ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪರೀಕ್ಷೆ | ಆರು ಗಂಟೆಗಳಲ್ಲಿ ಮೃತ ವ್ಯಕ್ತಿಯ ಮಾದರಿ ಸಂಗ್ರಹ

ಸ್ಪಷ್ಟನೆ ನೀಡಿದ ಆರೋಗ್ಯ ಇಲಾಖೆ
Last Updated 10 ಜೂನ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಶಂಕಿತ ವ್ಯಕ್ತಿ ಮೃತಪಟ್ಟ ಆರು ಗಂಟೆಗಳೊಳಗೆ ಅವರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ, ಕೋವಿಡ್ ಪರೀಕ್ಷೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಇಲಾಖೆಯು ಜೂ.8ರಂದು ಕೋವಿಡ್ ಪರೀಕ್ಷೆ ಸಂಬಂಧ ಪ್ರಕಟಿಸಿದ್ದ ಪರಿಷ್ಕೃತ ಮಾರ್ಗಸೂಚಿಯಲ್ಲಿ ಮೃತ ವ್ಯಕ್ತಿಗಳ ಕೋವಿಡ್ ಪರೀಕ್ಷೆಯ ಬಗ್ಗೆ ಉಲ್ಲೇಖಿಸಿರಲಿಲ್ಲ. ಇದರಿಂದಾಗಿ ಗೊಂದಲ ಉಂಟಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಇಲಾಖೆ, ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಹಾಗೂ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲಿ, ಮೃತಪಟ್ಟ ವ್ಯಕ್ತಿಗಳಿಗೆ ಮೊದಲಿನಂತೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಕಾರ ಐಎಲ್‌ಐ ಹಾಗೂ ಸಾರಿ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಹಾಗೂ ಮೃತಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಬೇಕು. ವಿದೇಶ ಹಾಗೂ ಅನ್ಯರಾಜ್ಯಗಳಿಂದ ಬಂದವರಲ್ಲಿಯೂ ಈ ಮಾದರಿಯ ಅನಾರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಲಾಗುವುದು. ಅದೇ ರೀತಿ, ಕಂಟೈನ್‌ಮೆಂಟ್ ವಲಯ ಹಾಗೂ ಬಫರ್ ವಲಯದ ನಿವಾಸಿಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದೆ.

ಪರೀಕ್ಷೆಯ ಬಳಿಕ ಮೃತ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಲ್ಲಿ ನೇರ ಹಾಗೂ ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಿ, ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಅಷ್ಟೇ ಅಲ್ಲ, ಅವರಿಗೆ ಕೂಡ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT