ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸಭೆ ಅಧಿಕಾರ ಮೊಟಕು: ವಿರೋಧ

Last Updated 12 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು:ಆಶ್ರಯ ಮನೆಗಳ ಹಂಚಿಕೆಯಲ್ಲಿಗ್ರಾಮಸಭೆಗಳಿಗೆ ನೀಡಿದ್ದ ಅಧಿಕಾರವನ್ನು ಮೊಟಕುಗೊಳಿಸಲು ಮುಂದಾಗಿರುವ ಸರ್ಕಾರದ ನಡೆಯನ್ನು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಖಂಡಿಸಿದೆ.

‘ಅಕ್ರಮ ತಡೆಯುವ ಹೆಸರಿನಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿರುವುದುಪ್ರಜಾಪ್ರಭುತ್ವದ ಬೇರಿನ ಸಾರವನ್ನೇ ತಿರುಚಲು ಹೊರಟಂತಾಗಿದೆ. 2007ರಲ್ಲಿಯೂ ಸರ್ಕಾರ ಇದೇ ವಿಷಯದಲ್ಲಿ ಕಾನೂನು ತಿದ್ದುಪಡಿ ಮಾಡುವ ದುಃಸ್ಸಾಹಸಕ್ಕೆ ಕೈಹಾಕಿತ್ತು. ಆಗ ಗ್ರಾಮ ಸಭೆಯ ಪಾರಮ್ಯವನ್ನು ಎತ್ತಿ ಹಿಡಿದು, ಸ್ಥಳೀಯ ಸರ್ಕಾರವನ್ನು ಬಲಗೊಳಿಸಲು ರಾಜ್ಯ ದಾದ್ಯಂತ ಐದು ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯತ್ ಹಾಗೂ ಗ್ರಾಮ ಸಭೆ ಸದಸ್ಯರನ್ನು ಒಗ್ಗೂಡಿಸಿ, ಸರ್ಕಾರದ ವಿರುದ್ಧ ‌ಹೋರಾಟ ನಡೆಸಲಾಯಿತು. ಇದರಿಂದಾಗಿ ಅಂದಿನ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರು ಸರ್ಕಾರದ ತಿದ್ದುಪಡಿಗೆ ಅಂಕಿತ ಹಾಕಿರಲಿಲ್ಲ’ ಎಂದು ಆಂದೋಲನದ ಕೃಪಾ ಎಂ.ಎಂ ತಿಳಿಸಿದರು.

‘2016ರಲ್ಲಿ ಪುನಃ ವಸತಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಿ, ಅಂತಿಮಗೊಳಿಸಲು ಶಾಸಕರ ಅಧ್ಯಕ್ಷತೆಯ ಜಾಗೃತ ಸಮಿತಿಗೆ ಅಧಿಕಾರ ನೀಡುವ ಆದೇಶವನ್ನು ಸರ್ಕಾರ ಹೊರಡಿತು. ಸರ್ಕಾರದ ಈ ನಡೆಯ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲಾಯಿತು.ಸರ್ಕಾರದ ಸುತ್ತೋಲೆಗಳು ಹಾಗೂ ವಸತಿ ಯೋಜನೆಗಳಿಗೆಸಂಬಂಧಿಸಿದ ಮಾರ್ಗದರ್ಶಿ ಅಧಿಸೂಚನೆಯನ್ನು 2017ರಲ್ಲಿಯೇ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ, ತಡೆ ಹಿಡಿದಿದೆ’ ಎಂದು ಮಾಹಿತಿ ನೀಡಿದರು.

‘ಗ್ರಾಮ ಸಭೆಯ ಹಕ್ಕಾಗಿದ್ದ ಫಲಾನುಭವಿಗಳ ಆಯ್ಕೆ ಮತ್ತು ಆ ಪಟ್ಟಿಯನ್ನು ಅಂತಿಮಗೊಳಿಸುವ ಅಧಿಕಾರವನ್ನು ಅಧಿಕಾರಿಗಳು, ಶಾಸಕರ ಹಿಡಿತದಲ್ಲಿರುವ ಜಾಗೃತ ಸಮಿತಿಗೆ ನೀಡಲು ಹೊರಟಿರುವ ಸರ್ಕಾರದ ನಿರ್ಧಾರ ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕ. ಸರ್ಕಾರ ಈ ನಿರ್ಧಾರಗಳನ್ನು ತಕ್ಷಣವೇ ಹಿಂಪಡೆದು, ಕಾನೂನಾತ್ಮಕವಾಗಿರುವ ‌ಗ್ರಾಮ ಪಂಚಾಯಿತಿಗಳ ಅಧಿಕಾರಗಳನ್ನು ಅವುಗಳಿಗೆ ಹಸ್ತಾಂತರಿಸಬೇಕು. ಒಂದೊಮ್ಮೆ ಸರ್ಕಾರ ತನ್ನ ಈ ತಪ್ಪು ನಿರ್ಧಾರವನ್ನು ಬದಲಾಯಿಸದೇ ಕಾನೂನು ತಿದ್ದುಪಡಿಗೆ ಮುಂದಾದರೆ, ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT