ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸಮರ: ಸೇವೆಯೇ ಧ್ಯೇಯವಾಗಲಿ

‘ಕರ್ನಾಟಕ ಜನ ಸಂವಾದ ರ‍್ಯಾಲಿ’ಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಕರೆ
Last Updated 14 ಜೂನ್ 2020, 20:22 IST
ಅಕ್ಷರ ಗಾತ್ರ

ಬೆಂಗಳೂರು:‘ಕೊರೊನಾ ವಿರುದ್ಧದ ಹೋರಾಟ ಹಾಗೂ ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಸೇವೆಯೇ ಧ್ಯೇಯವಾಗಲಿ’ ಎಂದು ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾನುವಾರ ಕರೆ ನೀಡಿದರು.

ಕರ್ನಾಟಕ ಜನ ಸಂವಾದ (ವರ್ಚುವಲ್‌) ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ವಿರುದ್ಧ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

‘ಕೊರೊನಾ ವಿರುದ್ದ ಇಡೀ ದೇಶ ಸಂಘಟಿತವಾಗಿ ಹೋರಾಡುತ್ತಿದೆ. ಕೊರೊನಾ ವಾರಿಯರ್ಸ್‌ಗಳು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆದರೆ, ವಿರೋಧಪಕ್ಷಗಳು ಈ ವಿಷಯದಲ್ಲಿ ಚಿಲ್ಲರೆ ರಾಜಕೀಯ ಮಾಡುತ್ತಿವೆ’ ಎಂದು ವಾಗ್ದಾಳಿ ನಡೆಸಿದರು.

‘ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೋದಿ ಆಡಳಿತ ಮಾದರಿ’ ಎಂದು ನಡ್ಡಾ ಹೊಗಳಿದರು.

‘ಆರು ದಶಕಗಳಲ್ಲಿ ಆಗದ ಅಭಿವೃದ್ಧಿ ಕೆಲಸಗಳು ಕಳೆದ ಆರು ವರ್ಷಗಳಲ್ಲಿ ಆಗಿವೆ.ಕಳೆದ ಒಂದು ವರ್ಷದಲ್ಲಿ ಮೋದಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ರಾಮಜನ್ಮಭೂಮಿ ವಿವಾದ, 370ನೇ ವಿಧಿ ರದ್ಧತಿ, ತ್ರಿವಳಿ ತಲಾಖ್‌, ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ’ ಎಂದೂ ಶ್ಲಾಘಿಸಿದರು.

‘ಹಿಂದೆ ಚೀನಾ ವಿರುದ್ಧದ ಯುದ್ಧ, ಬಾಂಗ್ಲಾ ವಿಮೋಚನೆ ಸಂದರ್ಭಗಳಲ್ಲಿ ಆಗಿನ ಕೇಂದ್ರ ಸರ್ಕಾರದ ಜೊತೆ ಬಿಜೆಪಿ ನಿಂತಿತ್ತು. ಆದರೆ, ಕಾರ್ಗಿಲ್‌ ಯುದ್ಧ ಕುರಿತು ಕಾಂಗ್ರೆಸ್‌ ಸಂಸತ್‌ ಅಧಿವೇಶನಕ್ಕೆ ಒತ್ತಾಯಿಸಿತು. ಸರ್ವಪಕ್ಷ ಸಭೆಗೆ ಹಾಜರಾಗಲಿಲ್ಲ. ದೇಶದ ವಿಷಯ ಬಂದಾಗ ಬಿಜೆಪಿ ಎಂದೂ ರಾಜಕೀಯ ಮಾಡಿಲ್ಲ. ಆದರೆ, ಕಾಂಗ್ರೆಸ್‌ ಕೊಳಕು ರಾಜಕೀಯ ಮಾಡುತ್ತಲೇ ಬಂದಿದೆ. ಕರ್ನಾಟಕ ಧಾರ್ಮಿಕ ಭೂಮಿ. ದೇಶಕ್ಕೆ ಹೊಸ ದಿಕ್ಸೂಚಿ ನೀಡಿದ ನೆಲವಿದು. ಇಲ್ಲಿ ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅತ್ಯುತ್ತಮ ಕೆಲಸ ಮಾಡಿದ್ದಾರೆ’ ಎಂದೂ ನಡ್ಡಾ ಶ್ಲಾಘಿಸಿದರು.

‘ಕೊರೊನಾ ವಿರುದ್ಧದ ಹೋರಾಟದಲ್ಲಿ 130 ಕೋಟಿ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ದವಾಗಿದೆ. ಕೋವಿಡ್ ಆಸ್ಪತ್ರೆಗಳ ಸ್ಥಾಪನೆ, ಪಿಪಿಇ ಕಿಟ್‌ಗಳ ಉತ್ಪಾದನೆ, 800 ಪರೀಕ್ಷಾ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಲಾಗಿದೆ’ ಎಂದು ಹೇಳಿದರು.

ರ‍್ಯಾಲಿಯಲ್ಲಿ ದೆಹಲಿಯಿಂದ ಕೇಂದ್ರ ಸಚಿವರುಗಳಾದ ಪ್ರಲ್ಹಾದ ಜೋಶಿ, ನಿರ್ಮಲಾ ಸೀತಾರಾಮನ್‌ ಮತ್ತು ಡಿ.ವಿ.ಸದಾನಂದಗೌಡ ಇದ್ದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪ ಮುಖ್ಯಮಂತ್ರಿ ಗಳಾದ ಗೋವಿಂದ ಕಾರಜೋಳ, ಡಾ. ಅಶ್ವಥ್ ನಾರಾಯಣ, ಸಚಿವರಾದ ಆರ್.ಅಶೋಕ, ಗೋಪಾಲಯ್ಯ,
ಸಂಸದರಾದ ಪಿ.ಸಿ ಮೋಹನ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT