ಸೋಮವಾರ, ಜನವರಿ 27, 2020
17 °C

ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಶೀಲ ಕೆಡಿಸಿದೆ: ದೇವನೂರ ಮಹಾದೇವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಸಂವಿಧಾನದ ಶೀಲಕ್ಕೆ ಕೈ ಹಾಕಿದೆ ಎಂದು ಸಾಹಿತಿ ದೇವನೂರ ಮಹಾದೇವ ಆತಂಕ ವ್ಯಕ್ತಪಡಿಸಿದರು. 

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಸಂವಿಧಾನ ರಕ್ಷಣಾ ಸಮಿತಿಯ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಸಂಘಟನೆಗಳ ವತಿಯಿಂದ ಇಲ್ಲಿನ ಪುರಭವನದ ಆವರಣದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಈ ಕಾಯ್ದೆ ಸಂವಿಧಾನದ ಶೀಲವನ್ನು ಕೆಡಿಸುತ್ತದೆ. ಸಂವಿಧಾನವನ್ನು ಪ್ರತ್ಯಕ್ಷವಾಗಿ ವಿರೋಧಿಸದೆ ಅದರ ಶೀಲ ಕೆಡಿಸಿ ಪರೋಕ್ಷವಾಗಿ ಸಂವಿಧಾನವನ್ನು ಮುಳುಗಿಸಿಬಿಡುವ ಹುನ್ನಾರ ಇದು ಎಂದು ಅವರು ಹರಿಹಾಯ್ದರು.

ಇದನ್ನೂ ಓದಿ... ಮೋದಿ ನಂಬಿಕೆ ದ್ರೋಹಿ: ದೇವನೂರ

ಸಂವಿಧಾನದ ಶೀಲ ಎಂದರೆ ಜಾತ್ಯಾತೀತ ಮೌಲ್ಯ. ಜಾಗತಿಕವಾಗಿ ಭಾರತದ ಗೌರವವನ್ನು ಹೆಚ್ಚಿಸಿದ ಮೌಲ್ಯ ಇದು. ಈ ಕಾಯ್ದೆ ಈ ಶೀಲವನ್ನು ಕೆಡಿಸುತ್ತಿದೆ ಎಂದು ಹೇಳಿದರು.

ಸಿಎಎ ಎಂದರೆ ಕಾ. 'ಕಾ ಕಾ' ಎನ್ನುವ ಕಾಗೆ ಶಬ್ದ ಅಪಶಕುನ, ಕೇಡು. 'ಸಿಎಎ' ಅಪಶಕುನವೂ ಹೌದು, ಕೇಡೂ ಹೌದು. ಇದು ಕಾಗೆಯ ಕೂಗಿನಂತೆ ದೇಶದ ಜನರ ಸುಪ್ತ ಮನಸ್ಸಿಗೆ ತಟ್ಟಿದೆ ಎಂದು ವ್ಯಂಗ್ಯವಾಡಿದರು.

ಎನ್ ಆರ್ ಸಿಯನ್ನು ಅಮಿತ್ ಷಾ ದೇಶಾದ್ಯಂತ ಜಾರಿಗೆ ತರುತ್ತೇವೆ ಎಂದರೆ, ಪ್ರಧಾನಿ ಮೋದಿ ಇಲ್ಲ ಅಂತಾರೆ. ಯಾರನ್ನು ನಂಬುವುದು ಎಂದು ಪ್ರಶ್ನಿಸಿದ ಅವರು ಇವರಿಬ್ಬರೂ ಜನಜೀವನದ ಪ್ರಾಣದ ಜತೆ ಬೆಕ್ಕಿನಂತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮೂಲನಿವಾಸಿಗಳನ್ನು ಎನ್ ಆರ್ ಸಿಯ ಮೂಲಕ ಅರಣ್ಯದಿಂದ ಸಂಪೂರ್ಣವಾಗಿ ಎತ್ತಂಗಡಿ ಮಾಡುವ ಸಂಚೂ ಇರಬಹುದು. ಆಗ ಕಾರ್ಪೊರೇಟ್ ಕಂಪನಿಗಳು ಅರಣ್ಯನಾಶ ಹಾಗೂ ಗಣಿಗಾರಿಕೆ ಮಾಡುವ ಮೂಲಕ ಹಬ್ಬ ಆಚರಿಸುತ್ತವೆ ಎಂದು ಸಂದೇಹ ವ್ಯಕ್ತಪಡಿಸಿದರು.

ಹಿಂದೆ ದೇಶವನ್ನು ಒಂದು ಕಂಪನಿಯಿಂದ ಬಿಡಿಸಿಕೊಂಡು ಬಂದು ಈಗ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿದಂತಾಗಿದೆ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು