ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಮತ್ತೆ 5 ಕಿಯೋಸ್ಕ್ ಹಸ್ತಾಂತರ

ಶನಿವಾರಸಂತೆ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು, ಕುಟ್ಟದಲ್ಲೂ ಮಾದರಿ ಸಂಗ್ರಹ
Last Updated 28 ಮೇ 2020, 14:23 IST
ಅಕ್ಷರ ಗಾತ್ರ

ಮಡಿಕೇರಿ: ಕೋವಿಡ್-19ರ ಸಂಬಂಧ ಕೊಡಗು ಜಿಲ್ಲೆಯಲ್ಲಿ ಮತ್ತೆ 5 ಕಿಯೋಸ್ಕ್ (ಮೂಗು ಮತ್ತು ಗಂಟಲು ದ್ರವ ಮಾದರಿ ಸಂಗ್ರಹಣೆ) ಅನ್ನು ಖಾಸಗಿ ಸಹಭಾಗಿತ್ವದಲ್ಲಿ ತಯಾರಿಸಿದ್ದು, ಈ ಕಿಯೋಸ್ಕ್‌ಗಳನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಮೂಲಕ ಜಿಲ್ಲಾಡಳಿತಕ್ಕೆ ಗುರುವಾರ ಹಸ್ತಾಂತರಿಸಲಾಯಿತು.

ಕ್ಲಬ್ ಮಹೀಂದ್ರ ಸಂಸ್ಥೆ ವತಿಯಿಂದ 3 ಕಿಯೋಸ್ಕ್, ಪಾಲಿಬೆಟ್ಟ ಟಾಟಾ ಕಾಫಿ ಸಂಸ್ಥೆ ಮತ್ತು ವಿರಾಜಪೇಟೆಯ ತೀತೀರ ಜಾಸನ್ ಮತ್ತು ದರೇನ್ ಚಿಣ್ಣಪ್ಪ ಅವರಿಂದ ತಲಾ ಒಂದು ಕಿಯೋಸ್ಕ್‌ ಅನ್ನು ನಗರದ ಕೋವಿಡ್ ಆಸ್ಪತ್ರೆ ಆವರಣದಲ್ಲಿ ಹಸ್ತಾಂತರಿಸಲಾಯಿತು.

ಈ ಹೊಸ 5 ಕಿಯೋಸ್ಕ್‌ಗಳನ್ನು ಶನಿವಾರಸಂತೆ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು ಮತ್ತು ಕುಟ್ಟ ಆರೋಗ್ಯ ಕೇಂದ್ರಗಳಿಗೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾಹಿತಿ ನೀಡಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಅಧೀಕ್ಷಕ ಡಾ.ಲೋಕೇಶ್, ಡಾ.ಮಂಜುನಾಥ್, ಡಾ.ರಾಮಚಂದ್ರ ಕಾಮತ್, ಡಾ.ಮಹೇಶ್, ಕ್ಲಬ್ ಮಹೇಂದ್ರ ವ್ಯವಸ್ಥಾಪಕ ಸ್ವಾಪನ್ ಕುಮಾರ್ ದಾಸ್, ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯ ಮುಖ್ಯಸ್ಥ ಎಂ.ಬಿ.ಗಣಪತಿ, ಕ್ಲಬ್ ಮಹೀಂದ್ರದ ಮಾನವ ಸಂಪನ್ಮೂಲ ವಿಭಾಗದ ಕಾರ್ತಿಕೆಯನ್, ಥಾಮಸ್, ನವೀನ್, ಅರುಣ್ ಕುಮಾರ್ ಹಾಜರಿದ್ದರು.

ಯೋಗಕ್ಷೇಮ ವಿಚಾರಣೆ: ಸುಂಟಿಕೊಪ್ಪದ ವಿಕಾಸ್ ಜನಸೇವಾ ಟ್ರಸ್ಟ್‌ನ ಜೀವನ ದಾರಿ ಆಶ್ರಮಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಪರಿಶೀಲಿಸಿದರು.ಆಶ್ರಮದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಟ್ರಸ್ಟ್ ಅಧ್ಯಕ್ಷ ಎಚ್.ಕೆ.ರಮೇಶ್ ಅವರೊಂದಿಗೆ ಸಮಾಲೋಚನೆ ನಡೆಸಿದರು.ಆಶ್ರಮಕ್ಕೆ ನಿಯಮಾನುಸಾರ ಅಗತ್ಯ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರು.

ಆಶ್ರಯ ಪಡೆದಿರುವ ಅನಾಥರು ಹಾಗೂ ವಯೋವೃದ್ಧರ ಆರೋಗ್ಯದ ಬಗ್ಗೆ ಕಾಳಜಿ ತೋರುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಕೋವಿಡ್ –19 ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚಿಸಿದ ಅವರು ಆಶ್ರಮದಲ್ಲಿದ್ದವರ ಯೋಗಕ್ಷೇಮ ವಿಚಾರಿಸಿದರು.

ಶ್ರೀಶಕ್ತಿ ಆಶ್ರಮ: ಮಡಿಕೇರಿಯ ತ್ಯಾಗರಾಜ ಕಾಲೊನಿಯಲ್ಲಿರುವ ಶ್ರೀಶಕ್ತಿ ವೃದ್ಧಾಶ್ರಮಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಎಲ್ಲಾ ವಯೋವೃದ್ಧರ ಯೋಗಕ್ಷೇಮ ವಿಚಾರಿಸಿದರು. ಹಿರಿಯ ಜೀವಗಳ ಆರೋಗ್ಯದ ಮೇಲೆ ನಿಗಾ ಇಡುವಂತೆ ಸಿಬ್ಬಂದಿಗಳಿಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿದರು.

ತನಲ್ ಆಶ್ರಮ: ಅನಾಥ ಹಾಗೂ ನಿರ್ಗತಿಕ ಮಹಿಳೆಯರ ಆಶ್ರಯ ತಾಣವಾಗಿರುವ ಮಡಿಕೇರಿಯ ತನಲ್ ಸಂಸ್ಥೆಗೂ ಭೇಟಿ ನೀಡಿದ ಜಿಲ್ಲಾಧಿಕಾರಿ, ಆಶ್ರಯ ಪಡೆದವರ ಆರೋಗ್ಯ ವಿಚಾರಿಸಿದರು. ಕೊರೊನಾ ಸೋಂಕು ವ್ಯಾಪಿಸದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಸ್ವಚ್ಛತೆ ಮತ್ತು ಆಶ್ರಮದ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ಮೇಲುಸ್ತುವಾರಿ ಎಂ.ಎಚ್.ಮೊಹಮ್ಮದ್ ಮುಸ್ತಫ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅರುಂಧತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT