ಶನಿವಾರ, ಜೂಲೈ 11, 2020
29 °C

ನಿಮ್ಮ ರಕ್ಷಣೆಗೆ ನಾವಿದ್ದೇವೆ: ಅನಿವಾಸಿ ಕನ್ನಡಿಗರಿಗೆ ಅಶ್ವತ್ಥನಾರಾಯಣ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ನಿಮ್ಮ ರಕ್ಷಣೆಗೆ ರಾಜ್ಯ ಸರ್ಕಾರ ಇದೆ. ಯಾವುದೇ ಆತಂಕ ಬೇಡ. ಉತ್ತಮ ಆರೋಗ್ಯ ಸೇವೆ ನಮ್ಮಲ್ಲಿದೆ’ ಎಂದು ಅಮೆರಿಕದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದರು.

‘ನಾವು ವಿಶ್ವ ಕನ್ನಡಿಗರು‘ (ನಾವಿಕ) ಅಮೆರಿಕದ ಕನ್ನಡ ಒಕ್ಕೂಟ ಆಯೋಜಿಸಿದ್ದ ವೀಡಿಯೊ ಸಂವಾದದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ, ಕೊರೊನಾ ಲಾಕ್‌ಡೌನ್‌, ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಅಮೆರಿಕದಲ್ಲಿರುವ ಕನ್ನಡಿಗರಿಗೆ ಧೈರ್ಯ ಹೇಳಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವ ನಾವಿಕ ಬಳಗಕ್ಕೆ ಅಭಿನಂದನೆ ಸಲ್ಲಿಸಿದರು.

‘ಅಮೆರಿಕನ್ನಡಿಗರಿಗೆ ನಾವಿಕ ಪರಿಣಿತರ ಮೂಲಕ ಕೊರೊನಾ ಮಾಹಿತಿ, ಮುನ್ನೆಚ್ಚರಿಕೆಯ ಸಲಹೆಗಳನ್ನು ನೀಡುತ್ತಿರುವುದು ಉತ್ತಮ ಕೆಲಸ. ಕೊರೊನಾ ದೀರ್ಘಕಾಲ ನಮ್ಮೊಂದಿಗೆ ಇರುವುದರಿಂದ ಆರೋಗ್ಯ, ಆರ್ಥಿಕ ಸಮಸ್ಯೆ ಎದುರಿಸಲು ಪರಸ್ಪರ ಸಹಕಾರ ಅಗತ್ಯ. ಇಂಥ ಸನ್ನಿವೇಶದಲ್ಲಿ ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ. ಇಲ್ಲಿರುವ ನಿಮ್ಮ ಆಪ್ತರ ರಕ್ಷಣೆ ನಮ್ಮ ಜವಾಬ್ದಾರಿ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಕೊರೊನಾ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಮೂಲಸೌಕರ್ಯ ಕೊರತೆಯನ್ನು ಹಿಮ್ಮೆಟ್ಟಿ ಇಡೀ ವಿಶ್ವದ ಗಮನ ಸೆಳೆದಿರುವ ಭಾರತ, ಇತರ ರಾಷ್ಟ್ರಗಳಿಗೆ ಪ್ರೇರಣೆ ನೀಡುವಂತಾಗಿದೆ. ನಿಮ್ಮ ಜನ್ಮಭೂಮಿ ಬಗ್ಗೆ ಹೆಮ್ಮೆ ಪಡುವಂಥ ಕೆಲಸ ಆಗುತ್ತಿದೆ‘ ಎಂದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. ವೈರಾಣು ಪತ್ತೆ ಪ್ರಯೋಗಾಲಯದ ಸಂಖ್ಯೆ ಮೂರು ತಿಂಗಳ ಅವಧಿಯಲ್ಲಿ ಎರಡರಿಂದ 60ಕ್ಕೆ ಹೆಚ್ಚಿಸಲಾಗಿದೆ. ಪಿಪಿಇ ಕಿಟ್‌, ಎನ್‌ 95 ಮಾಸ್ಕ್‌, ವೆಂಟಿಲೇಟರ್‌ ತಯಾರಿಕೆಯಲ್ಲಿ ಸ್ವಾಲಂಬನೆ ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ. ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಸಿಬ್ಬಂದಿ ಕೊರತೆ ನೀಗಿಸಲಾಗಿದೆ. ಟೆಲಿಮೆಡಿಸನ್‌, ಟೆಲಿಕನ್ಸಲ್ಟೇಷನ್‌ ಮೂಲಕ ವೈದ್ಯಕೀಯ ಸಲಹೆ ನೀಡಲಾಗುತ್ತಿದೆ. ರಿಮೋಟ್‌ ಐಸಿಯು ವ್ಯವಸ್ಥೆ ಇದೆ. ಜತೆಗೆ ಹೊಸ ಟೆಸ್ಟಿಂಗ್ ವಿಧಾನ, ಹೊಸ ಉಪಕರಣಗಳ ಸಂಶೋಧನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಆಗಿಲ್ಲ. ಮುಂದೆಯೂ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲೂ ಆರೋಗ್ಯ ಸಮೀಕ್ಷೆ ನಡೆಸಿ ಆ ಮಾಹಿತಿಯನ್ನು ಡಿಜಿಟಲೀಕರಣ ಮಾಡಲಾಗಿದೆ. ಆಸ್ಪತ್ರೆಯಲ್ಲಿರುವ ಮೂಲಸೌಕರ್ಯ, ಸಿಬ್ಬಂದಿ, ಔಷಧ, ವೈದ್ಯಕೀಯ ಪರಿಕರಗಳ ದತ್ತಾಂಶದ ಡ್ಯಾಶ್‌ಬೋರ್ಡ್‌ ಇದ್ದು, ರಿಯಲ್‌ ಟೈಮ್‌ ಮಾಹಿತಿ ಲಭ್ಯವಾಗುತ್ತಿದೆ. ಮನೆ ಹಾಗೂ ಸಾಂಸ್ಥಿಕ ಕ್ವಾರಂಟೈನ್‌ ಬಗ್ಗೆಯೂ ಮಾಹಿತಿ ಇರುತ್ತದೆ. ಈ ಎಲ್ಲ ವಿಷಯಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿ ಯಾವುದೇ ಕೊರತೆ, ಸಮಸ್ಯೆ ಉಂಟಾಗದಂತೆ ಶ್ರಮಿಸುತ್ತಿದ್ದಾರೆ‘ ಎಂದೂ ಹೇಳಿದರು.

‘ವಿಶ್ವದ ಯಾವುದೇ ಭಾಗದಲ್ಲಿದ್ದರೂ ನಮ್ಮವರ ಕಷ್ಟಕ್ಕೆ ಸ್ಪಂದಿಸುವ ಔದಾರ್ಯ ನಮ್ಮ ಕನ್ನಡಿಗರಿಗಿದೆ. ಕೊರೊನಾ ಸಂದರ್ಭದಲ್ಲಿ ಇಡೀ ವಿಶ್ವ ತತ್ತರಿಸಿ ಹೋಗಿದೆ. ಇಂಥ ಸಂದರ್ಭದಲ್ಲಿ ಅಮೆರಿಕದಲ್ಲಿರುವ ನಮ್ಮ ದೇಶದ ಅದರಲ್ಲೂ ವಿಶೇಷವಾಗಿ ಕರ್ನಾಟಕ ಮೂಲದ ವೈದ್ಯರು ಅಪ್ರತಿಮ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಜತೆ ಮಾತನಾಡಿ, ಸಾಕಷ್ಟು ಮಾಹಿತಿ ಪಡೆದಿದ್ದೇನೆ. ನಮ್ಮ ದೇಶದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ವೈದ್ಯರಿಗೆ ಅಮೆರಿಕದಲ್ಲಿ ಅಪಾರ ಗೌರವ, ಮನ್ನಣೆ ದೊರೆತಿದೆ. ಇದು ಹೆಮ್ಮೆ ವಿಷಯ’ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ‘ನಾವಿಕ’ ನೀಡಿರುವ ₹ 10 ಲಕ್ಷ ದೇಣಿಗೆಗೆ ಸರ್ಕಾರದ ಪರವಾಗಿ ಉಪ ಮುಖ್ಯಮಂತ್ರಿ ಕೃತಜ್ಞತೆ ಸಲ್ಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು