ಸೋಮವಾರ, ಜೂಲೈ 6, 2020
23 °C

ಬೆಳಗಾವಿಗೆ ದಕ್ಕಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಂಚಾರಿ ಪೀಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಗ್ರಾಹಕರ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಮನವಿಗಳು ಸಲ್ಲಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಖಾಯಂ ಸಂಚಾರಿ ಪೀಠ ಸ್ಥಾಪಿಸಲು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸಮ್ಮತಿ ನೀಡಿದೆ.

ಬೆಳಗಾವಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಪ್ರತಿ ತಿಂಗಳು 250ರಿಂದ 300 ಪ್ರಕರಣಗಳು ದಾಖಲಾಗುತ್ತಿವೆ. ಸುಮಾರು 3 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ನೂರಾರು ಮೇಲ್ಮನವಿ ಪ್ರಕರಣಗಳು ಬೆಂಗಳೂರಿನಲ್ಲಿರುವ ಆಯೋಗಕ್ಕೆ ಸಲ್ಲಿಕೆಯಾಗುತ್ತಿವೆ. ಮೇಲ್ಮನವಿ ಸಲ್ಲಿಸಲು ದೂರದ ಬೆಂಗಳೂರಿಗೆ ಹೋಗಿಬರುವುದು ಸ್ಥಳೀಯರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಇದರ ಜೊತೆ ಸಮಯ ಕೂಡ ವ್ಯರ್ಥವಾಗುತ್ತಿದೆ. ಇದನ್ನು ತಡೆಯುವುದಕ್ಕಾಗಿ ಬೆಳಗಾವಿಯಲ್ಲಿ ಖಾಯಂ ಸಂಚಾರಿ ಪೀಠ ಸ್ಥಾಪಿಸಬೇಕು ಎಂದು ಆಯೋಗ ಹೇಳಿದೆ. 

ಪೀಠ ಸ್ಥಾಪನೆಗಾಗಿ ಅಗತ್ಯವಿರುವ ಶಿರಸ್ತೇದಾರರ್‌ (1), ಶೀಘ್ರಲಿಪಿಗಾರರು (2), ಪ್ರಥಮ ದರ್ಜೆ ಸಹಾಯಕರು (1), ದ್ವಿತೀಯ ದರ್ಜೆ ಸಹಾಯಕರು (1) ಹಾಗೂ ಗ್ರೂಪ್‌ ಡಿ ನೌಕರರ (2) ಹುದ್ದೆಗಳನ್ನು  ಮಂಜೂರು ಮಾಡಬೇಕೆಂದು ಅಧ್ಯಕ್ಷರು ನಿರ್ದೇಶನ ನೀಡಿದ್ದಾರೆ ಎಂದು ಆಯೋಗದ ರಿಜಿಸ್ಟ್ರಾರ್‌ ಎನ್‌.ರಾಜು ಅವರು ಆಹಾರ, ನಾಗರೀಕ ಸರಬರಾಜು, ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು