ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಸೋಂಕಿನ ಬಗ್ಗೆ ವದಂತಿ ಹಬ್ಬಿಸಿದರೆ ಕ್ರಿಮಿನಲ್ ಕೇಸ್

ವಿದೇಶಕ್ಕೆ ಹೋಗುವವರು ಮಾಹಿತಿ ಕೊಡಲು ಸೂಚನೆ
Last Updated 4 ಮಾರ್ಚ್ 2020, 19:14 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್–19 ಸೋಂಕಿನ ಬಗ್ಗೆ ವದಂತಿ ಹಬ್ಬಿಸಿ ಆತಂಕ ಸೃಷ್ಟಿಸುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಆರೋಗ್ಯ ಇಲಾಖೆ ಎಚ್ಚರಿಸಿದೆ.

‘ವದಂತಿ ಹಬ್ಬಿಸುವವರ ವಿರುದ್ಧ ಕೇರಳ ಹಾಗೂ ತೆಲಂಗಾಣದಲ್ಲಿ ಈಗಾಗಲೇ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಲಾಗುತ್ತಿದೆ. ಕರ್ನಾಟಕದಲ್ಲೂ ಅದನ್ನು ಜಾರಿ ಮಾಡಲಾಗುವುದು’ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್ ಪಾಂಡೆ ಎಚ್ಚರಿಕೆ ನೀಡಿದ್ದಾರೆ.

‘ಜನರು ಕೂಡ ವದಂತಿಗಳಿಗೆ ಕಿವಿಗೊಡಬಾರದು. ಮಕ್ಕಳಲ್ಲಿ ಜ್ವರ ಸೇರಿದಂತೆ ಅನಾರೋಗ್ಯ ಲಕ್ಷಣಗಳು ಕಾಣಿಸಿಕೊಂಡಲ್ಲಿ ಶಾಲೆಗೆ ಕಳುಹಿಸಬಾರದು ಎಂದಿರುವ ಅವರು, ಶಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಪ್ರಾರಂಭಿಸಲಾಗಿದೆ. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂ ವರದಿ ಮಾಡಿಕೊಂಡು, ತಪಾಸಣೆಗೆ ಒಳಪಡಬೇಕು’ ಎಂದು ತಿಳಿಸಿದ್ದಾರೆ.

ಮಾಸ್ಕ್‌ಗೆ ಹೆಚ್ಚಿದ ಬೇಡಿಕೆ: ಕೋವಿಡ್ ಸೋಂಕು ಕುರಿತು ಹರಡುತ್ತಿರುವ ವದಂತಿಗಳಿಂದ ಆತಂಕಕ್ಕೆ ಒಳಗಾಗಿರುವ ಜನರು ಮುಖಗವಸು (ಮಾಸ್ಕ್‌) ಮೊರೆ ಹೋಗಿದ್ದಾರೆ. ಇದರಿಂದಾಗಿ ಮಾಸ್ಕ್‌ ಕೊರತೆ ಕಾಣಿಸಿಕೊಂಡಿದೆ. ಕೆಲವು ಕಡೆ ವ್ಯಾಪಾರಿಗಳು ದುಬಾರಿ ಬೆಲೆಗೆ ಮಾರುತ್ತಿದ್ದಾರೆ.

ಮಾಸ್ಕ್‌ ತಯಾರಿಕೆಗೆ ಬೇಕಾದ ಕಚ್ಚಾ ಪದಾರ್ಥಗಳನ್ನು ಚೀನಾ ಸೇರಿದಂತೆ ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈಗ ಆಮದು ಮತ್ತು ರಫ್ತು ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಮಾಸ್ಕ್‌ಗಳ ಬೆಲೆ ಒಂದೇ ಸಮನೆ ಏರಲಾರಂಭಿಸಿದೆ. ಇನ್ನೊಂದೆಡೆ ಬೇಡಿಕೆ ಮತ್ತು ಪೂರೈಕೆ ನಡುವೆ ಅಂತರ ಉಂಟಾಗಿದೆ.

‘ರಾಜ್ಯದ ವಿವಿಧೆಡೆ ₹ 5ರ ಬೆಲೆಯ ಸರ್ಜಿಕಲ್‌ ಮಾಸ್ಕ್‌ಗಳನ್ನು ₹ 50 ವರೆಗೂ ಮಾರಾಟ ಮಾಡಲಾಗುತ್ತಿದೆ. ₹ 80 ಬೆಲೆಯ ‘ಎನ್‌–95’ ಮಾಸ್ಕ್‌ಗಳನ್ನು ₹ 200ರಿಂದ ₹ 400 ವರೆಗೂ ಮಾರಾಟ ಮಾಡುವ ಮೂಲಕ ಸುಲಿಗೆ ನಡೆಸಲಾಗುತ್ತಿದೆ’ ಎಂಬ ದೂರುಗಳು ಕೇಳಿಬಂದಿವೆ.

‘ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಚೀನಾದಂತೆಯೇ ಇಲ್ಲಿಯೂ ಮಾಸ್ಕ್‌‌ಗಳಿಗೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಬಹುದು’ ಎನ್ನುತ್ತಾರೆ ಮಾಸ್ಕ್‌ಗಳ ವಿತರಕರು ಹಾಗೂ ಔಷಧಿ ಮಳಿಗೆಯ ಮಾಲೀಕರು.

‘ಮಾಸ್ಕ್‌ಗಳ ಖರೀದಿಗೆ ಜನ ಮುಂದಾಗಿದ್ದಾರೆ. ಆದರೆ, ಪೂರೈಕೆಯ ಸಮಸ್ಯೆಯಿದೆ. ಹಾಗಾಗಿ, ಬೇಡಿಕೆ ಸಲ್ಲಿಸಿದವರಲ್ಲಿ ಶೇ 40 ರಷ್ಟು ಮಂದಿಗೆ ಮಾತ್ರ ಮಾಸ್ಕ್‌ಗಳನ್ನು ಒದಗಿಸಲು ಸಾಧ್ಯ’ ಎಂದು ಮಾಸ್ಕ್‌ಗಳ ವಿತರಕಬಿ.ಎನ್. ಬಸವರಾಜ್ ತಿಳಿಸಿದರು.

**

ವಿದೇಶಿ ಪ್ರವಾಸಿಗರನ್ನೂ ತಪಾಸಣೆ ಮಾಡಲು ಸೂಚಿಸ ಲಾಗಿದೆ. 6 ತಿಂಗಳಿಗೆ ಸಾಕಾಗುವಷ್ಟು ಮಾಸ್ಕ್‌ಗಳಿಗೆ ಬೇಡಿಕೆ ಪಟ್ಟಿ ಸಲ್ಲಿಸಿದ್ದೇವೆ.
–ಡಾ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT