ಶುಕ್ರವಾರ, ಆಗಸ್ಟ್ 14, 2020
27 °C

ವರದಿ ಬರುವ ಮುಂಚೆಯೇ ಕೋವಿಡ್‌ ಸಾವು ಘೋಷಿಸಿದ ಜಿಲ್ಲಾ ವೈದ್ಯಾಧಿಕಾರಿಗಳು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಪರೀಕ್ಷಾ ವರದಿ ಬರುವ ಮೊದಲೇ ಗೋಕಾಕ ತಾಲ್ಲೂಕಿನ ಕೊಣ್ಣೂರು ಗ್ರಾಮದ ಮಹಿಳೆಯ ಸಾವು ಕೋವಿಡ್‌–19ದಿಂದ ಸಂಭವಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ಘೋಷಿಸಿದ್ದು ಆತಂಕ ಸೃಷ್ಟಿಸಿದೆ.

ಕೊಣ್ಣೂರು ಗ್ರಾಮದ 55 ವರ್ಷದ ಮಹಿಳೆಯು ಕೋವಿಡ್‌ನಿಂದ ಮೃತರಾಗಿದ್ದಾರೆ ಎಂದು ಆರೋಗ್ಯ ಬುಲೆಟಿನ್‌ನಲ್ಲಿ ಸರ್ಕಾರ ಪ್ರಕಟಿಸಿತ್ತು. ಆದರೆ, ಈ ಮಹಿಳೆಗೆ ಸೋಂಕು ಇರಲಿಲ್ಲ, ಸಕ್ಕರೆ ಕಾಯಿಲೆಯಿಂದ ಸಾವು ಸಂಭವಿಸಿದೆ ಎಂದು ಪಿಎಚ್‌ಸಿ ವೈದ್ಯಾಧಿಕಾರಿ ನೀಡಿದ ಹೇಳಿಕೆಯಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ.

‘ಈ ಮಹಿಳೆಯ ಸಾವು ಕೋವಿಡ್‌–19ದಿಂದಾಗಿಲ್ಲ, ಸಕ್ಕರೆ ಕಾಯಿಲೆಗೆ ಸರಿಯಾದ ಚಿಕಿತ್ಸೆ ಸಿಗದಿದ್ದರಿಂದ ಸಂಭವಿಸಿದೆ. ಕೊಣ್ಣೂರಿನಲ್ಲಿ ಯಾವುದೇ ಸೋಂಕಿತರು ಇಲ್ಲ. ಜನರು ಭಯಪಡಬಾರದು. ಈ ಕುರಿತು ಮಾಧ್ಯಮಗಳಲ್ಲಿ ‍ಪ್ರಕಟವಾಗಿರುವ ವರದಿಗಳು ಸತ್ಯಕ್ಕೆ ದೂರವಾದುದು’ ಎಂದು  ಪಿಎಚ್‌ಸಿ ವೈದ್ಯಾಧಿಕಾರಿ ಡಾ.ಬಾಲುಕುಮಾರ ವಿಡಿಯೊ ಮೂಲಕ ಹೇಳಿಕೆ ನೀಡಿದ್ದಾರೆ.

‘ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾತ್ರಿ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಬಿಮ್ಸ್‌) ಕಳುಹಿಸಿಕೊಡಲಾಗಿತ್ತು. ಅವರನ್ನು ತಪ್ಪಾಗಿ ಕೋವಿಡ್‌ ವಾರ್ಡ್‌ಗೆ ದಾಖಲಿಸಲಾಗಿತ್ತು. ಸರಿಯಾದ ಚಿಕಿತ್ಸೆ ಸಿಗದ ಕಾರಣ ಬೆಳಿಗ್ಗೆ ಅವರ ಸಾವು ಸಂಭವಿಸಿದೆ. ಮರಣ ನಂತರ ಅವರ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿದೆ. ಆ ವರದಿ ಇನ್ನೂ ಬರಬೇಕಾಗಿದೆ’ ಎಂದು ತಿಳಿಸಿದ್ದಾರೆ.

ರಾಜ್ಯಕ್ಕೂ ತಪ್ಪು ಮಾಹಿತಿ?:
ಮಹಿಳೆಯ ಪರೀಕ್ಷಾ ವರದಿ ಬರುವ ಮುಂಚೆಯೇ ಜಿಲ್ಲಾ ವೈದ್ಯಾಧಿಕಾರಿಗಳು, ಕೋವಿಡ್‌ನಿಂದಲೇ ಸಾವು ಸಂಭವಿಸಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದರು. ಇದೇ ವರದಿಯನ್ನು ರಾಜ್ಯ ಸರ್ಕಾರವು ಮಂಗಳವಾರ ತನ್ನ ಬುಲೆಟಿನ್‌ನಲ್ಲಿ ಪ್ರಕಟಿಸಿತ್ತು.

ನೋಟಿಸ್‌:

‘ಪಿಎಚ್‌ಸಿ ವೈದ್ಯಾಧಿಕಾರಿ ನೀಡಿದ ವಿಡಿಯೊ ಹೇಳಿಕೆ ನನ್ನ ಗಮನಕ್ಕೆ ಬಂದಿದೆ. ಅವರಿಗೆ ನೋಟಿಸ್‌ ನೀಡಲಾಗುವುದು. ಮಹಿಳೆಯ ಸಾವಿನ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಸದ್ಯದಲ್ಲಿಯೇ ವಿವರ ನೀಡುತ್ತೇನೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು