ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ಸೋಂಕಿತರೊಂದಿಗೆ ನೇರ ಸಂಪರ್ಕಿತರು ಪ್ರತ್ಯೇಕ ಕೊಠಡಿಗೆ

ಕಾರ್ಯಪಡೆ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೀರ್ಮಾನ
Last Updated 30 ಮಾರ್ಚ್ 2020, 2:13 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರೊಂದಿಗಿನ ನೇರ ಸಂಪರ್ಕದಿಂದಲೇ ಶೇ 25 ರಷ್ಟು ಕೋವಿಡ್‌–19 ಪ‍್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ನೇರ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಮನೆಯಲ್ಲಿ ನಿಗಾ ಇರಿಸುವ ಬದಲು ಕ್ವಾರಂಟೈನ್ ಕೇಂದ್ರಗಳಲ್ಲಿಇರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತೀರ್ಮಾನಿಸಿದೆ.

ಕೋವಿಡ್–19 ಕಾರ್ಯಪಡೆ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ‘ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿಯ ಕುಟುಂಬಗಳ ಸದಸ್ಯರು ಹಾಗೂ ನಿಕಟ ಸಂಪರ್ಕದಲ್ಲಿದ್ದವರನ್ನು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಲಾಗುತ್ತದೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳಲ್ಲಿ ಶೇ 25 ರಷ್ಟು ಪ್ರಾಥಮಿಕ ಸಂಪರ್ಕಗಳಿಂದಲೇ ಸೋಂಕು ಹರಡಿದೆ. ಇವರಿಗೆ ಕೈ ಮೇಲೆ ಮುದ್ರೆ ಹಾಕಿ ಮನೆಯಲ್ಲೇ ನಿಗಾ ಇರಿಸಲಾಗುತ್ತದೆ. ಇಂತಹ ವ್ಯಕ್ತಿಗಳಲ್ಲೂ ಅನೇಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಪ್ರತ್ಯೇಕ ಕೇಂದ್ರದಲ್ಲಿ ನಿಗಾ ಇರಿಸುವುದು ಅಗತ್ಯ’ ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

‘ಮನೆಯಲ್ಲಿ ಪ್ರತ್ಯೇಕ ಇರುವ ವ್ಯಕ್ತಿಗಳು ನಿಯಮಗಳನ್ನು ಪಾಲಿಸುತ್ತಿಲ್ಲ. ಕೆಲವರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಇದು ಸೋಂಕು ಹರಡಲು ಪ್ರಮುಖ ಕಾರಣ. ಇಂತಹ ವ್ಯಕ್ತಿಗಳನ್ನು ಮನೆಯಲ್ಲಿ ನಿಗಾ ಇರಿಸುವುದು ಕಷ್ಟ’ ಎಂದಿದ್ದಾರೆ.

ಎರಡು ವಿಭಾಗ:ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ‘ಅತ್ಯಂತ ಅಪಾಯಕಾರಿ ಸಂಪರ್ಕ’ ಮತ್ತು ‘ಕಡಿಮೆ ಅಪಾಯದ ಸಂಪರ್ಕ’ ಎಂದು ಎರಡು ವಿಭಾಗವಾಗಿಸಲು ಆಯುಕ್ತರು ಸೂಚನೆ ನೀಡಿದ್ದಾರೆ.

60 ವರ್ಷ ಮೀರಿದ ವ್ಯಕ್ತಿ, ಮಧುಮೇಹಿ, ಅಧಿಕ ರಕ್ತದೊತ್ತಡ, ಎಚ್‍ಐವಿ ರೋಗಿಗಳು, ಅಂಗಾಂಗ ಕಸಿ ಮಾಡಿಸಿಕೊಂಡವರು, ವೈದ್ಯಕೀಯ ಚಿಕಿತ್ಸೆಯಲ್ಲಿರುವವರನ್ನು ಅತ್ಯಂತ ಅಪಾಯಕಾರಿ ಸಂಪರ್ಕವೆಂದು ವಿಭಾಗಿಸಲಾಗುತ್ತದೆ. ಆರೋಗ್ಯವಂತರಾಗಿವವರನ್ನು ಕಡಿಮೆ ಅಪಾಯಕಾರಿ ಎಂದು ವಿಭಾಗಿಸಲಾಗುತ್ತದೆ. ವೈದ್ಯಕೀಯ ತಂಡಕ್ಕೆ ವಿಭಾಗಿಸುವ ಹೊಣೆ ವಹಿಸಲಾಗಿದೆ.

ಹೆಚ್ಚು ಅಪಾಯಕಾರಿ ಸಂಪರ್ಕ ವ್ಯಕ್ತಿಗಳನ್ನು ಸರ್ಕಾರಿ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಇದು ಆಸ್ಪತ್ರೆಯ ಕೊಠಡಿ ಅಥವಾ ತಾತ್ಕಾಲಿಕ ಕೊಠಡಿ ಆಗಿರಬಹುದು. ಕಡಿಮೆ ಅಪಾಯಕಾರಿ ಸಂಪರ್ಕ ವ್ಯಕ್ತಿಗಳನ್ನು ಹೋಟೆಲ್, ಹಾಸ್ಟೆಲ್‍ಗೆ ಸ್ಥಳಾಂತರಿಸಬೇಕು. ದೊಡ್ಡ ಹಾಲ್ ಅಥವಾ ಪ್ರತ್ಯೇಕ ಕೊಠಡಿಯಲ್ಲಿರಿಸಬೇಕು. ಎರಡು ಹಾಸಿಗೆ ನಡುವೆ ಆರು ಅಡಿ ಅಂತರವಿರಬೇಕು. ಈ ಕೇಂದ್ರಗಳು ಕನಿಷ್ಠ 50 ಹಾಸಿಗೆ ಹೊಂದಿರಬೇಕು. 24 ಗಂಟೆಯೂ ವೈದ್ಯರಿರಬೇಕು ಎಂದು ಸೂಚಿಸಲಾಗಿದೆ.

ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಮನೆಯಿಂದ ಆ್ಯಂಬುಲೆನ್ಸ್ ಮೂಲಕ ಕೇಂದ್ರ, ಆಸ್ಪತ್ರೆಗಳಿಗೆ ಸ್ಥಳಾಂತರಿಸಬೇಕು. ಈ ವಾಹನಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ತಿಳಿಸಲಾಗಿದೆ.

ಗಡಿಭಾಗದವರಿಗೆ ಒಳ ಬಿಡದಿರಲು ಸೂಚನೆ
ಕಲಬುರ್ಗಿ: ‘ಕೊರೊನಾ ಸೋಂಕು ವ್ಯಾ‍ಪಕವಾಗಿ ಹರಡುತ್ತಿರುವ ಕಾರಣ ಹೊರರಾಜ್ಯ ಹಾಗೂ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸಿಲುಕಿಕೊಂಡವರು ಸದ್ಯಕ್ಕೆ ತಮ್ಮ ಊರಿಗೆ ಮರಳುವುದು ಬೇಡ. ಅದಕ್ಕೆ ಅಧಿಕಾರಿಗಳು ಅವಕಾಶ ನೀಡಬಾರದು’ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.

ಭಾನುವಾರ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಎಲ್ಲರೂ ಮರಳುವುದರಿಂದ ಸೋಂಕು ಹರಡುವ ಭೀತಿ ಗ್ರಾಮಸ್ಥರಲ್ಲಿ ಮೂಡಬಹುದು. ಇದಕ್ಕೆ ಆಸ್ಪದ ನೀಡಬಾರದು’ ಎಂದರು.

‘ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಗಡಿಯಲ್ಲಿರುವ ಜನರನ್ನು ಒಳಗಡೆ ಬಿಡಬಾರದು. ಅಧಿಕಾರಿಗಳು ಅವರು ಇರುವಲ್ಲಿಯೇ ಊಟದ ವ್ಯವಸ್ಥೆ ಮಾಡುವರು’ ಎಂದರು.

ರೈತರಿಗೆ ಅನುಮತಿ: ರೈತರು ತಮ್ಮ ಉತ್ಪನ್ನಗಳನ್ನು ಮಾರಲು ಆಕ್ಷೇಪವಿಲ್ಲ. ಅವರು ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ಪಡೆದು ಎಪಿಎಂಸಿಗೆ ತಂದು ಮಾರಬಹುದು’‍ ಎಂದರು.

‘ಮದ್ಯದ ಅಂಗಡಿ ತೆರೆಯುವುದಿಲ್ಲ’
ಬೆಂಗಳೂರು: ರಾಜ್ಯದಲ್ಲಿ ಮದ್ಯದ ಅಂಗಡಿಗಳು ತೆರೆಯಲಿವೆ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ ಹರಿದಾಡಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಅಬಕಾರಿ ಇಲಾಖೆ ಆಯುಕ್ತವಿ. ಯಶವಂತ್, ‘ಮದ್ಯದ ಅಂಗಡಿ ತೆರೆಯುವ ನಿರ್ಧಾರವನ್ನು ಸರ್ಕಾರ ಕೈಗೊಂಡಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಮಸೀದಿ ಧ್ವನಿವರ್ಧಕಗಳಿಂದ ಜಾಗೃತಿ
ಬೆಂಗಳೂರು: ರಾಜ್ಯದ ಎಲ್ಲ ಮಸೀದಿಗಳಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಯಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಧ್ವನಿವರ್ಧಕಗಳ ಮೂಲಕ ಪ್ರಕಟಿಸುವಂತೆ ಎಲ್ಲ ಮಸೀದಿ ಆಡಳಿತ ಸಮಿತಿಗಳಿಗೆ ಸರ್ಕಾರ ನಿರ್ದೇಶಿಸಿದೆ. ಸೋಂಕಿನಿಂದ ಪಾರಾಗುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕೃತ ಮೂರು ಭಾಷೆಗಳಲ್ಲಿ ಲಗತ್ತಿಸಿರುವ ಧ್ವನಿಮುದ್ರಿಕೆಯನ್ನು (ಆಡಿಯೊ ಕ್ಲಿಪ್) ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ಮೂಲಕ ಪ್ರಕಟಿಸುವಂತೆ ತಿಳಿಸಿದೆ.

ದಿನಕ್ಕೆ ಕನಿಷ್ಠ 4 ಬಾರಿ ಪ್ರಕಟಿಸುವ ಮೂಲಕ ಸಾರ್ವಜನಿಕರಿಗೆ ಕೊರೊನಾ ಕುರಿತು ಅರಿವು ಮೂಡಿಸುವಂತೆ ರಾಜ್ಯ ವಕ್ಫ್ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT