ಶನಿವಾರ, ಜುಲೈ 31, 2021
23 °C
‘ಹಿರಿಯರಿಗೆ ಮಗನಾಗಿ, ಕಿರಿಯರಿಗೆ ತಂದೆಯಾಗಿ ಅಂತ್ಯಸಂಸ್ಕಾರ’

ಕೋವಿಡ್‌: 12 ಶವ ಸಾಗಿಸಿದ ಆಂಬುಲೆನ್ಸ್‌ ಚಾಲಕ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

prajavani

ಮೈಸೂರು: ‘ಚಿಕ್ಕ ವಯಸ್ಸಿನಲ್ಲೇ ಪೋಷಕರನ್ನು ಕಳೆದುಕೊಂಡು ಯಾತನೆ ಅನುಭವಿಸಿದೆ. ಕಷ್ಟ ಎಂದರೇನು ಎಂಬುದು ಚೆನ್ನಾಗಿ ಗೊತ್ತಿದೆ. ಕೋವಿಡ್‌ನಿಂದ ಮೃತಪಟ್ಟ ಹಿರಿಯರಿಗೆ ಒಬ್ಬ ಮಗನಾಗಿ, ಕಿರಿಯರಿಗೆ ತಂದೆಯಾಗಿ ಕಾಳಜಿ ವಹಿಸಿ ಅಂತ್ಯಸಂಸ್ಕಾರಕ್ಕೆ ಸಹಕರಿಸುತ್ತಿದ್ದೇನೆ’

–ಹೀಗೆಂದು ಭಾವುಕರಾಗಿ ನುಡಿದಿದ್ದು ಮೈಸೂರಿನ ಆರೋಗ್ಯ ಇಲಾಖೆಯ ‘ಶ್ರದ್ಧಾಂಜಲಿ’ ಆಂಬುಲೆನ್ಸ್‌ ಚಾಲಕ ನಾಗರಾಜ್‌.


ನಾಗರಾಜ್

ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ 12 ಮಂದಿಯನ್ನು ಅವರು ಈ ವಾಹನದಲ್ಲಿ ಸಾಗಿಸಿದ್ದಾರೆ. ಜೊತೆಗೆ ಶವಸಂಸ್ಕಾರದ ಪ್ರಕ್ರಿಯೆಯಲ್ಲೂ ಕೈಜೋಡಿಸುತ್ತಿದ್ದಾರೆ.

‘ಕುಟುಂಬದ ನರಳಾಟ ಕಂಡು ಕರುಳು ಕಿವುಚಿ ಬರುತ್ತದೆ. ಇದೆಂಥಾ ಬದುಕು? ಇದೆಂಥಾ ಕಾಯಿಲೆ ಎಂಬ ಪ್ರಶ್ನೆಗಳು ಮೂಡುತ್ತಿವೆ. ಹಲವಾರು ವರ್ಷಗಳಿಂದ ಸಾವಿರಾರು ಶವಗಳನ್ನು ಸಾಗಿಸಿದ್ದೇನೆ. ಆದರೆ, ಪೋಷಕರಾಗಲಿ, ಅವರ ಮಕ್ಕಳಾಗಲಿ ಶವವನ್ನು ಸರಿಯಾಗಿ ನೋಡಲು, ಕೊನೆ ಬಾರಿ ಪ್ರೀತಿಯಿಂದ ಒಮ್ಮೆ ಸ್ಪರ್ಶಿಸಲೂ ಸಾಧ್ಯವಾಗದ ಪರಿಯನ್ನು ಹಿಂದೆಂದೂ ಕಂಡಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೆ.ಆರ್‌.ನಗರ ತಾಲ್ಲೂಕಿನ 36 ವರ್ಷದ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟ ಸಂದರ್ಭ ತುಂಬಾ ಬೇಸರ ತಂದಿತು. ಚಿಕ್ಕ ವಯಸ್ಸು. ಅವರ ವಯಸ್ಸಾದ ಪೋಷಕರ ರೋದನ ಕಂಡು ನಾನೂ ಕಣ್ಣೀರಾದೆ’ ಎಂದ ಅವರ ದನಿಯಲ್ಲಿ ಮತ್ತೆ ದುಃಖ ಉಮ್ಮಳಿಸಿ ಬಂತು.

46 ವರ್ಷದ ಇವರು 2016ರಿಂದ ಶ್ರದ್ಧಾಂಜಲಿ ಆಂಬುಲೆನ್ಸ್‌ನ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ತಿಲಕನಗರದಲ್ಲಿ ಮನೆಯಿದ್ದು, ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ.

‘ಆರಂಭದಲ್ಲಿ ತುಸು ಭಯ ಇದ್ದಿದ್ದು ನಿಜ. ಆದರೆ, ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಿರುವುದರಿಂದ ಆತಂಕ ಕಡಿಮೆ ಆಗಿದೆ. ವಾಹನದಲ್ಲಿ ಶವ ಇರಿಸಿ, ಪಿಪಿಇ ಕಿಟ್‌ ಧರಿಸಿಯೇ ಚಾಲನೆ ಮಾಡುತ್ತೇನೆ. ಇಲಾಖೆಯ ಸೂಚನೆ ಮೇರೆಗೆ ಮೃತದೇಹವನ್ನು ಎಚ್ಚರಿಕೆಯಿಂದ ಪ್ಯಾಕ್‌ ಮಾಡಿ ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಸುತ್ತೇನೆ’ ಎಂದರು.

***

ಅನ್ನ ಕೊಟ್ಟಿರುವ ಕೆಲಸವಿದು. 3 ತಿಂಗಳಿಂದ ರಜೆ ತೆಗೆದುಕೊಂಡಿಲ್ಲ. ಮಧ್ಯರಾತ್ರಿ ಕೂಡ ಶವ ಸಾಗಿಸಿದ್ದೇನೆ. ದೇವರನ್ನು ನಂಬಿ ಕೆಲಸ ಮಾಡುತ್ತಿದ್ದೇನೆ

- ನಾಗರಾಜ್‌, ಆಂಬುಲೆನ್ಸ್‌ ಚಾಲಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು