ಸೋಮವಾರ, ಜುಲೈ 26, 2021
26 °C
ನಿವಾಸಿ ಕಲ್ಯಾಣ ಸಂಘಟನೆಗಳಿಗೆ ಆರೋಗ್ಯ ಇಲಾಖೆ ಸೂಚನೆ: ಪರಸ್ಪರ ಅಂತರ ಕಾಯ್ದುಕೊಳ್ಳಲು ಮನವಿ

ಕೋವಿಡ್–19 ಭೀತಿ | ಸಾಮೂಹಿಕ ಸಂತೋಷ ಕೂಟಗಳಿಗಿಲ್ಲ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್ಡೌನ್ ಸಡಿಲಿಸಿದರೂ ಹುಟ್ಟು ಹಬ್ಬ, ಕಿಟ್ಟಿ ಪಾರ್ಟಿ ಸೇರಿದಂತೆ ವಿವಿಧ ಸಂತೋಷ ಕೂಟಗಳಿಗೆ ಅವಕಾಶಗಳಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಕೋವಿಡ್‌ ಪ್ರಕಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದ್ದು, ನಿವಾಸಿ ಕಲ್ಯಾಣ ಸಂಘಟನೆಗಳು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಬಿಡುಗಡೆ ಮಾಡಿದ್ದಾರೆ. ಯಾವುದೇ ಅಪರಿಚಿತ ವ್ಯಕ್ತಿ ಹಾಗೂ ಅಥಿತಿ ಪ್ರವೇಶಿಸಿದಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಅವರನ್ನು ಸ್ಕ್ರೀನಿಂಗ್ ಮಾಡಬೇಕು.

ವ್ಯಕ್ತಿಯು ಶೀತ, ಜ್ವರ, ಕೆಮ್ಮು ಸೇರಿದಂತೆ ಕೊರೊನಾ ಸೋಂಕಿನ ಲಕ್ಷಣವನ್ನು ಹೊಂದಿದ್ದಲ್ಲಿ ಆರೋಗ್ಯ ತಪಾಸಣೆಗೆ ಫಿವರ್ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಕೂಡಲೇ ಕಳುಹಿಸಬೇಕು. ಎಲ್ಲ ಸಮಯದಲ್ಲೂ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಿಗಾ ಇಡಲು ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಅಳವಡಿಸಬೇಕು. ಪ್ರತಿಯೊಬ್ಬ ನಿವಾಸಿಯೂ ಮನೆಯಿಂದ ಹೊರಗಡೆ ಬರುವಾಗ ಮುಖಗವಸನ್ನು ಧರಿಸಿರಬೇಕು ಎಂದು ತಿಳಿಸಲಾಗಿದೆ. 

ಕಟ್ಟಡಗಳಿಗೆ ಪ್ರವೇಶಿಸುವ ಹಾಗೂ ತೆರಳುವ ಪ್ರವೇಶ ದ್ವಾರದಲ್ಲಿ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಲು ಸ್ಯಾನಿಟೈಸರ್‌ಗಳನ್ನು ಇಟ್ಟಿರಬೇಕು. ಲಿಫ್ಟ್‌ ಸೇರಿದಂತೆ ಸಾಮಾನ್ಯ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವ ಜತೆಗೆ ಸೋಂಕು ನಿವಾರಕದಿಂದ ಪ್ರತಿನಿತ್ಯ ಸ್ವಚ್ಛಗೊಳಿಸುತ್ತಿರಬೇಕು.

ಉದ್ಯಾನವನ, ನಡಿಗೆ ಪಥದಲ್ಲಿ ಸಾಗುವಾಗಲೂ ಅಂತರ ಕಾಯ್ಡುಕೊಳ್ಳುವುದನ್ನು ಮರೆಯಕೂಡದು. ಹೊರಾಂಗಣ ಕ್ರೀಡೆ, ಶಿಬಿರಗಳನ್ನೂ ಸದ್ಯದ ಪರಿಸ್ಥಿತಿಯಲ್ಲಿ ನಡೆಸುವ ಹಾಗಿಲ್ಲ. ಅದೇ ರೀತಿ, ಸೂಕ್ತ ಮಾರ್ಗಸೂಚಿ ಬಿಡುಗಡೆಯಾಗುವವರೆಗೂ ಸಾರ್ವಜನಿಕ ಜಿಮ್‌ಗಳು, ಈಜುಕೊಳವನ್ನು ಬಳಸುವ ಹಾಗಿಲ್ಲ.

ಮನೆ ಕ್ವಾರಂಟೈನ್‌ಗೆ ಒಳಗಾದವರು ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿವಾಸಿ ಕಲ್ಯಾಣ ಸಂಘಟನೆಗಳು ನೋಡಿಕೊಳ್ಳಬೇಕು. ಒಂದು ವೇಳೆ ಮನೆಯಿಂದ ಹೊರ ಬಂದಲ್ಲಿ ಕೂಡಲೇ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಲಾಗಿದೆ. 

ಆಪ್ತಮಿತ್ರ ಸಹಾಯವಾಣಿ ಸಂಖ್ಯೆ: 14410

ನಿವಾಸಿಗಳು ಅನುಸರಿಸಬೇಕಾದ ಸೂಚನೆಗಳು
* ನೆರೆಹೊರೆಯವರ ಆರೋಗ್ಯದ ಸ್ಥಿತಿಗತಿಯ ನಿಗಾ ಇಟ್ಟಿರಿ. ಮುಂಜಾಗರೂಕ ಕ್ರಮಗಳೊಂದಿಗೆ ಎಚ್ಚರಿಕೆಯಿಂದ ಇರಿ
* ಕಳೆದ 14 ದಿನಗಳಲ್ಲಿ ವಿದೇಶ, ಅನ್ಯ ರಾಜ್ಯಗಳಿಗೆ ಪ್ರಯಾಣ ಮಾಡಿದ್ದಲ್ಲಿ ಅಥವಾ ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಲ್ಲಿ ಆರೋಗ್ಯ ಅಧಿಕಾರಿಗೆ ಮಾಹಿತಿ ನೀಡಿ
* ವಿದೇಶ ಅಥವಾ ಅನ್ಯ ರಾಜ್ಯಗಳಿಂದ ಬಂದಿದ್ದಲ್ಲಿ ಕಟ್ಟುನಿಟ್ಟಾಗಿ 14 ದಿನಗಳು ಮನೆಯ ಕ್ವಾರಂಟೈನ್‌ಗೆ ಒಳಗಾಗಿ 
* ಯಾವುದೇ ನಿವಾಸಿ ವಿದೇಶ ಅಥವಾ ಅನ್ಯ ರಾಜ್ಯಗಳಿಂದ ಬಂದಲ್ಲಿ ಕೂಡಲೇ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ
* 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರು ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಿ
* ಮಕ್ಕಳು ಗುಂಪು ಗುಂಪಾಗಿ ಸೇರದಂತೆ ನೋಡಿಕೊಳ್ಳಿ. ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ
* ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು