ಗುರುವಾರ , ಜುಲೈ 29, 2021
21 °C

ಕೆಪಿಸಿಸಿ ನೂತನ ಕಚೇರಿಯಲ್ಲಿ ಹೋಮ ಹವನ: ಡಿ.ಕೆ. ಶಿವಕುಮಾರ್‌ ನೇತೃತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ವೀನ್ಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ನೂತನ ಕಟ್ಟಡದಲ್ಲಿ ಭಾನುವಾರ ಬೆಳಿಗ್ಗೆ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಹೋಮ ಹವನ ನಡೆಯಿತು.

ಎರಡು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದ ಈ ಕಟ್ಟಡದಲ್ಲಿ ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಜುಲೈ 2ರಂದು ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಈ ಕಾರಣದಿಂದಲೇ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದಾರೆ.

ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಎಸ್.ಆರ್. ಪಾಟೀಲ, ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ ಮತ್ತಿತರ ಮುಖಂಡರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಹೆಸರಿನಲ್ಲಿ ಶಿವಕುಮಾರ್ ಸಂಕಲ್ಪ ಮಾಡಿದರು.

‘ಎಲ್ಲ ವಿಘ್ನಗಳನ್ನು ನಿವಾರಣೆ ಮಾಡಲಿ ಎಂದು ಶುಭ ಮೂಹೂರ್ತದಲ್ಲಿ ಪೂಜೆ ಮಾಡಿದ್ದೇನೆ. ಎರಡು ವರ್ಷಗಳಿಂದ ಕಟ್ಟಡದ ಕೆಲಸ ನಿಂತಿದೆ. ಎಲ್ಲರ ಒಳಿತಿಗಾಗಿ ಹೋಮ ಮಾಡಿದ್ದೇನೆ. ರಾಜ್ಯಕ್ಕೆ, ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಒಳ್ಳೆಯದು ಆಗಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ರಾಜ್ಯ ಆದಷ್ಟು ಬೇಗ ಕೊರೊನಾದಿಂದ ಮುಕ್ತವಾಗಲಿ’ ಎಂದರು.

ಪದಗ್ರಹಣ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸದ್ಯದಲ್ಲೇ ಪದಗ್ರಹಣದ ದಿನ ನಿಗದಿ ಮಾಡುತ್ತೇನೆ. ಈ ಬಗ್ಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದರು.

ಲಾಕ್‌ಡೌನ್‌ ಮುಂದುವರಿಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ನಾನು ನಿರ್ಧಾರ ಮಾಡಲು ಆಗುವುದಿಲ್ಲ. ಸರ್ಕಾರ ಏನು ತೀರ್ಮಾನ ಮಾಡುತ್ತದೆಯೊ ಅದನ್ನು ಪಾಲಿಸುತ್ತೇವೆ. ಮಂತ್ರಿಗಳಲ್ಲಿ ಹಲವರು ವೈದ್ಯರಿದ್ದಾರೆ. ಅವರು ಎಲ್ಲ ತೀರ್ಮಾನಗಳನ್ನು ಮಾಡುತ್ತಾರೆ. ನಾವು ಕೇವಲ ಪ್ರಸಾದ ಸ್ವೀಕರಿಸುತ್ತೇವೆ’ ಎಂದು ವ್ಯಂಗ್ಯವಾಗಿ ಹೇಳಿದರು.

‘ವಿಘ್ನ ನಿವಾರಣೆಗೆ ಹೋಮ ಹವನ’: ‘ಗಣಪತಿ ಹೋಮ, ವಾಸ್ತು ಹೋಮ, ರಕ್ಷೋಜ್ಞ ಹೋಮ, ಭೂವರಹ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟ ಲಕ್ಷ್ಮೀ ಹೋಮ, ಗಾಯಿತ್ರಿ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಮಾಡಿದ್ದೇವೆ. ವಿಘ್ನಗಳು ಎದುರಾಗಬಾರದೆಂದು ಈ ಎಲ್ಲವನ್ನೂ ಮಾಡಿದ್ದೇವೆ. ಯಾವುದೇ ದೋಷಗಳಿದ್ದರೂ ಪರಿಹಾರವಾಗುತ್ತದೆ. ಶಾಪಗಳಿದ್ದರೆ ಭೂ ವರಹ ಹೋಮದಿಂದ ನಿವಾರಣೆಯಾಗಲಿದೆ’ ಎಂದು ಪೂಜಾ ಕೈಂಕರ್ಯ ನಿರ್ವಹಿಸಿದ ಜ್ಯೋತಿಷಿ ನಾಗರಾಜ ಆರಾಧ್ಯ ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು