ಸೋಮವಾರ, ನವೆಂಬರ್ 30, 2020
23 °C
ಕಾವ್ಯಾಸಕ್ತರ ಮನ ಸೆಳೆದ ಬಹುಭಾಷಾ ಕವಿಗೋಷ್ಠಿ; ಕವಿತೆಗಳು ಕೇವಲ ಪದಗಳಲ್ಲ: ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅಭಿಮತ

ವಿಕೋಪದ ನೋವು; ಎಚ್ಚರಿಕೆಯ ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಇಲ್ಲಿನ ‘ಕಲಾ ಸಂಭ್ರಮ ವೇದಿಕೆ’ಯಲ್ಲಿ ಶುಕ್ರವಾರ ನಡೆದ ಮಡಿಕೇರಿ ಜನೋತ್ಸವದ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿಗಳು ತಮ್ಮ ಕವನಗಳಲ್ಲಿ ಪ್ರಕೃತಿ ವಿಕೋಪದ ಚಿತ್ರಣವನ್ನು ಕಟ್ಟಿಕೊಟ್ಟರು. ಪ್ರಕೃತಿ ಮುನಿದರೆ ಏನೆಲ್ಲ, ಹೇಗೆಲ್ಲಾ ಅನಾಹುತ ಸೃಷ್ಟಿಸಿಗೆ ಕಾರಣವಾದೀತು ಎಂದು ಕವಿ ಮನಸ್ಸುಗಳು ಪದಗಳಲ್ಲಿ ಬಿಚ್ಚಿಟ್ಟರು. ಕೊಡವ, ಅರೆಭಾಷೆ, ತುಳು, ತೆಲುಗು, ಮರಾಠಿ, ಬ್ಯಾರಿ, ಹಿಂದಿ, ಹವ್ಯಕ, ಇಂಗ್ಲಿಷ್‌ ಭಾಷೆಗಳಲ್ಲಿ 60ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳನ್ನು ವಾಚಿಸಿ ಕಾವ್ಯಾಸಕ್ತರ ಮನ ಸೆಳೆದರು. ದಸರಾ ಮೂಲಕ ಸಮಾಜಕ್ಕೆ ಸಂದೇಸ ನೀಡುವ ಪ್ರಯತ್ನ ಮಾಡಿದರು.

ಸತತ ಮಳೆಯ ಅನಾಹುತಕ್ಕೆ ತುತ್ತಾಗುತ್ತಿರುವ ಕೊಡಗಿನಲ್ಲಿ ಆ ನೋವು ಇನ್ನೂ ಮಾಸಿಲ್ಲ ಎಂಬುದು ಕವಿ ಮನಸ್ಸುಗಳ ಪದಗಳಿಂದ ತಿಳಿಯಿತು. ಅಲ್ಲಲ್ಲಿ ಚಾಟಿ ಬೀಸುವ ಕೆಲಸವನ್ನೂ ಯುವ ಕವಿಗಳು ಮಾಡಿದರು. ಇದಕ್ಕೆ ವೇದಿಕೆ ಕಲ್ಪಿಸಿದ್ದು, ಮಡಿಕೇರಿ ದಸರಾ ಸಮಿತಿ ಹಾಗೂ ಬಹುಭಾಷಾ ಗೋಷ್ಠಿ ಸಮಿತಿ. 

ಹೆಚ್ಚಿನ ಕವನಗಳು ಕೊಡಗಿನ ಪ್ರವಾಹದ ಚಿತ್ರಣ ಕಟ್ಟಿಕೊಟ್ಟವು. ಕೊಡಗಿನ ಪರಂಪರೆ, ದೇಶದ ಸಂಸ್ಕೃತಿ, ಸೇವೆ, ಮಾನವೀಯತೆ, ಆಚಾರ–ವಿಚಾರಗಳನ್ನೂ ಕವಿಗಳು ತಮ್ಮ ಸಾಲುಗಳ ಮೂಲಕವೇ ಪ್ರತಿಬಿಂಬಿಸಿದರು. ದಸರಾ ವೈಭವದ ಬಗ್ಗೆಯೂ ಹಲವರು ತಮ್ಮ ಕವನಗಳಲ್ಲಿ ಉಲ್ಲೇಖ ಮಾಡಿದ್ದು ವಿಶೇಷ. ಕವಿಗೋಷ್ಠಿಗೆ ನಗರಸಭೆ ಸ್ವಚ್ಛತಾ ಸಿಬ್ಬಂದಿ ಚಾಲನೆ ನೀಡಿದ್ದು ಗಮನ ಸೆಳೆಯಿತು. ಇದೇ ಸಂದರ್ಭ ‘ಕವಿ ಮನದಿಂದ’ ಬಹುಭಾಷಾ ಕವನ ಸಂಕಲನ ಹೊರ ತರಲಾಯಿತು.

‘ಮರಗುವವರು ಇಲ್ಲಾ ನನಗಾಗಿ ಈಗೇತಕ್ಕೆ ಈ ಬದುಕು ಎಲ್ಲವೂ ನಮ್ಮನ್ನು ತೊರೆದವು ನಮ್ಮ ನೆಲೆಯಿಂದಲೇ ದೂರ ತಳಲ್ಪಟ್ಟವು ಪ್ರೀತಿ ನರಳಿ ನರಳಿ ಜೀವ ಕಾಯುತ್ತಿದೆ ಬದುಕಲು ಇನ್ನೂ ಹಲವು ವರುಷ ಎಂದೂ ಇನ್ನದಾಗದ ಈ ಜೀವನ...’ ಎಂದು ವಿರಾಜಪೇಟೆಯ ರಂಜಿತಾ ಕಾರ್ಯಪ್ಪ ಅವರು ‘ಬೇಗುದಿ’ ಶೀರ್ಷಿಕೆ ಅಡಿ ಪ್ರವಾಹದ ಚಿತ್ರಣ ಕಟ್ಟಿಕೊಟ್ಟರು.

ಇನ್ನು ಸಂತ್ರಸ್ತರು ನೋವು ಕೇಳುವವವರು ಯಾರು ಎನ್ನುವ ಕವನದ ಮೂಲಕ ಸೋಮವಾರಪೇಟೆಯ ಎಂ.ಎ.ರುಬಿನಾ ಅವರು, ಕವನದ ಮೂಲಕವೇ ತಂತ್ರಸ್ತರ ನೋವನ್ನು ಬಿಚ್ಚಿಟ್ಟು ಪರಿಹಾರ ಕಲ್ಪಿಸುವಂತೆ ಮೊರೆಯಿಟ್ಟರು.

ಬೆಂಗಳೂರಿನ ಕೆ.ಗಿರಿಜಾ ಅವರು ‘ರಕ್ಕಸರಾಗದಿರಿ’ ಶೀರ್ಷಿಕೆ ಅಡಿ ‘ರಕ್ಷಣೆಯೇ ಇಲ್ಲದೇ ಪರದಾಡಬೇಕಾದೀತು ಮಾನವಕುಲ ರವಿಯ ತೀಕ್ಷ್ಣ ಕಿರಣಗಳು ಸುಡುವ ಮುನ್ನ ರಕ್ಕಸರಂತೆ ವರ್ತಿಸದೆ ನಾವುಗಳ ಆಗಲೇಬೇಕು ಪರಿಸರ ಪ್ರೇಮಿ’ ಎಂಬ ಸಾಲುಗಳ ಮೂಲಕ ಎಚ್ಚರಿಸಿದರು.

‘ಒರತೆಯಲ್ಲಿ ಚಿಣ್ಣರ ಚೆಲ್ಲಾಟವಿಲ್ಲ ತೇಲುವ ಹಾಯಿ ದೋಣಿಗಳಿಲ್ಲ ಕುಸಿಯುವ ಕನಸು ಕೊಚ್ಚುವ ಬದುಕು
ಕಣ್ಣೆದುರೆ ಮುಳುಗಿ ಹೋಗುವ ಜೀವ ಮಳೆ ತಣ್ಣೀರಲ್ಲ ಹೊಳೆ ಕಣ್ಣೀರು...! – ಎಂಬ ಸಾಲುಗಳ ಮೂಲಕ ಹೊದ್ದೂರು ನಿವಾಸಿ ಮಂಜು ಗೋಪಿನಾಥನ್‌ ಅವರು ಮಳೆಯನ್ನು ನೆನದರು.

ಕೊಡವ ಭಾಷೆಯಲ್ಲಿ ಪತ್ರಕರ್ತರೂ ಆದ ರಂಗಕರ್ಮಿ ಅಲ್ಲಾರಂಡ ವಿಠಲ್ ಅವರು,  ‘ಗೊತ್ತುಂಡ್‌ ನಾಕ್‌ಎಲ್ಲ ಎಲ್ಲಾಂಡ ಆಳ್ ಅಗಲತ್‌ನ ಜಲಸ್ಫೋಟತ್‌ ಆನ ಪೋನಾನ...’ ಎಂದು ವಿಕೋಪದ ನೋವಿನ್ನು ಸಾಲುಗಳಲ್ಲಿ ವ್ಯಕ್ತಪಡಿಸಿದರು.

 ‘.... ವರ್ಷ ವರ್ಷ ಜರಿಯೊಂತಿಂಡ್‌ ಒಂಜೊಂಜೆ ಗುಡ್ಡ ಬೆಟ್ಟ ಅಮ್ಮ ಬಾಲೆ, ಬೊಡೆತಿ ಮಣ್ಣಾತ್‌ ಕಟ್ಟಿಯೊನೆ ಚಟ್ಟ...’ ಎಂದು ವಿಕೋಪದ ನೋವನ್ನು ತುಳು ಭಾಷೆಯಲ್ಲಿ ವಿರಾಜಪೇಟೆಯ ಎಚ್‌.ಜಿ.ಸಾವಿತ್ರಿ ಹೇಳಿದರು.

ಕವಿತೆಗಳು ಕೇವಲ ಪದಗಳಲ್ಲ: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಬಹುಭಾಷಾ ಕವಿಗೋಷ್ಠಿಗೆ ಚಾಲನೆ ನೀಡಿ ಮಾತನಾಡಿ, ‘ನಾಡ ಹಬ್ಬ ದಸರಾಕ್ಕೆ ಎಲ್ಲರೂ ಸಹಕಾರ ನೀಡಬೇಕು. ಪ್ರತಿಯೊಂದು ಕಾರ್ಯಕ್ರಮದಲ್ಲೂ ಜನರು ಪಾಲ್ಗೊಳ್ಳಬೇಕು’ ಎಂದು ಕೋರಿದರು.

‘ಕವಿತೆಗಳು ಕೇವಲ ಪದಗಳಲ್ಲಿ. ಮನಸ್ಸಿನ ಇಂಗಿತವನ್ನು ವ್ಯಕ್ತಪಡಿಸುತ್ತವೆ. ಹೆಚ್ಚು ಕವಿಗಳಿಗೆ ವೇದಿಕೆ ಕಲ್ಪಿಸಿದೆ’ ಎಂದು ಹೇಳಿದರು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್‌ ಮಾತನಾಡಿ, ಅರ್ಥಗರ್ಭಿತವಾದ ಪದಗಳ ಜೋಡಣೆ ಮಾಡಿ ಬರೆಯುವ ಕಲೆ ಎಲ್ಲರಿಗೂ ಬರಲ್ಲ. ಯುವ ಕವಿಗಳಿಗೆ ವೇದಿಕೆ ಸ್ಫೂರ್ತಿದಾಯಕವಾಗಬೇಕು ಎಂದು ಹೇಳಿದರು.

ಮಡಿಕೇರಿಯ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ಸ್ವರಚಿತ ಕವನ ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು. ಜಿಲ್ಲೆಯ ಪ್ರಕೃತಿ ಸೊಬಗು ವಿಭಿನ್ನವಾಗಿದೆ. ಪರಿಸರವನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ಕವಿಗೋಷ್ಠಿ ಸಮಿತಿ ಅಧ್ಯಕ್ಷ ಚಿ.ನಾ.ಸೋಮೆಶ್‌ ಮಾತನಾಡಿ, ‘ಕವಿಯೊಬ್ಬ ಸಮಾಜದಲ್ಲಿನ ಅಂಕು–ಡೊಂಕುಗಳನ್ನು ಕವನಗಳ ಮೂಲಕ ತೋರ್ಪಡಿಸಿ ಸಮಾಜವನ್ನು ತಿದ್ದುತ್ತಾನೆ. ಪದಕ್ಕೆ ಅಂಥ ಶಕ್ತಿಯಿದೆ’ ಎಂದು ಬಣ್ಣಿಸಿದರು.

ತ್ರಿಭಾಷಾ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್‌ ದೇವಯ್ಯ, ಕೊಡಗು ಜಿಲ್ಲಾ ಪತ್ರಕರ್ತರ ಅಧ್ಯಕ್ಷೆ ಸವಿತಾ ರೈ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.