ಬುಧವಾರ, ಮೇ 27, 2020
27 °C
ಇನ್ನಷ್ಟು ಹೆಚ್ಚಿದರೆ ಸಮುದಾಯಕ್ಕೆ ಹರಡುವ ಅಪಾಯ * ಎಲ್ಲರಲ್ಲೂ ಇರಲಿ ಜಾಗ್ರತೆ

ಕೊರೊನಾ ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆ: ನಿರ್ಣಾಯಕ ಘಟ್ಟಕ್ಕೆ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅತ್ಯಂತ ವೇಗವಾಗಿ ಹರಡುತ್ತಿರುವ ಕೊರೊನಾ ಸೋಂಕು ಸದ್ಯ ಎರಡನೇ ಹಂತದ ಅಂತಿಮ ಘಟ್ಟದಲ್ಲಿದೆ. ಮುಂದಿನ ಒಂದು ವಾರ  ಅತ್ಯಂತ ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಲ್ಲಿ ಮಾತ್ರ ಸಮುದಾಯಕ್ಕೆ ಹರಡುವುದನ್ನು ತಡೆಯಲು ಸಾಧ್ಯ’ ಇಂತಹದೊಂದು ಎಚ್ಚರಿಕೆ ನೀಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಎಲ್ಲರೂ ಮುಂಜಾಗರೂಕತೆ ವಹಿಸದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಸುಳಿವನ್ನೂ ನೀಡಿದ್ದಾರೆ.

ಮಾ.9ರಂದು ರಾಜ್ಯದಲ್ಲಿ ಕೋವಿಡ್‌–19 ಪ್ರಥಮ ಪ್ರಕರಣ ವರದಿಯಾಗಿತ್ತು. ಹೆಚ್ಚಾಗಿ ವಿದೇಶದಿಂದ ಬಂದವರು, ಅವರ ಕುಟುಂಬದ ಸದಸ್ಯರು ಹಾಗೂ ಅವರೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಸೋಂಕು ಹರಡುವಿಕೆ ಮೂರನೇ ಹಂತಕ್ಕೆ ಇನ್ನೂ ಪ್ರವೇಶಿಸಿಲ್ಲ ಎಂಬ ಸಮಾಧಾನವನ್ನೂ ಈ ಮಾಹಿತಿ ನೀಡಿದೆ.

ಆದರೆ, ಮಾ.26ರಂದು ಮೈಸೂರಿನಲ್ಲಿ ವರದಿಯಾದ ಪ್ರಕರಣ (ರೋಗಿ 52), ಮಾ.27ರಂದು ಮಂಗಳೂರು (ರೋಗಿ 56) ಹಾಗೂ ತುಮಕೂರಿನಲ್ಲಿ ವರದಿಯಾದ ಪ್ರಕರಣಗಳು (ರೋಗಿ 60) ಭಿನ್ನವಾಗಿದ್ದು, ಇವರು ಯಾರೂ ವಿದೇಶ ಪ್ರವಾಸ ಮಾಡಿರಲಿಲ್ಲ. ಆದರೂ ಅವರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಮೂರನೇ ಹಂತ ಪ್ರವೇಶಿಸಿತೇ ಎಂಬ ಪ್ರಶ್ನೆ ಉದ್ಭವಕ್ಕೆ ಕಾರಣವಾಗಿದೆ.

‘ವಿದೇಶದಿಂದ ಬಂದವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದ್ದರಿಂದಾಗಿ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ.  ಸೋಂಕು ಕಾಣಿಸಿಕೊಳ್ಳಲು 14 ದಿನಗಳು ಬೇಕಾಗುತ್ತವೆ. ಹಾಗಾಗಿ ವಿದೇಶಗಳಿಂದ  ಬಂದವರನ್ನು ಮನೆಗಳಲ್ಲಿಯೇ ಪ್ರತ್ಯೇಕಿಸಿ, ನಿಗಾ ಇಡಲಾಗಿದೆ. ಮುಂದಿನ ಒಂದು ವಾರ ಹೆಚ್ಚಿನ ಪ್ರಕರಣಗಳು ವರದಿಯಾಗದಿದ್ದಲ್ಲಿ ಸೋಂಕು ನಿಯಂತ್ರಣಕ್ಕೆ ಬರಲಿದೆ. ಮೂರನೇ ಹಂತ ಪ್ರವೇಶಿಸುವುದನ್ನೂ ತಡೆಯಲು ಸಾಧ್ಯ’ ಎಂದು ಆರೋಗ್ಯ  ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಡಾ. ಪ್ರಕಾಶ್ ಕುಮಾರ್ ತಿಳಿಸಿದರು. 

ಜನರ ಸಹಕಾರ ಅಗತ್ಯ: ‘ಸಮುದಾಯಕ್ಕೆ ಹರಡುವುದನ್ನು ತಡೆಯಲು  ಕ್ರಮ ಕೈಗೊಳ್ಳಲಾಗುತ್ತಿದೆ. ಜನರು  ಈ ಅವಧಿಯಲ್ಲಿ ಮನೆಯಲ್ಲಿಯೇ ಉಳಿಯಬೇಕು. ಸಾರ್ವಜನಿಕ ಸ್ಥಳಗಳಿಗೆ ಹೋದರೂ ಸಾಮಾಜಿಕ ಅಂತರ ಕಾ‍ಪಾಡಿಕೊಳ್ಳಬೇಕು. ಪ್ರತ್ಯೇಕ ವಾಸದ ಸಂಬಂಧ  ಮುದ್ರೆ ಹಾಕಿದರೂ ಕೆಲವರು ಹೊರಗಡೆ ಓಡಾಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ’‌ ಎಂದು ಅವರು ಮಾಹಿತಿ ನೀಡಿದರು.

‘ತುಮಕೂರಿನ ವ್ಯಕ್ತಿ ದೆಹಲಿಯಲ್ಲಿ ಹಲವರ ಸಂಪರ್ಕದಲ್ಲಿದ್ದರು. ಮೈಸೂರಿನ ವ್ಯಕ್ತಿಯು ಔಷಧಿ ಉತ್ಪಾದನಾ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ವೈದ್ಯರ ಸಂಪರ್ಕ ಹೊಂದಿದ್ದರು. ಇದರಿಂದ ಅವರಿಗೆ ಸೋಂಕು ತಗುಲಿರುವ ಸಾಧ್ಯತೆಯಿದೆ’ ಎಂದು ಮಾಹಿತಿ ನೀಡಿದರು. 

ಒಂದೇ ದಿನ 17 ಪ್ರಕರಣ ವರದಿ
ರಾಜ್ಯದಲ್ಲಿ ಶನಿವಾರ ಒಂದೇ ದಿನ 17 ‘ಕೋವಿಡ್‌–19’ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಸೋಂಕು ಶಂಕೆ ಹಿನ್ನೆಲೆಯಲ್ಲಿ 69 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 

ಬೆಂಗಳೂರಿನಲ್ಲಿ ಮಾ.9ರಂದು ಮೊದಲು ಕಾಣಿಸಿಕೊಂಡಿದ್ದ ಈ ಸೋಂಕು ಈಗ ವಿವಿಧ ಜಿಲ್ಲೆಗಳಿಗೆ ವ್ಯಾಪಿಸಿಕೊಳ್ಳುತ್ತಿದೆ. 

ಚಿಕ್ಕಬಳ್ಳಾಪುರ, ಮೈಸೂರಲ್ಲಿ ತಲಾ 5, ಉತ್ತರ ಕನ್ನಡದಲ್ಲಿ 4, ಬೆಂಗಳೂರಿನಲ್ಲಿ 2 ಹಾಗೂ ದಾವಣಗೆರೆಯಲ್ಲಿ ಒಂದು ಪ್ರಕರಣ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

ಹಸಿದವರಿಗೆ ಸಹಾಯವಾಣಿ
ಅನ್ನವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕೂಲಿ ಕಾರ್ಮಿಕರ ಹಸಿವು ನೀಗಿಸಲು, ಸೂರು ಕಲ್ಪಿಸಲು ಕಾರ್ಮಿಕ ಇಲಾಖೆ  ಸಹಾಯವಾಣಿ (155214) ಆರಂಭಿಸಿದೆ.

ಸಹಾಯವಾಣಿಗೆ ಕರೆ ಮಾಡಿದರೆ, ಕಾರ್ಮಿಕರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಇಲಾಖೆ ಮಾಡಲಿದೆ.

*
ಪ್ರತಿನಿತ್ಯವೂ ನಿರ್ಣಾಯಕವಾಗಿದ್ದು, ಸಮರ್ಥವಾಗಿ ಎದುರಿಸಬೇಕಿದೆ. ಅಗತ್ಯ ಪ್ರಮಾಣದಲ್ಲಿ ಪರೀಕ್ಷಾ ಕಿಟ್‌ಗಳು ಲಭ್ಯ ಇವೆ. 
-ಜಾವೇದ್ ಅಖ್ತರ್, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು