ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ: ಆಸ್ಪತ್ರೆ ಭರ್ತಿಯಾದರೆ ಮನೆಯಲ್ಲೇ ಚಿಕಿತ್ಸೆ

ಕೋವಿಡ್‌ ಕಾರ್ಯಪಡೆ ಸೂಚನೆಯಂತೆ ಕ್ರಮ: ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ
Last Updated 1 ಜೂನ್ 2020, 1:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈಮೀರಿ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಂಟಾದಲ್ಲಿ ಅಪಾಯದಲ್ಲಿ ಇರುವ ರೋಗಿಗಳಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲಿದೆ. ಉಳಿದವರಿಗೆಮನೆಯಲ್ಲಿಯೇ ಆರೈಕೆ ಮಾಡಲಾಗುತ್ತದೆ.

ರಾಜ್ಯಕ್ಕೆ ಕೋವಿಡ್ ಕಾಲಿಟ್ಟು ಮೂರು ತಿಂಗಳು ಕಳೆಯುವುದರೊಳಗೆ ಸೋಂಕಿತರ ಸಂಖ್ಯೆ ಮೂರು ಸಾವಿರ ದಾಟಿದೆ. ಬಹುತೇಕರಿಗೆ ಸೋಂಕು ಲಕ್ಷಣಗಳು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದೆ. ಕೋವಿಡ್ ಕಾರ್ಯಪಡೆಯು ಕಾಲಕಾಲಕ್ಕೆ ಅಗತ್ಯ ಸೂಚನೆಗಳನ್ನು ನೀಡುತ್ತಿದೆ.

ಸದ್ಯ ರಾಜ್ಯದ ಆಸ್ಪತ್ರೆಗಳಲ್ಲಿರುವ 86,425 ಹಾಸಿಗೆಗಳಲ್ಲಿ 25 ಸಾವಿರಕ್ಕೂ ಅಧಿಕ ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೇ ಮೀಸಲಿಡಲಾಗಿದೆ. ಕೋವಿಡ್‌ ಪೀಡಿತರಿಗೆ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಿದಲ್ಲಿ ಉಳಿದ ರೋಗಿಗಳಿಗೆ ಸಮಸ್ಯೆಯಾಗಲಿದೆ. ಹಾಗಾಗಿ ಸೋಂಕಿತರ ಸಂಖ್ಯೆ ಏರಿದರೆ ಬಹಿರಂಗವಾಗಿ ಲಕ್ಷಣಗಳು ಗೋಚರಿಸದ ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಕೋವಿಡ್ ಕಾರ್ಯಪಡೆ ಸಲಹೆ ನೀಡಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಪ್ರಾರಂಭಿಕ ಹಂತದಲ್ಲಿರುವ ಹಾಗೂ ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸಿದ ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಅನುಮೋದನೆ ನೀಡಿದೆ. ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟಿರುವ ಶೇ 29.27 ರಷ್ಟು ಹಾಸಿಗೆಗಳ ಪೈಕಿ ಶೇ 8ರಷ್ಟು ಹಾಸಿಗೆಗಳು ಮಾತ್ರ ಭರ್ತಿಯಾಗಿವೆ. ಆದರೆ, ಲಾಕ್‌ ಡೌನ್‌ ಸಡಿಲಿಸಿದ ಬಳಿಕ ಪ್ರತಿನಿತ್ಯ ಸರಾಸರಿ 100 ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್ ಕಾರ್ಯಪಡೆ ಸೂಚನೆಯಂತೆ ಇಲಾಖೆಯು ಸಾಂಸ್ಥಿಕ ಕ್ವಾರಂಟೈನ್‌ ಹಾಗೂ ಕೋವಿಡ್‌ ಪರೀಕ್ಷೆಯ ನಿಯಮಾವಳಿಯನ್ನು ಸಡಿಲಿಸಿದೆ. ಸಾಂಸ್ಥಿಕ ಕ್ವಾರಂಟೈನ್ ಅವಧಿ 14ರಿಂದ 7ದಿನಗಳಿಗೆ ಇಳಿಕೆಯಾಗಿದ್ದು, ಸೋಂಕಿನ ಲಕ್ಷಣಗಳು ಗೋಚರಿಸದಿದ್ದಲ್ಲಿ
ಪರೀಕ್ಷೆ ಇಲ್ಲದೆಯೇ ಮನೆಗೆ ತೆರಳಬಹುದಾಗಿದೆ.

ಸಾಮಾನ್ಯ ಚಿಕಿತ್ಸೆ: ರಾಜ್ಯದಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣವೂ ಏರುತ್ತಿದೆ ಕೆಲವರು 8ರಿಂದ 10 ದಿನಗಳಲ್ಲೇ ಗುಣಮುಖರಾಗುತ್ತಿದ್ದಾರೆ. ಶೇ 80 ರಷ್ಟು ರೋಗಿಗಳು ಸಾಮಾನ್ಯ ಚಿಕಿತ್ಸೆಯಿಂದಲೇ ಗುಣಮುಖರಾಗುತ್ತಿದ್ದರೇ, ಶೇ 20 ರಷ್ಟು ರೋಗಿಗಳಿಗಷ್ಟೇ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಉಸಿರಾಟದ ಸಮಸ್ಯೆ ಇರುವ ರೋಗಿಗಳಿಗೆ ಮಾತ್ರ ವೆಂಟಿಲೇಟರ್ ಸಂಪರ್ಕ ನೀಡಬೇಕಾಗುತ್ತದೆ.

‘ಸೋಂಕಿನ ಸೌಮ್ಯ ಲಕ್ಷಣಗಳು ಇದ್ದವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಬಹುದು. ಅಂತಹವರಿಗೆ ವಿಶೇಷ ಚಿಕಿತ್ಸೆ ಅಗತ್ಯವಿಲ್ಲ. ಆರೋಗ್ಯ ಸಿಬ್ಬಂದಿ ನಿರಂತರ ಅವರ ಮೇಲೆ ನಿಗಾ ಇಡಬೇಕಾಗುತ್ತದೆ. ‘ಆರೋಗ್ಯ ಸೇತು’ ಮೊಬೈಲ್‌ ಆ್ಯಪ್‌ ಡೌನ್‌ ಲೋಡ್‌ ಮಾಡಿಕೊಂಡಿರಬೇಕು’ ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

ಯಾರಿಗೆ ಮನೆಯಲ್ಲಿ ಚಿಕಿತ್ಸೆ ನೀಡಬಹುದು?

* ಬಹಿರಂಗವಾಗಿ ಸೋಂಕು ಲಕ್ಷಣಗಳು ಗೋಚರಿಸದ ವ್ಯಕ್ತಿಗಳಿಗೆ

* ಸೋಂಕಿನ ಸೌಮ್ಯ ಲಕ್ಷಣಗಳು ಹೊಂದಿರುವವರಿಗೆ

* ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲು ಅಗತ್ಯ ವ್ಯವಸ್ಥೆ ಇರಬೇಕು

* ಉಸಿರಾಟದ ಸಮಸ್ಯೆ, ಎದೆನೋವು ಕಾಣಿಸಿದರೆ ಆಸ್ಪತ್ರೆಗೆ ತೆರಳಬೇಕು

**
ಮನೆಯಲ್ಲಿಯೇ ಚಿಕಿತ್ಸೆಗೆ ಕೇಂದ್ರ ಅನುಮೋದನೆ ನೀಡಿದೆ. ಆದರೆ, ನಮ್ಮಲ್ಲಿನ ಆಸ್ಪತ್ರೆಗಳಲ್ಲಿ ಸದ್ಯ ಸಾಕಷ್ಟು ಹಾಸಿಗೆಗಳು ಖಾಲಿಯಿವೆ.
-ಜಾವೇದ್ ಅಖ್ತರ್, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

**

ಅಂಕಿ–ಅಂಶಗಳು

577: ಕೊರೊನಾ ಸೋಂಕಿತರಿಗೆ ಮೀಸಲಿಟ್ಟಿರುವ ಆಸ್ಪತ್ರೆಗಳು

25,830: ಕೊರೊನಾ ಸೋಂಕಿತರಿಗೆ ಮೀಸಲಿಟ್ಟಿರುವ ಹಾಸಿಗೆಗಳು

2,048: ಸೋಂಕಿತರಿಗೆ ಮೀಸಲಿಟ್ಟಿರುವ ಐಸಿಯು ಹಾಸಿಗೆಗಳು

988:ಸೋಂಕಿತರಿಗೆ ಮೀಸಲಿಟ್ಟಿರುವ ವೆಂಟಿಲೇಟರ್ ಹಾಸಿಗೆಗಳು

8,073: ಮೀಸಲಿಟ್ಟಿರುವ ಸೆಂಟ್ರಲ್ ಆಕ್ಸಿಜನರೇಟೆಡ್ ಹಾಸಿಗೆಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT