ಗುರುವಾರ , ಸೆಪ್ಟೆಂಬರ್ 19, 2019
22 °C
‘ಬಿಜೆಪಿ ಕಾರ್ಯಕರ್ತರ ಸೆಳೆಯುವ ಪ್ರಯತ್ನ ಮಾಡಿದರೆ ಪರಿಣಾಮ ನೆಟ್ಟಗಿರದು’

ಕನಕಪುರದ ಗೂಂಡಾಗಿರಿ–ದರ್ಪ ಇಲ್ಲಿ ನಡೆಯಲ್ಲ: ಡಿಕೆಶಿಗೆ ಜಗದೀಶ ಶೆಟ್ಟರ್ ಎಚ್ಚರಿಕೆ

Published:
Updated:

ಹುಬ್ಬಳ್ಳಿ: ‘ಸಚಿವ ಡಿ.ಕೆ. ಶಿವಕುಮಾರ್ ಕುಂದಗೋಳ ಕ್ಷೇತ್ರದ ಬಿಜೆಪಿ ಕಾರ್ಯಕರ್ತರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಕಾರ್ಯಕರ್ತರ ಮೇಲೆ ಒತ್ತಡ ಹೇರಿದರೆ ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಶಾಸಕ ಜಗದೀಶ ಶೆಟ್ಟರ್ ಎಚ್ಚರಿಕೆ ನೀಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕೆಲಸ ಮಾಡುವುದು ಎಂದರೆ ಕೇವಲ ಹೋಟೆಲ್‌– ರೆಸಾರ್ಟ್‌ನಲ್ಲಿ ಸಭೆ ಮಾಡುವುದು ಎಂದು ಶಿವಕುಮಾರ್ ಭಾವಿಸಿದ್ದಾರೆ. ಅವರಿಗೆ ಕಾರ್ಯಕರ್ತರ ಕೊರತೆ ಇರುವುದರಿಂದ ನಮ್ಮ ಕಾರ್ಯಕರ್ತರನ್ನು ಸೆಳೆಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಮಾರಾಟದ ಸರಕಲ್ಲ. ಕನಪುರದ ಗೂಂಡಾಗಿರಿ–ದರ್ಪ, ಹಣದ ಪ್ರಭಾವ ಇಲ್ಲಿ ನಡೆಯುವುದಿಲ್ಲ ಎಂದರು.

ಸಿದ್ದರಾಮಯ್ಯ ಮಹಾಸುಳ್ಳುಗಾರರಲ್ಲಿ ಮಹಾಸುಳ್ಳುಗಾರ. ಮುಖ್ಯಮಂತ್ರಿಯಾಗುವ ಮೊದಲು ಇದೇ ಕೊನೆಯ ಚುನಾವಣೆ ಎಂದು ಹೇಳಿದ್ದ ಅವರು, ಮತ್ತೆ ಚುನಾವಣೆಗೆ ಸ್ಪರ್ಧಿಸಿದರು. ದಲಿತ ಮುಖ್ಯಮಂತ್ರಿ ಆಗಬೇಕು ಎಂದೂ ಹೇಳಿದ್ದರು. ಈಗ ಅವಕಾಶ ಸಿಕ್ಕರೆ ಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಿದ್ದಾರೆ. ಅವರ ಬಣ್ಣ ಕಳಚಿದೆ ಎಂದು ಟೀಕಿಸಿದರು.

ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಜೆಡಿಎಸ್‌ಗೆ ನೀಡಿರುವ ಬೆಂಬಲವನ್ನು ಕಾಂಗ್ರೆಸ್ ಹಿಂಪಡೆಯಲಿದ್ದು ಸರ್ಕಾರ ಪತನವಾಗಲಿದೆ. ಈ ಮೈತ್ರಿ ಲೋಕಸಭಾ ಚುನಾವಣೆ ವರೆಗೆ ಮಾತ್ರ ಎಂದು ಸಿದ್ದರಾಮಯ್ಯ ಅವರೇ ಈ ಹಿಂದೆ ಮುಖಂಡರಿಗೆ ಹೇಳಿದ್ದರು. ಮೈತ್ರಿ ಪಕ್ಷಗಳ ಮುಖಂಡರು ಪರಸ್ಪರರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಚಿವನಾಗಲಿಲ್ಲ ಎಂಬ ಕೊರಗು ಶಿವಳ್ಳಿಗಿತ್ತು: ಸಿದ್ದರಾಮಯ್ಯ ಅವರು ತಾವೊಬ್ಬ ಕುರುಬ ಸಮುದಾಯದ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಅದು ನಿಜವೇ ಆಗಿದ್ದರೆ ಶಿವಳ್ಳಿ ಅವರಿಗೆ ಮೊದಲ ಹಂತದಲ್ಲಿಯೇ ಏಕೆ ಸಚಿವ ಸ್ಥಾನ ನೀಡಲಿಲ್ಲ? ಮಂತ್ರಿ ಮಾಡಿದರೂ ಧಾರವಾಡ ಜಿಲ್ಲಾ ಉಸ್ತುವಾರಿ ನೀಡಲಿಲ್ಲ ಎಂದು ಪ್ರಶ್ನಿಸಿದ ಅವರು,  ಮಂತ್ರಿ ಮಾಡಲಿಲ್ಲ ಎಂಬ ಕೊರಗನ್ನು ಶಿವಳ್ಳಿ ನನ್ನ ಬಳಿಯೂ  ಹೇಳಿಕೊಂಡಿದ್ದರು ಎಂದರು.

ಬರಗಾಲ, ಕುಡಿಯುವ ನೀರಿಗೆ ಹಾಹಾಕಾರ ಇರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ದೇವೇಗೌಡರು ಟೆಂಪಲ್ ರನ್ ಮಾಡುತ್ತಿದ್ದಾರೆ. ಮಗ ಸೋಲುತ್ತಾನೆ ಎಂದು ಗೊತ್ತಾದ ನಂತರ ಸಿ.ಎಂ ಹೋಮ ಹವನ ಮಾಡಿಸುತ್ತಿದ್ದಾರೆ. ಹಾಗೆ ಮಾಡುವುದರಿಂದ ಮತಯಂತ್ರದಲ್ಲಿ ದಾಖಲಿರುವ ಜನಮತ ಬದಲಾಗುವಂತಿದ್ದರೆ ದೇವೇಗೌಡರು ಮತ್ತೊಮ್ಮೆ ಪ್ರಧಾನಿ ಆಗುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ನಿಂಬಣ್ಣವರ, ಅಮೃತ ದೇಸಾಯಿ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಇದ್ದರು.

Post Comments (+)