ಶನಿವಾರ, ಏಪ್ರಿಲ್ 10, 2021
30 °C

ಆನಂದ್‌ ಸಿಂಗ್‌ ಮನೆ ಎದುರು ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ರಾಜೀನಾಮೆ ಹಿಂಪಡೆಯುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಗರದ ರಾಣಿಪೇಟೆಯಲ್ಲಿನ ಶಾಸಕ ಆನಂದ್ ಸಿಂಗ್ ಅವರ ಮನೆ‌ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಮುಖಂಡರಾದ ಬಿ.ವಿ.ಶಿವಯೋಗಿ, ಜೆ.ಎಸ್‌. ಆಂಜನೇಯ, ವೆಂಕಟೇಶ ರೆಡ್ಡಿ, ಅಬ್ದುಲ್‌ ವಹಾಬ್‌ ನೇತ್ವತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ‘ಹಿಂಪಡೆಯಿರಿ, ಹಿಂಪಡೆಯಿರಿ ರಾಜೀನಾಮೆ ಹಿಂಪಡೆಯಿರಿ’ ಎಂದು ಘೋಷಣೆಗಳನ್ನು ಕೂಗಿದರು.

ಈ ವೇಳೆ ಮನೆಯಿಂದ ಹೊರಬಂದ ಸಿಂಗ್‌, ’ಈ ಕುರಿತು ನಾನು ಪಕ್ಷದ ಮುಖಂಡರೊಂದಿಗೆ ಮಾತನಾಡುವೆ. ದಯವಿಟ್ಟು ನೀವು ಹೋಗಿ’ ಎಂದು ಹೇಳಿ ಪುನಃ ಮನೆಯೊಳಗೆ ಹೋದರು. ಇದರಿಂದ ಸಮಾಧಾನರಾಗದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ಮುಂದುವರೆಸಿದರು.

‘ಆನಂದ್‌ ಸಿಂಗ್‌ ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಕೂಡಲೇ ಅವರು ಅದನ್ನು ವಾಪಸ್‌ ಪಡೆಯಬೇಕು. ಏನೇ ಭಿನ್ನಾಭಿಪ್ರಾಯವಿದ್ದರೂ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಪಕ್ಷದಲ್ಲೇ ಮುಂದುವರಿಯಬೇಕು. ಅವರು ರಾಜೀನಾಮೆ ಹಿಂಪಡೆಯದಿದ್ದಲ್ಲಿ ಇಡೀ ಜಿಲ್ಲೆಯ ಕಾರ್ಯಕರ್ತರು ಅವರು ಮನೆ ಎದುರು ಪ್ರತಿಭಟನೆ ನಡೆಸುವರು’ ಎಂದು ಮುಖಂಡ ಬಿ.ವಿ. ಶಿವಯೋಗಿ ತಿಳಿಸಿದರು.

‘ಬಿಜೆಪಿಯ ಆಪರೇಷನ್‌ ಕಮಲದ ಆಸೆ ಈಡೇರುವುದಿಲ್ಲ. ಆನಂದ್‌ ಸಿಂಗ್‌ ಸೇರಿದಂತೆ ಯಾವ ಶಾಸಕರು ಕಾಂಗ್ರೆಸ್‌ ಪಕ್ಷ ಬಿಡುವುದಿಲ್ಲ. ಸಿಂಗ್‌ ಬಿಜೆಪಿಗೆ ಹೋಗುವುದಿಲ್ಲ ಎಂಬ ಭರವಸೆ ಇದೆ’ ಎಂದು ಹೇಳಿದರು.

ಮುಖಂಡರಾದ ರಫೀಕ್ ಟಿಂಕರ್, ಸಿ.ಆರ್.ಹನುಮಂತ, ನಿಂಬಗಲ್ ರಾಮಕೃಷ್ಣ, ಫಹೀಮ್ ಬಾಷಾ, ಮಂಜುನಾಥ, ಹಬೀಬ್ ರೆಹಮಾನ್, ವಿಷ್ಣು ಬೋಯಿಪಾಟಿ, ಧನಲಕ್ಷ್ಮಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು