‌, ಗೃಹ ಸಚಿವ ಎಂ.ಬಿ. ಪಾಟೀಲ್‌ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಬಂದರು. ನಂತರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡುರಾವ್ ಸಹ ರೆಸಾರ್ಟಿಗೆ ಧಾವಿಸಿದರು.

ರಾತ್ರಿ ಶಾಸಕರೊಟ್ಟಿಗೆ ಊಟ ಮುಗಿಸಿದ ಬಳಿಕ ವೇಣುಗೋಪಾಲ್‌ ಹಾಗೂ ಸಿದ್ದರಾಮಯ್ಯ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಬಿಜೆಪಿ ಆಮಿಷಕ್ಕೆ ಒಳಗಾಗದಂತೆ ಎಚ್ಚರಿಕೆ ನೀಡಿದರು.

76 ಶಾಸಕರೂ ರೆಸಾರ್ಟಿಗೆ ಬರಲಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಹೇಳಿದ್ದರೂ ಒಳಗೆ ಬಂದವರೆಷ್ಟು ಎಂಬ ಮಾಹಿತಿ ಖಚಿತವಾಗಿಲ್ಲ. ಶಾಸಕರಾದ ಪ್ರತಾಪ್‌ಗೌಡ ಪಾಟೀಲ, ಆನಂದ್‌ ಸಿಂಗ್‌, ಬಿ.ಕೆ. ಸಂಗಮೇಶ್‌ ಸಹಿತ ಬಹುತೇಕರು ರೆಸಾರ್ಟಿಗೆ ಬಂದಿದ್ದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಧಾವಿಸಿದ್ದರು. ‘ಬಿ.ಸಿ. ಪಾಟೀಲರ ಮಗಳ ಮದುವೆಗೆ ಹೋದ ಕಾರಣ ಬರುವುದು ತಡವಾಯಿತು. ಅದನ್ನೇ ಪಕ್ಷವಿರೋಧಿ ಎಂದು ಬಿಂಬಿಸಬೇಡಿ’ ಎಂದು ಪ್ರತಾಪ್‌ಗೌಡ ಪಾಟೀಲ ಹಾಗೂ ಅಮರೇಗೌಡ ಬಯ್ಯಾಪುರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಶಾಸಕರಿಗಾಗಿ ಈಗಲ್‌ಟನ್‌ ರೆಸಾರ್ಟಿನಲ್ಲಿ 40 ಹಾಗೂ ವಂಡರ್ ಲಾ ರೆಸಾರ್ಟಿನಲ್ಲಿ 20 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ರಾತ್ರಿ12ರ ಸುಮಾರಿಗೆ ಕೆಲವು ಶಾಸಕರುವಂಡರ್ ಲಾಗೆ ತೆರಳಿದರು.

ಕೈ ಮುಗಿದ ಡಿಕೆಶಿ

ರಾತ್ರಿ 10ರ ಸುಮಾರಿಗೆ ಕಾರಿನಲ್ಲಿ ರೆಸಾರ್ಟಿಗೆ ಬಂದ ಸಚಿವ ಡಿ.ಕೆ. ಶಿವಕುಮಾರ್ ಮಾಧ್ಯಮದವರಿಗೆ ಕೈ ಮುಗಿದು ಏನನ್ನೂ ಕೇಳಬೇಡಿ ಎನ್ನುತ್ತಲೇ ಒಳ ನಡೆದರು.

ಒಂದೇ ಬಸ್‌

ಶಾಸಕರು ವಿಧಾನಸೌಧದಿಂದ ಎರಡು ಬಸ್‌ನಲ್ಲಿ ಹೊರಟಿದ್ದರಾದರೂ ರೆಸಾರ್ಟಿಗೆ ಒಂದು ಬಸ್‌ ಮಾತ್ರ ಬಂದಿತು. ಮಾರ್ಗ ಮಧ್ಯೆ ಇನ್ನೊಂದು ಬಸ್‌ನಲ್ಲಿನ ಶಾಸಕರು ಖಾಸಗಿ ಕಾರುಗಳಿಗೆ ಸ್ಥಳಾಂತರಗೊಂಡಿದ್ದರು.

ರೆಸಾರ್ಟಿಗೆ ಪೊಲೀಸರು ಬಿಗಿಭದ್ರತೆ ಒದಗಿಸಿದ್ದು. ಮಾಧ್ಯಮವೂ ಸೇರಿದಂತೆ ಅನ್ಯರಿಗೆ ಪ್ರವೇಶ ನಿರಾಕರಿಸಲಾಗಿದೆ. ಮೊದಲೇ ಕೊಠಡಿ ಕಾಯ್ದಿರಿಸಿದವರನ್ನು ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ. ಸ್ಥಳೀಯ ಜೆಡಿಎಸ್‌ ಶಾಸಕ ಎ.ಮಂಜುನಾಥ್‌ ಸಹ ರೆಸಾರ್ಟ್‌ಗೆ ಭೇಟಿ ನೀಡಿದ್ದರು.

ಸುರೇಶ್‌ಗೆ ಸಾರಥ್ಯ

ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಅವರಿಗೆ ಶಾಸಕರನ್ನು ನೋಡಿಕೊಳ್ಳುವ ಹೊಣೆಯನ್ನು ಕಾಂಗ್ರೆಸ್ ನೀಡಿದೆ. ಅವರೊಟ್ಟಿಗೆ ವಿಧಾನ ಪರಿಷತ್ ಸದಸ್ಯ ಎಸ್. ರವಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ರೆಸಾರ್ಟಿನ ಒಳಗೆ ಇದ್ದು, ಪ್ರತಿ ಶಾಸಕರ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದಾರೆ.

ಮಾಲೂರು ಶಾಸಕ ನಂಜೇಗೌಡರ ಕಾರಿನಲ್ಲಿ ಕಂಡ ಹೊದಿಕೆ
ಮಾಲೂರು ಶಾಸಕ ನಂಜೇಗೌಡರ ಕಾರಿನಲ್ಲಿ ಕಂಡ ಹೊದಿಕೆ

ಕಾರಿನಲ್ಲಿ ಹೊದಿಕೆ!
ಮಾಲೂರು ಎಂಎಲ್‌ಎ ನಂಜೇಗೌಡ ರಾತ್ರಿ 9.50ರ ಸುಮಾರಿಗೆ ಕಾರಿನಲ್ಲಿ ಈಗಲ್‌ಟನ್ ರೆಸಾರ್ಟಿಗೆ ಧಾವಿಸಿದ್ದು, ಬೆಡ್‌ಶೀಟ್‌ ಸಹಿತ ಅಗತ್ಯ ಹೊದಿಕೆಗಳನ್ನು ಜೊತೆಗೆ ಹೊತ್ತು ತಂದಿದ್ದರು. ಕೆಲವು ಶಾಸಕರು ಮಾರ್ಗ ಮಧ್ಯೆ ಬಟ್ಟೆ–ಬರೆ ಖರೀದಿಸಿಕೊಂಡು ರೆಸಾರ್ಟಿಗೆ ಬಂದರು!

ರಾತ್ರಿ ಬಸ್‌ನಲ್ಲಿ ಈಗಲ್‌ಟನ್‌ ರೆಸಾರ್ಟ್‌ಗೆ ಬಂದ ಕಾಂಗ್ರೆಸ್‌ ಶಾಸಕರು.
ರಾತ್ರಿ ಬಸ್‌ನಲ್ಲಿ ಈಗಲ್‌ಟನ್‌ ರೆಸಾರ್ಟ್‌ಗೆ ಬಂದ ಕಾಂಗ್ರೆಸ್‌ ಶಾಸಕರು.

ಶಾಸಕಾಂಗ ಸಭೆಯನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡರು, ‘ನಮಗೆ ಆಪರೇಷನ್ ಕಮಲದ ಭಯ ಇಲ್ಲ. ಆದರೂ ನಮ್ಮ ಶಾಸಕರನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳಬೇಕಲ್ವಾ? ಅವರ ದಾಳಿ ತಪ್ಪಿಸಿಕೊಳ್ಳಬೇಕಲ್ವಾ? ನಮ್ಮ ಪಕ್ಷದ ಎಲ್ಲ ಸಂಸದರು, ಮಂತ್ರಿಗಳು ಮತ್ತು ಶಾಸಕರು ಅಗತ್ಯವಿರುವಷ್ಟು ದಿನಸ ಒಟ್ಟಿಗೆ ಇರುತ್ತೇವೆ’ ಎಂದು ಪುನರುಚ್ಚರಿಸಿದರು.

ಬೇಕಾಗಿರುವ ಬಟ್ಟೆ ಮತ್ತು ಅಗತ್ಯ ವಸ್ತುಗಳನ್ನು ಸಂಬಂಧಿಕರಿಗೆ ಕರೆ ಮಾಡಿ ತರಿಸಿಕೊಳ್ಳುವಂತೆ ಕಾಂಗ್ರೆಸ್‌ ವರಿಷ್ಠರು ಶಾಸಕರಿಗೆ ಸೂಚಿಸಿದ್ದಾರೆ.

ಇನ್ನಷ್ಟು ಸುದ್ದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT