ಶನಿವಾರ, ಮೇ 15, 2021
25 °C
ದೊಡ್ಡ ಜಿಲ್ಲೆಯಲ್ಲಿ ಲಭ್ಯವಿರುವುದು ಕೆಲವು ಮಾತ್ರ

‘ಕೊರೊನಾ ಸುರಕ್ಷಾ ಕವಚ’ ಕೊರತೆ!?

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೊರೊನಾ ವೈರಾಣು ಸೋಂಕು ಬಂದವರನ್ನು ಆಸ್ಪತ್ರೆಗೆ ಸಾಗಿಸುವ ಹಾಗೂ ಕೋವಿಡ್–19ಗೆ ಒಳಗಾದವರಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆಂದು ಒದಗಿಸಲಾಗುವ ‘ಕೊರೊನಾ ಸುರಕ್ಷಾ ಕವಚದ ಕಿಟ್‌’ಗಳ ಕೊರತೆ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ 55 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಅವರೆಲ್ಲರ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಸಾವಿರಾರು ಮಂದಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್‌–19ಗೆ ಒಳಗಾದವರನ್ನು ಉಪಚರಿಸುವವರು ಈ ಸುರಕ್ಷಾ ಕವಚ ಧರಿಸಿಕೊಳ್ಳದಿದ್ದಲ್ಲಿ ಅವರಿಗೂ ಸೋಂಕು ತಗಲುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪ್ರಮಾಣದಲ್ಲಿ ಕಿಟ್‌ಗಳನ್ನು ಪೂರೈಸುವ ಕೆಲಸ ಸರ್ಕಾರದಿಂದ ನಡೆದಿಲ್ಲ.

‘ಪಿಪಿಇ (ಪರ್ಸನಲ್‌ ಪ್ರೊಟೆಕ್ಟಿವ್ ಇಕ್ಯು‍ಪ್‌ಮೆಂಟ್‌) ಇಲಾಖೆಯ ಕೇಂದ್ರ ಕಚೇರಿ ಮಟ್ಟದಲ್ಲಿಯೇ ಒಂದಿಷ್ಟು ಕಿಟ್‌ಗಳನ್ನು ಕಳುಹಿಸಿಕೊಡಲಾಗಿದೆ. ಹೆಚ್ಚಾಗಿ ಬೇಕಾದರೆ ಸ್ಥಳೀಯ ಆರೋಗ್ಯ ರಕ್ಷಾ ಸಮಿತಿಯ ನಿಧಿಯಿಂದ ಖರೀದಿಸುವಂತೆ ಸೂಚಿಸಲಾಗಿದೆ. ಆದರೆ, ಸ್ಥಳೀಯವಾಗಿ ಅವುಗಳ ಲಭ್ಯತೆ ಇಲ್ಲ. ಇದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ’ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸಂಗ್ರಹವಿದೆ:

ಈ ಕುರಿತು ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ‘ಪ್ರಸ್ತುತ ಬಿಮ್ಸ್‌ನಲ್ಲಿ 150, ಕೆಎಲ್ಇ ಆಸ್ಪತ್ರೆಯಲ್ಲಿ 250, ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿ 90 ಕೊರೊನಾ ಸುರಕ್ಷಾ ಕಿಟ್‌ಗಳನ್ನು ಸಂಗ್ರಹಿಸಲಾಗಿದೆ. ಜನಸಂಖ್ಯೆ ಆಧರಿಸಿ ಇಲಾಖೆಯಿಂದಲೇ ಪೂರೈಸಲಾಗುತ್ತಿದೆ. ಜಿಲ್ಲೆಗೆ ಮತ್ತಷ್ಟು ಕಿಟ್‌ಗಳು ಅಗತ್ಯ ಇದ್ದು, ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಮಾಹಿತಿ ನೀಡಿದರು.

ಸಿಬ್ಬಂದಿಗೆ ನೀಡುವ ಈ ಸುರಕ್ಷಾ ಕವಚಗಳನ್ನು ಕೋವಿಡ್‌–19 ಪಾಸಿಟಿವ್ ಲಕ್ಷಣಗಳು ಕಂಡುಬಂದವರನ್ನು ಕರೆತರುವಾಗ ಮಾತ್ರ ಬಳಸಲಾಗುತ್ತದೆ. ಇವು ‘ಒಮ್ಮೆ ಬಳಸಿ ಬಿಸಾಡುವಂಥವಾಗಿವೆ’. ಒಮ್ಮೆ ಹಾಕಿ ತೆಗೆದರೆ ಮುಗಿಯಿತು ಅದನ್ನು ಸಂಪೂರ್ಣವಾಗಿ ನಾಶ ಮಾಡಬೇಕಾಗುತ್ತದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಆಂಬ್ಯುಲೆನ್ಸ್‌ ಸಿಬ್ಬಂದಿ ಆಸ್ಪತ್ರೆಯಲ್ಲೇ ಈ ಕವಚಗಳನ್ನು ವಿಲೇವಾರಿ ಮಾಡಬೇಕು. ಅದೇ ರೀತಿ ವೈದ್ಯಕೀಯ ಸಿಬ್ಬಂದಿ ಕೂಡ ಅನುಸರಿಸಬೇಕು ಎಂದು ಮಾರ್ಗಸೂಚಿ ಇದೆ. ಪರಿಸ್ಥಿತಿ ಹೀಗಿರುವಾಗ, ಜಿಲ್ಲೆಯಲ್ಲಿ ಲಭ್ಯವಿರುವ ಸುರಕ್ಷಾ ಕಿಟ್‌ಗಳು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ!

ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಆಂಬ್ಯುಲೆನ್ಸ್‌ ಸಿಬ್ಬಂದಿ ಅಂದರೆ ಚಾಲಕ, ಅದರಲ್ಲಿನ ವೈದ್ಯ ಹಾಗೂ ಒಬ್ಬ ನರ್ಸ್‌, ಆಸ್ಪತ್ರೆಯಲ್ಲಿ ಗಾಲಿಕುರ್ಚಿಯಲ್ಲಿ ಸೋಂಕಿತರನ್ನು ಒಳಗಡೆಗೆ ಕರೆದೊಯ್ಯುವವರು, ತಪಾಸಣೆ ಮಾಡುವ ವೈದ್ಯ, ಉಪಚಾರ ಮಾಡುವ ನರ್ಸ್‌, ಭೇಟಿ ನೀಡುವ ಮೇಲ್ವಿಚಾರಕರು... ಹೀಗೆ ಕಡಿಮೆ ಸಂಖ್ಯೆ ಸಿಬ್ಬಂದಿ ಮಾತ್ರ ಈ ಕವಚ ಬಳಸಲು ಅನುಮತಿ ಇದೆ. ಹೀಗಾಗಿ, ಹೆಚ್ಚಿನ ಕಿಟ್‌ಗಳ ಅಗತ್ಯ ಬೀಳುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಏನಿದು ಕವಚ?

ತಿಳಿ ನೀಲಿ ಬಣ್ಣದ ದಪ್ಪ ಪ್ಲಾಸ್ಟಿಕ್‌ನಿಂದ ತಯಾರಿಸಿದ ಈ ಸುರಕ್ಷಾ ಕವಚಗಳು ಕೊರೊನಾ ವೈರಾಣು ದೇಹಕ್ಕೆ ಅಂಟಿಕೊಳ್ಳದಂತೆ ನಿರ್ಬಂಧಿಸುತ್ತವೆ. ಪಾದದಿಂದ ತಲೆಯವರೆಗೂ ಸಂಪೂರ್ಣವಾಗಿ ಮುಚ್ಚಿಕೊಳ್ಳುವ ಕವಚ ಇವಾಗಿವೆ. ತಲೆಯನ್ನು ಬಿಗಿದು ಸುತ್ತಿಕೊಳ್ಳುವಂತಹ ಕ್ಯಾಪ್‌, ಕಣ್ಣುಗಳಿಗೆ ಗಾಗಲ್‌, ಮೊಣಕೈ–ಮುಂಗೈ ಬಳಿ ಎಲಾಸ್ಟಿಕ್‌ ಲಾಕ್‌, ಮುಂಗೈಗೆ ಕೈಗವಸು, ಬಾಯಿ,ಮೂಗು, ಕಿವಿ ಮುಚ್ಚಿಕೊಳ್ಳುವಂಥ ಮುಖಗವಸು, ಅದರ ಮೇಲೆ ಮುಖದ ಅರ್ಧ ಭಾಗ ಮಾತ್ರ ಕಾಣುವಂತೆ ಮುಚ್ಚುವ ಪಾರದರ್ಶಕ ಸ್ಕೀನ್‌, ಕತ್ತು, ಹೊಟ್ಟೆ, ಬೆನ್ನು, ಎದೆ, ತೊಡೆ, ಕಾಲು ಮುಂತಾದ ಭಾಗಗಳನ್ನು ಪೂರ್ಣವಾಗಿ ಮುಚ್ಚುವ ನಿಲುವಂಗಿ ಮಾದರಿಯ ಕೋಟ್‌, ಕಾಲುಗಳಿಗೆ ಒಳಗೆ ಸಾಕ್ಸ್‌; ಅದರ ಮೇಲೆ ಗಮ್‌ ಬೂಟಿನ ಆಕಾರದ ಗಟ್ಟಿಯಾದ ಪ್ಲಾಸ್ಟಿಕ್‌ ಕವರ್‌... ಮೊದಲಾದವುಗಳನ್ನು ಕವಚಗಳು ಒಳಗೊಂಡಿರುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು