ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್‌ ಇನ್ | ‘ಕರ್ನಾಟಕ ಒನ್‌’ನಲ್ಲೂ ಸಾರಿಗೆ ಸೇವೆ: ಲಕ್ಷ್ಮಣ ಸವದಿ

ಎಲ್‌ಎಲ್ಆರ್‌, ಡಿಎಲ್‌ಗೆ ಸಾರಿಗೆ ಕಚೇರಿಗೆ ಹೋಗಬೇಕಿಲ್ಲ
Last Updated 7 ಜೂನ್ 2020, 20:54 IST
ಅಕ್ಷರ ಗಾತ್ರ

ಬೆಂಗಳೂರು: ಚಾಲನಾ ಪರವಾನಗಿ (ಡಿಎಲ್‌),ಚಾಲನೆ ಕಲಿಕಾ ಪರವಾನಗಿಗೆ (ಎಲ್‌ಎಲ್‌ಆರ್‌) ಅರ್ಜಿ ಸಲ್ಲಿಸಲು ಇನ್ನು ಸಾರಿಗೆ ಕಚೇರಿಗಳಿಗೆ ಹೋಗಬೇಕಿಲ್ಲ. ನಾಲ್ಕು ಪ್ರಮುಖ ಸೇವೆಗಳನ್ನು ಕರ್ನಾಟಕ ಒನ್‌ ಹಾಗೂ ಬೆಂಗಳೂರು ಒನ್‌ ಕೇಂದ್ರಗಳಲ್ಲೇ ಪಡೆಯಬಹುದು.

‘ಪ್ರಜಾವಾಣಿ’ ಭಾನುವಾರ ಏರ್ಪಡಿಸಿದ್ದ ಫೋನ್‌ ಇನ್ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಈ ವಿಚಾರ ತಿಳಿಸಿದರು.

‘ಎಲ್‌ಎಲ್‌ಆರ್‌, ಡಿಎಲ್‌ಗೆ ಅರ್ಜಿ ಸಲ್ಲಿಸಲು ಸಾರಿಗೆ ಇಲಾಖೆ ಕಚೇರಿಗಳಿಗೆ ಹೋದರೆ ಅಲ್ಲಿ ಮಧ್ಯವರ್ತಿಗಳ ಹಾವಳಿ ವಿಪರೀತ ಇದೆ. ಅಧಿಕಾರಿಗಳು ಅರ್ಜಿಯನ್ನೇ ಸ್ವೀಕರಿಸದೇ ಮಧ್ಯವರ್ತಿಗಳ ಬಳಿ ಕಳುಹಿಸುತ್ತಾರೆ’ ಎಂದು ಕರೆ ಮಾಡಿದ ಅನೇಕರು ದೂರಿದರು. ಇದಕ್ಕೆ ಉತ್ತರಿಸಿದ ಸಚಿವರು, ‘ಇಲಾಖೆಯ ಸೇವೆಗಳಲ್ಲಿ ಪಾರದರ್ಶಕತೆ ತರಲು ಶಕ್ತಿಮೀರಿ ಶ್ರಮಿಸುತ್ತಿದ್ದೇವೆ. ಇಲಾಖೆಯ ನಾಲ್ಕು ಸೇವೆಗಳನ್ನು ಕರ್ನಾಟಕ ಒನ್‌ ಹಾಗೂ ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಪ್ರಾಯೋಗಿಕವಾಗಿ ನೀಡಲು ಆರಂಭಿಸಿದ್ದೇವೆ. ಶೀಘ್ರವೇ ಈ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದೇವೆ’ ಎಂದರು.

‘ಎಲ್‌ಎಲ್‌ಆರ್‌ಗೆ ಆನ್‌ಲೈನ್‌ನಲ್ಲೇ ‍ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಉತ್ತೀರ್ಣರಾದವರು ಎಲ್‌ಎಲ್‌ಆರ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಚಾಲನಾ ಪರವಾನಗಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರ ಮೊಬೈಲ್‌ಗೆ ಚಾಲನಾ ಪರೀಕ್ಷೆಯ ದಿನಾಂಕ, ಸ್ಥಳ ಹಾಗೂ ಸಮಯದ ಕುರಿತ ಸಂದೇಶ ಕಳುಹಿಸಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನೇರವಾಗಿ ಚಾಲನಾ ಪರವಾನಗಿ ತಲುಪಿಸಲಾಗುತ್ತದೆ. ಎಲ್ಲೂ ಮಧ್ಯವರ್ತಿಗಳ ಹಾವಳಿಗೆ ಅವಕಾಶವೇ ಇರುವುದಿಲ್ಲ’ ಎಂದು ವಿವರಿಸಿದರು.

ಇಲಾಖೆಗೆ ಸಂಬಂಧಿಸಿದ 24 ಸೇವೆಗಳನ್ನು ಈಗಾಗಲೇ ಸಕಾಲ ಯೋಜನೆಯಡಿ ನೀಡಲಾಗುತ್ತಿದೆ. ಸಾರಥಿ ಹಾಗೂ ವಾಹನ್‌ ಆ್ಯಪ್‌ಗಳ ಮೂಲಕ ಬಹುತೇಕ ಸೇವೆಗಳು ಆನ್‌ಲೈನ್‌ನಲ್ಲೇ ಲಭಿಸುವಂತೆ ಮಾಡಲಾಗಿದೆ ಎಂದರು.

‘ಇಂದಿನಿಂದ ಹಳ್ಳಿಹಳ್ಳಿಗೂ ಬಸ್‌’
‘ಕೊರೊನಾ ನಿಯಂತ್ರಣ ಸಲುವಾಗಿ ಲಾಕ್‌ಡೌನ್‌ ಜಾರಿಯಾದ ಬಳಿಕ ಸ್ಥಗಿತಗೊಂಡಿದ್ದ ಸಾರಿಗೆ ಸೇವೆಯನ್ನು ಮೇ 18 ರಿಂದ ಹಂತ ಹಂತವಾಗಿ ಪುನರಾರಂಭಿಸಿದ್ದೆವು. ಜೂನ್‌ 8 ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಿದ್ದೇವೆ’ ಎಂದು ಲಕ್ಷ್ಮಣ ಸವದಿ ತಿಳಿಸಿದರು.

‘ಇದುವರೆಗೆ ಬೆಂಗಳೂರಿನಿಂದ ಜಿಲ್ಲಾ ಕೇಂದ್ರಗಳಿಗೆ, ಜಿಲ್ಲಾ ಕೇಂದ್ರಗಳಿಂದ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಿಗೆ ಮಾತ್ರ ಬಸ್‌ ಸೌಕರ್ಯ ಪುನರಾರಂಭ ಮಾಡಲಾಗಿತ್ತು. ಸೋಮವಾರದಿಂದ ಹಳ್ಳಿ ಹಳ್ಳಿಗೂ ಬಸ್‌ ಸೇವೆ ಮತ್ತೆ ಆರಂಭವಾಗಲಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಎಷ್ಟು ಬಸ್‌ ಓಡಿಸಬೇಕು ಎಂಬ ಬಗ್ಗೆ ನಿರ್ಧಾರಕ್ಕೆ ಬರುತ್ತೇವೆ’ ಎಂದರು.

ಅನಗತ್ಯ ವೆಚ್ಚಕ್ಕೆ ಕಡಿವಾಣ: ‘ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕಿರುವ ಸಿಬ್ಬಂದಿಯ ಸೇವೆಯನ್ನು ಕೆಲದಿನಗಳ ಮಟ್ಟಿಗೆ ನಿಲ್ಲಿಸಲಿದ್ದೇವೆ. ಅನವಶ್ಯಕ ಹುದ್ದೆಗಳನ್ನು ರದ್ದುಪಡಿಸಲಿದ್ದೇವೆ. ಇದರಿಂದ ₹ 4.5 ಕೋಟಿಗಳಷ್ಟು ಉಳಿತಾಯವಾಗಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT