ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ ಸಾವು: ಕೊರೊನಾ ಕಾರಣವಲ್ಲ, ಜಿಲ್ಲಾಧಿಕಾರಿ ಸ್ಪಷ್ಟನೆ

ಶ್ವಾಸಕೋಶ ಸೋಂಕು, ಜ್ವರದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲು
Last Updated 11 ಮಾರ್ಚ್ 2020, 21:50 IST
ಅಕ್ಷರ ಗಾತ್ರ

ಕಲಬುರ್ಗಿ: ಶಂಕಿತ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ನಗರದ ಎಂಎಸ್‌ಕೆ ಮಿಲ್‌ ಬಡಾವಣೆ ನಿವಾಸಿಯಾಗಿದ್ದ 76 ವರ್ಷದ ವೃದ್ಧರೊಬ್ಬರು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

‘ಮಾರ್ಚ್‌ 9ರಂದು ಶ್ವಾಸಕೋಶ ಸೋಂಕು ಹಾಗೂ ಜ್ವರ ಕಾಣಿಸಿಕೊಂಡಿದ್ದರಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎ.ಜಬ್ಬಾರ್‌ ಬುಧವಾರ ತುರ್ತು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಈ ನಡುವೆ ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ‘ಕಲಬುರ್ಗಿಯ ವ್ಯಕ್ತಿ ಅಸ್ತಮಾ, ಹೈಪರ್‌ಟೆನ್ಷನ್‌ನಿಂದ ಬಳಲುತ್ತಿದ್ದರು, ಗಂಟಲು ದ್ರಾವಣ ಪರೀಕ್ಷೆ ನಡೆಸಲಾಗಿದ್ದು, ಅವರ ಸಾವಿಗೆ ಕೊರೊನಾ ಸೋಂಕು ಕಾರಣವಲ್ಲ ಎಂದು ವರದಿ ಬಂದಿದೆ’ ಎಂದು ತಿಳಿಸಿದರು.

‘ಜನವರಿ 29ರಂದು ಸೌದಿ ಅರೇಬಿಯಾಕ್ಕೆ ತೆರಳಿದ್ದ ಅವರು ಫೆಬ್ರುವರಿ 29ರಂದು ನಗರಕ್ಕೆ ವಾಪಸಾಗಿದ್ದರು. ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಆಗ ಯಾವುದೇ ಶಂಕೆ ಇರಲಿಲ್ಲ. ಎಂದರು.

‘ಸೌದಿ ಅರೇಬಿಯಾದಿಂದ ಬಂದಿರುವ ಮಾಹಿತಿಯನ್ನು ಆಸ್ಪತ್ರೆಯವರು ಜಿಲ್ಲಾಡಳಿತಕ್ಕೆ ನೀಡಿದ್ದರು. ಹಾಗಾಗಿ, ಅವರ ಮೇಲೆ ನಿಗಾ ಇಟ್ಟಿದ್ದೆವು. ಆದರೆ, ವೈದ್ಯರ ಸಲಹೆ ಬದಿಗೊತ್ತಿ ಅವರ ಕುಟುಂಬ ಸದಸ್ಯರು ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.ಅಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ನಗರಕ್ಕೆ ಬರುವ ಮಾರ್ಗಮಧ್ಯೆ ಮಂಗಳವಾರ ರಾತ್ರಿ ಸಾವಿಗೀಡಾದರು’ ಎಂದರು.

ವೃದ್ಧರ ಶವವನ್ನು ಕಲಬುರ್ಗಿಯ ಜಿಮ್ಸ್‌ನಲ್ಲಿ ಕೆಲ ಹೊತ್ತು ಇರಿಸಿ, ನಂತರ ಅಂತ್ಯ ಸಂಸ್ಕಾರ ಮಾಡಲಾಯಿತು.

ಪ್ರವಾಸೋದ್ಯಮಕ್ಕೆ ಪೆಟ್ಟು (ಮೈಸೂರು): ಕೊರೊನಾ ಆತಂಕದಿಂದ ನಗರದ ಪ್ರವಾಸೋದ್ಯಮ ಕುಸಿದಿದ್ದು, ಬಹುತೇಕ ಹೋಟೆಲ್‌ಗಳು ಪ್ರವಾಸಿಗರಿಲ್ಲದೇ ಭಣಗುಡುತ್ತಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿ ಕ್ರಿಯಿಸಿದ ಹೋಟೆಲ್‌ ಮಾಲೀಕರ ಸಂಘದ ನಗರ ಘಟಕದ ಅಧ್ಯಕ್ಷ ಸಿ. ನಾರಾಯಣಗೌಡ, ‘ಶೇ 50ರಷ್ಟು ಬುಕಿಂಗ್‌ಗಳು ರದ್ದಾಗಿವೆ. ಹೋಟೆಲ್ ಉದ್ಯಮ ಸಂಕಷ್ಟಕ್ಕೆ ತುತ್ತಾಗಿದೆ’ ಎಂದರು.

‘ಅಂತರರಾಜ್ಯ ಬಸ್‌ಗಳ ಬುಕ್ಕಿಂಗ್‌ನಲ್ಲಿ ಶೇ 15ರಿಂದ 20ರಷ್ಟು ಇಳಿಕೆ ಕಂಡು ಬಂದಿದ್ದು, ಬೇಡಿಕೆ ಕಡಿಮೆ ಇರುವ ಮಾರ್ಗಗಳಲ್ಲಿ ಬಸ್‌ಗಳ ಸಂಖ್ಯೆ ಕಡಿತಗೊಳಿಸುವ ಕುರಿತು ಚಿಂತನೆ ನಡೆದಿದೆ’ ಎಂದು ಕೆಎಸ್‌ಆರ್‌ಟಿಸಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್ ತಿಳಿಸಿದರು.

‘ದುಬೈ ವ್ಯಕ್ತಿಗೆ ಸೋಂಕು ಇಲ್ಲ’
ಮಂಗಳೂರು: ‘ಇದೇ 8ರಂದು ದುಬೈನಿಂದ ನಗರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕಿನ ಶಂಕೆ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಈ ವ್ಯಕ್ತಿಯ ಗಂಟಲಿನ ದ್ರವದ ಮಾದರಿಯ ವರದಿ ಬಂದಿದ್ದು, ಅವರಲ್ಲಿ ಕೊರೊನಾ ಸೋಂಕು ಇಲ್ಲ ಎಂಬುದು ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸ್ಪಷ್ಟಪಡಿಸಿದರು.

ಮಣಿಪಾಲ: ಶಂಕಿತ ಮಹಿಳೆಗೆ ಚಿಕಿತ್ಸೆ
ಉಡುಪಿ:
ಶಂಕಿತ ಕೊರೊನಾ ಸೋಂಕಿತ ಮಹಿಳೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಆಚಾಪುರದವರು.

‘68 ವರ್ಷದ ಮಹಿಳೆಯ ಗಂಟಲಿನ ದ್ರವದ ಮಾದರಿಯನ್ನು ಬೆಂಗ ಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಡಿಎಚ್‌ಒ ಸುಧೀರ್ ಚಂದ್ರ ಸೂಡ ತಿಳಿಸಿದರು.

ಕಳೆದ ವಾರ ಮೆಕ್ಕಾಗೆ ತೆರಳಿದ್ದ ಮಹಿಳೆಗೆ ಜ್ವರ, ಕೆಮ್ಮು ಹಾಗೂ ಉಸಿರಾ ಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅಲ್ಲಿಯೇ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಶಿವಮೊಗ್ಗಕ್ಕೆ ಮರಳಿದ್ದರು.

ಮತ್ತೆ ಜ್ವರ, ಕೆಮ್ಮು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಯಲ್ಲಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿಗೆ ಕರೆತರಲಾಗಿದ್ದು, ಐಸೊಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್‌ಒ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT