ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿವಾರ ಸೋಂಕಿತರ ಸಂಖ್ಯೆ ದುಪ್ಪಟ್ಟು, ಕೊರೊನಾ ರಾಜ್ಯಕ್ಕೆ ಕಾಲಿಟ್ಟು 4 ತಿಂಗಳು

ಜುಲೈ 8ಕ್ಕೆ ನಾಲ್ಕು ತಿಂಗಳು
Last Updated 7 ಜುಲೈ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಟ್ಟು ಜುಲೈ 8ಕ್ಕೆ ನಾಲ್ಕು ತಿಂಗಳು ಕಳೆಯಲಿದ್ದು, ಸೋಂಕಿತರ ಸಂಖ್ಯೆ ವಾರಕ್ಕೆ ಸರಾಸರಿ ದುಪ್ಪಟ್ಟಾಗುತ್ತಿದೆ. ಮೊದಲ ಕೋವಿಡ್ ಪ್ರಕರಣ ಮಾ.8ರಂದು ಬೆಂಗಳೂರಿನಲ್ಲಿ ವರದಿಯಾಗಿತ್ತು.

ಸೋಂಕಿತರಲ್ಲಿ 99 ವರ್ಷದ ವೃದ್ಧೆ ಸೇರಿದಂತೆ ಶೇ 42ರಷ್ಟು ಮಂದಿ ಗುಣಮುಖರಾಗಿರುವುದು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ, ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಾದ ಬೆನ್ನಲ್ಲಿಯೇ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸಕಾಲಕ್ಕೆ ರೋಗಿಗಳಿಗೆ ಹಾಸಿಗೆ, ಚಿಕಿತ್ಸೆಯನ್ನು ಒದಗಿಸುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

ಕೋವಿಡ್ ಆಸ್ಪತ್ರೆಗಳು ಭರ್ತಿ ಯಾಗಿವೆ. ಪರಿಣಾಮ ಅಲ್ಲಿ ದಾಖಲಾಗಿದ್ದ ಸೋಂಕು ಲಕ್ಷಣ ಗೋಚರಿಸದವರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ತೀವ್ರವಾಗಿ ಅಸ್ವಸ್ಥಗೊಂಡವರಿಗೆ ಹಾಸಿಗೆಯನ್ನು ಮೀಸಲಿಡುವ ಉದ್ದೇಶದಿಂದ ಲಕ್ಷಣಗಳೇ ಗೋಚರಿಸದ ಹಾಗೂ ಪ್ರಾರಂಭಿಕ ಲಕ್ಷಣಗಳಿಂದ ಬಳಲುತ್ತಿರುವ ರೋಗಿಗಳನ್ನು ದಾಖಲಿಸಿಕೊಳ್ಳದ ಕೋವಿಡ್ ಆಸ್ಪತ್ರೆಗಳು, ಬೇರೆ ಆಸ್ಪತ್ರೆಗಳಿಗೆ ತೆರಳುವಂತೆ ಸೂಚಿಸುತ್ತಿವೆ. ಇದರಿಂದಾಗಿ ರೋಗಿಗಳು ಆಸ್ಪತ್ರೆಗೆ ಹುಡುಕಿ ಅಲೆದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಚಿಕಿತ್ಸೆ ಸಿಗದೇ ಕೆಲ ರೋಗಿಗಳು ಕೊನೆಯುಸಿರೆಳೆದಿದ್ದಾರೆ.

ಸಜ್ಜಾಗದ ಆಸ್ಪತ್ರೆಗಳು: ಸೋಂಕಿತರ ಸಂಖ್ಯೆ ಹೆಚ್ಚಳವಾದ ಬೆನ್ನಲ್ಲೇ ಖಾಸಗಿ ಆಸ್ಪತ್ರೆಗಳಿಗೆ,ಸರ್ಕಾರ ಶಿಫಾರಸು ಮಾಡುವ ರೋಗಿಗಳಿಗಾಗಿ ಶೇ 50 ರಷ್ಟು ಹಾಸಿಗೆಗಳನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕೆಂದು ಸೂಚಿಸಿದೆ.

ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ 483 ಖಾಸಗಿ ಆಸ್ಪತ್ರೆಗಳ ಪಟ್ಟಿ ಮಾಡಲಾಗಿದ್ದರೂ ಬೆರಳಣಿಕೆಯಷ್ಟು ಆಸ್ಪತ್ರೆಗಳಷ್ಟೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮರ್ಥವಾಗಿವೆ. ಅವುಗಳೂ ಸೂಕ್ತ ರೀತಿಯಲ್ಲಿ ಚಿಕಿತ್ಸೆಗೆ ಸಜ್ಜಾಗಿಲ್ಲ.ಕೆಲ ಖಾಸಗಿ ಆಸ್ಪತ್ರೆಗಳು ಶಿಫಾರಸು ಮಾಡಲ್ಪಟ್ಟ ರೋಗಿಗಳಿಗೆ ಹಾಸಿಗೆ ಇಲ್ಲ ಎಂದು ದಾಖಲಿಸಿ ಕೊಳ್ಳದೆ ವಾಪಸ್ ಕಳುಹಿಸುತ್ತಿವೆ. ಕೆಲವು
ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ವಸೂಲು ಮಾಡಲಾಗುತ್ತಿದೆ ಎಂಬ ದೂರುಗಳು ಬರುತ್ತಿವೆ.

***

ಹೆಚ್ಚಿನ ದರ ವಿಧಿಸುವ ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಅದಕ್ಕೆ ಅವಕಾಶ ನೀಡಬಾರದು

- ಡಾ.ಕೆ. ಸುಧಾಕರ್,ವೈದ್ಯಕೀಯ ಶಿಕ್ಷಣ ಸಚಿವ

***

ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹಂಚಿಕೆ ಮಾಡಲು ಕೇಂದ್ರೀಕೃತ ವ್ಯವಸ್ಥೆ ರೂಪಿಸಬೇಕು. ಆಗ ರೋಗಿ ಗಳಿಗೆ ಸಮಸ್ಯೆಯಾಗುವುದಿಲ್ಲ. ಸದ್ಯ ಬಂದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ

- ಡಾ.ಆರ್. ರವೀಂದ್ರ, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್‍ಗಳ ಅಸೋಸಿಯೇಷನ್ (ಫಾನಾ) ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT