ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಕಾಮಗಾರಿ ನಿಧಾನದ ಬೆನ್ನೇರಿದೆ

ಲಿಂಗರಾಜಪುರ–ಹೆಣ್ಣೂರು ಮುಖ್ಯರಸ್ತೆ ಪೈಪ್‌ ಬೆತ್ತಲೆ ಲೈಫ್‌: ಅಂತೂ ಶುರುವಾಗಿದೆ ಅಗೆಯುವ ಕೆಲಸ
Last Updated 6 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಇಲ್ಲಿ ‘ಅವಸರವೂ ಸಾವಧಾನದ ಬೆನ್ನೇರಿದೆ’ ಎನ್ನುವ ಕುವೆಂಪು ವಾಣಿ ನೆನಪಾಗುತ್ತದೆ. ಜನರ ಸಹನೆ ಕೂಡ ಅದ್ಭುತ. ಮಂದಿಯೇ ಹಾಗಿರುವಾಗ ಅಭಿವೃದ್ಧಿ ಹೆಸರಲ್ಲಿ ನಡೆಯುವ ಇಲಾಖೆಗಳ ಕಾಮಗಾರಿಗಳೂ ಮಂದ.

ಲಿಂಗರಾಜಪುರ ಮತ್ತು ಕೊಂಚ ಎಚ್‌ಬಿಆರ್‌ ಬಡಾವಣೆ ವ್ಯಾಪ್ತಿಗೂ ಸೇರುವ ಕರಿಯಣ್ಣನ ಪಾಳ್ಯ ಫ್ಲೈಓವರ್‌ನಿಂದ ಕಾಚರಕನ ಹಳ್ಳಿ ಮತ್ತು ಹೆಣ್ಣೂರು ಮುಖ್ಯರಸ್ತೆ ಕಡೆಗೆ ಹೋಗುವ ಮಾರ್ಗ ನೋಡಿದರೆ ಹೀಗೇ ಅನಿಸುತ್ತದೆ. ಈ ಮಾರ್ಗದ ಒಂದು ಬದಿಯ ಫುಟ್‌ಪಾತ್‌ ಸಂಪೂರ್ಣ ಬಂದ್‌. ಅಲ್ಲೆಲ್ಲ ಸ್ಯಾನಿಟರಿ ಪೈಪ್‌ಗಳೇ ತುಂಬಿವೆ.

ಸಾರ್ವಜನಿಕರೆದುರು ಬೆತ್ತಲೆ ಮಲಗಿದಂತಿರುವ ದೊಡ್ಡ ಗಾತ್ರದ ಸಿಮೆಂಟ್‌ ಪೈಪ್‌ಗಳ ಸ್ಥಿತಿ ಮರುಕ ಹುಟ್ಟಿಸುತ್ತದೆ. ಜನರ ಕಣ್ಣಿಗೆ ನಾಚಿ ತೆಪ್ಪಗೆ ‘ಮಡಗಿದಲ್ಲೇ ಅವೆ’ ಅಂತ ನಾಗರಿಕರು ತಮಾಷೆ ಮಾಡುತ್ತಾರೆ. ಸದಾ ವಾಹನಗಳಿಂದ ಗಿಜಗುಡುವ ಮುಖ್ಯ ರಸ್ತೆಯಲ್ಲಿ ನರಪಿಳ್ಳೆಗೂ ದಾಟಲು ಕಷ್ಟ. ಇರುವಷ್ಟು ಫುಟ್‌ಪಾತ್‌ ಮೇಲೆ ಪಾದಚಾರಿಗಳು ಅಂಗೈಯಲ್ಲಿ ಜೀವ ಹಿಡಕೊಂಡೇ ಓಡಾಡುತ್ತಿದ್ದರು. ಪೈಪ್‌ಗಳಿಂದ ಅದಕ್ಕೂ ಸಂಚಕಾರ. ಕಷ್ಟವನ್ನು ಒಪ್ಪಿ ತಮ್ಮದೇ ಬದುಕಿನ ಜಂಜಡಗಳಲ್ಲಿ ಕಳೆದುಹೋಗುವ ಜನಸಹನೆಗೆ ವಾಹ್‌ ಎನ್ನಲೇಬೇಕು.

‘ಅಬ್ಬಾ ಅಂದರೆ ಪೈಪ್‌ಗಳ ಮೇಲೆ ಶಾಪ ಹಾಕಬಹುದುಷ್ಟೇ. ರಸ್ತೆಗುಂಟ ಇರುವ ಅಂಗಡಿಗಳಿಗೆ ಒಂಥರ ಅನುಕೂಲವೇ. ಅನಾಯಾಸ ಜಾಗ! ಬೀದಿ ನಾಯಿಗಳಿಗೆ ಹೊಸ ಬಡಾವಣೆ. ಹಲ್ಲಿ, ಹೆಗ್ಗಣಗಳಿಗೆ ಆಶ್ರಯತಾಣ. ಪೈಪ್‌ಗಳ ಮೇಲೆ ಬಿದ್ದ ಕಸವೇ ಕಾಲವನ್ನು ಹೇಳುತ್ತದೆ. ಅದೆಷ್ಟು ತಿಂಗಳಿಂದ ಹೀಗೆ ಬೆತ್ತಲಾಗಿವೆ ಎಂದು. ನೀವೇ ನೋಡಿ’ ಎನ್ನುತ್ತಾರೆ ನಿವಾಸಿಗಳು.

ಕಣ್ಣಿಗೆ ಬಿದ್ದು ತಿಂಗಳು ಕಳೆದರೂ ಇಂದೋ ನಾಳೆಗೋ ಪೈಪ್‌ಗಳ ಅನಾಥ ಬದುಕು ಕೊನೆಗಾಣುವುದು ಎಂದುಕೊಂಡರೆ ಉಹ್ಞೂಂ.. ಆದರೆ ಇದೀಗ ಈ ರಸ್ತೆಯಲ್ಲಿ ಒಂದೆರಡು ಜೆಸಿಬಿ ಯಂತ್ರಗಳು ಕಾಣಿಸಿವೆ. ‘ಇಲ್ಲೇನೋ ಅಗಿತಿದಾರೆ ಸಾರ್‌‘ ಎಂದು ಆಟೊ ಚಾಲಕ ನೀಡಿದ ಮಾಹಿತಿ ಜಾಡು ಹಿಡಿದು ಸಾಗಿದರೆ ಸ್ಯಾನಿಟರಿ ಪೈಪ್‌ಗಳ ಜಾಕಿಂಗ್‌ ಕೆಲಸ ನಡೆಯುತ್ತಿತ್ತು.

ವಾರ್ಡ್‌ ನಂಬರ್‌ 49ರ ವ್ಯಾಪ್ತಿಗೆ ಸೇರುವ ಈ ಪ್ರದೇಶದ ಬಗ್ಗೆ ಸಂಬಂಧಪಟ್ಟ ಬಿಬಿಎಂಪಿ ಎಂಜಿನಿಯರ್‌ಗಳಿಗೆ ಫೋನಾಯಿಸಿದರೆ ಒಬ್ಬರು ಮತ್ತೊಬ್ಬರ ಅವರು ಮಗದೊಬ್ಬರ ನಂಬರ್‌.. ಖೋ ಖೋ ಆಟದಂತೆ. ಕಡೆಗೆ ಸಿಕ್ಕಿದ್ದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲುಎಸ್‌ಎಸ್‌ಬಿ) ಅಧಿಕಾರಿ ನಂಬರ್‌. ‘ಹೆಸರು ಹಾಕಬೇಡಿ ಸಾರ್‌’ ಎಂದೇ ಮಾತಿಗಿಳಿದ ಅಧಿಕಾರಿ ಸಮಾಧಾನದಿಂದಲೇ ಇರುವ ವಿಷಯವನ್ನು ವಿವರಿಸಿದರು.

‘ನೀವು ಹೇಳುವುದು ಅರ್ಥವಾಯಿತು. ರಸ್ತೆ ಬದಿಯಲ್ಲಿ ಸ್ಯಾನಿಟರಿ ಕಾಮಗಾರಿಗೆ ಪೈಪ್‌ಗಳನ್ನು ಸುರಿದು ತಿಂಗಳುಗಳೇ ಕಳೆದಿವೆ. ಆದರೆ ಅದಕ್ಕೆ ಕೆಲವು ಸಂಬಂಧಪಟ್ಟ ಬಿಬಿಎಂಪಿ ಮತ್ತಿತರ ಇಲಾಖೆಗಳಿಂದ ಪೂರ್ವಾನುಮತಿಗಳು ವಿಳಂಬವಾದವು. ಕಾಮಗಾರಿ ತಡವಾಗಿ ಶುರುವಾಗಲು ಇದೂ ಒಂದು ಕಾರಣ’ ಎಂದರು.

ಸರಿ, ಸೂಕ್ತ ಪೂರ್ವಾನುಮತಿಗಳನ್ನು ಪಡಕೊಂಡೇ ಇಷ್ಟು ದೊಡ್ಡ ಕಾರ್ಯಕ್ಕೆ ಕೈ ಹಾಕುವುದಲ್ಲವೇ ಎಂದಾಗ, ‘ನಿಜ. ಆದರೆ ಕೆಲವು ಸೂಕ್ಷ್ಮ ತೊಡಕುಗಳು ಇರುತ್ತವೆ. ದೊಡ್ಡ ಯೋಜನೆಗಳು ಅಂದಾಗ ಇದೆಲ್ಲ ಆಗುತ್ತದೆ. ಇದೀಗ ಪ್ರದೇಶದ ಚರ್ಚ್‌ ಹತ್ತಿರ ನಮ್ಮವರು ಜಾಕಿಂಗ್‌ ಕೆಲಸ ಶುರು ಮಾಡಿದ್ದಾರೆ ನೋಡಿ’ ಎಂದರು.

ಹೌದು. ಅಲ್ಲಿ ಎರಡು ಜೆಸಿಬಿ ಯಂತ್ರಗಳು ಮಣ್ಣು ಅಗೆಯುವ ಕೆಲಸ ಶುರು ಮಾಡಿವೆ. ಕೆಲಸ ಮಗಿಯುವುದಕ್ಕೆ ಇನ್ನೆಷ್ಟು ಸಮಯ ಹಿಡಿಯುವುದೋ ಎಂದು ಕೆಣಕಿದರೆ, ‘ಸರ್‌, ಹದಿನೈದರಿಂದ ಮೂವತ್ತು ದಿನಗಳೊಳಗೆ ಇಡೀ ಕೆಲಸ ಮುಗಿಸಿಬಿಡುತ್ತೇವೆ. ಸಿಗಬೇಕಾದ ಎಲ್ಲ ಪೂರ್ವಾನುಮತಿಗಳ ವ್ಯವಸ್ಥೆ ಆಗಿದೆ. ಕಾಮಗಾರಿಗೆ ಇನ್ನಾವ ತೊಡಕುಗಳಿಲ್ಲ. ಅಂದುಕೊಂಡ ಅವಧಿಯಲ್ಲಿ ಕೆಲಸ ಮುಗಿದು ಬಿಡುತ್ತದೆ’ ಎನ್ನುವ ಅಭಯ ಈ ಅಧಿಕಾರಿಯದು.

ಅಧಿಕಾರಿ ಭರವಸೆ ಹೀಗಿದೆ ನಿವೇನಂತೀರಿ ಸ್ವಾಮೀ ಎಂದು ನಿವಾಸಿಯೊಬ್ಬರನ್ನು ಕೆಣಕಿದರೆ,‘ಕಾದು ನೋಡೋಣ ಸ್ವಾಮೀ’ ಎನ್ನುವ ಸಹನೆಯ ಮಾತು.

*
ರಸ್ತೆ ಬದಿಯಲ್ಲಿ ಸ್ಯಾನಿಟರಿ ಕಾಮಗಾರಿಗೆ ಪೈಪ್‌ಗಳನ್ನು ಸುರಿದು ತಿಂಗಳುಗಳೇ ಕಳೆದಿವೆ. ಆದರೆ ಅದಕ್ಕೆ ಕೆಲವು ಸಂಬಂಧಪಟ್ಟ ಬಿಬಿಎಂಪಿ ಮತ್ತಿತರ ಇಲಾಖೆಗಳಿಂದ ಪೂರ್ವಾನುಮತಿಗಳು ವಿಳಂಬವಾದವು. ಕಾಮಗಾರಿ ತಡವಾಗಿ ಶುರುವಾಗಲು ಇದೂ ಒಂದು ಕಾರಣ. ಹದಿನೈದರಿಂದ ಮೂವತ್ತು ದಿನಗಳೊಳಗೆ ಇಡೀ ಕೆಲಸ ಮುಗಿಸಿಬಿಡುತ್ತೇವೆ. ಸಿಗಬೇಕಾದ ಎಲ್ಲ ಪೂರ್ವಾನುಮತಿಗಳ ವ್ಯವಸ್ಥೆ ಆಗಿದೆ. ಇನ್ನಾವ ತೊಡಕುಗಳಿಲ್ಲ. ಅಂದುಕೊಂಡ ಅವಧಿಯಲ್ಲಿ ಕೆಲಸ ಮುಗಿಯಲಿದೆ.
-ಬಿಡಬ್ಲುಎಸ್‌ಎಸ್‌ಬಿ ಅಧಿಕಾರಿ

*
ಅಬ್ಬಾ ಅಂದರೆ ಪೈಪ್‌ಗಳ ಮೇಲೆ ಶಾಪ ಹಾಕಬಹುದುಷ್ಟೇ. ರಸ್ತೆಗುಂಟ ಇರುವ ಅಂಗಡಿಗಳಿಗೆ ಒಂಥರ ಅನುಕೂಲವೇ. ಅನಾಯಾಸ ಜಾಗ! ಬೀದಿ ನಾಯಿಗಳಿಗೆ ಹೊಸ ಬಡಾವಣೆ. ಹಲ್ಲಿ, ಹೆಗ್ಗಣಗಳಿಗೆ ಆಶ್ರಯತಾಣ. ಪೈಪ್‌ಗಳ ಮೇಲೆ ಬಿದ್ದ ಕಸವೇ ಕಾಲವನ್ನು ಹೇಳುತ್ತದೆ. ಅದೆಷ್ಟು ತಿಂಗಳಿಂದ ಹೀಗೆ ಬೆತ್ತಲಾಗಿವೆ ಎಂದು. ನೀವೇ ನೋಡಿ.
-ಲಿಂಗರಾಜಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT