ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್ ಕಮಲದ ಬಗ್ಗೆ ಸದನದಲ್ಲಿ ಉತ್ತರಿಸುವೆ: ರಮೇಶಕುಮಾರ್

Last Updated 10 ಫೆಬ್ರುವರಿ 2019, 12:12 IST
ಅಕ್ಷರ ಗಾತ್ರ

ರಾಯಚೂರು: 'ಆಪರೇಷನ್ ಕಮಲದಲ್ಲಿ ನನ್ನ ಹೆಸರು ತಳುಕಾಗಿರುವ ಕುರಿತು ಸದನದಲ್ಲಿ ವಿವರಿಸುತ್ತೆನೆ' ಎಂದು ವಿಧಾನಸಭೆ ಸಭಾಪತಿ ರಮೇಶಕುಮಾರ್ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಖಾಸಗಿ ಡೆಂಟಲ್ ಕಾಲೇಜಿನ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದರು.

'ನಾನು ಹಿಟ್ಲರ್ ಅಲ್ಲ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಯಾರು ಮಾರಾಟ ಆಗುತ್ತಾರೋ, ಯಾರು ದುಡ್ಡು ಕೊಡುತ್ತಾರೋ ಗೊತ್ತಿಲ್ಲ. ಆಪರೇಷನ್ ಕಮಲ ಕುರಿತು ನನ್ನನ್ನು ಪ್ರಶ್ನೆ ಮಾಡಬೇಡಿ' ಎಂದರು.

'ರಾಜ್ಯದಲ್ಲಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳು ನೋವುಂಟು ಮಾಡಿವೆ. ಜವಾಬ್ದಾರಿ ಸ್ಥಾನದಲ್ಲಿರುವ ನಾವು, ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ನಮ್ಮನ್ನು ನೋಡಿ ಜನ ಪಕ್ಕಕ್ಕೆ ಉಗಿದು ಹೋಗಬಾರದು, ಇದಕ್ಕಿಂತ ಕಠಿಣವಾಗಿ ಮಾತನಾಡಲು ನನಗೆ ಬರಲ್ಲ, ನಾವುಗಳು ಮತದಾರರ ಋಣ ತೀರಿಸಬೇಕು' ಎಂದು ಹೇಳಿದರು.

ಶಾಸಕಾಂಗ ಸಭೆಗೆ ಗೈರುಹಾಜರಿಯಾದ ಶಾಸಕರ ಕುರಿತು ಮಾತನಾಡಿದ ಅವರು, 'ಕೆಲವರು ಎರಡು ಮೂರು ಬಾರಿ ಶಾಸಕರಾಗಿದ್ದಾರೆ. ಸಚಿವರೂ ಆಗಿದ್ದಾರೆ, ಅವರಿಗಾಗಿ ಸದನದಲ್ಲಿ ಕುಳಿತುಕೊಳ್ಳುವ ಆಸನ ವ್ಯವಸ್ಥೆ, ಮಾತನಾಡಲು ಮೈಕ್ ವ್ಯವಸ್ಥೆ ಮಾಡಲಾಗಿರುತ್ತದೆ. ಅದರ ಜೊತೆ ಅವರ ಬೇಡಿಕೆಗಳನ್ನು ಕೇಳಲು ಅವಕಾಶವನ್ನು ನೀಡಲಾಗುತ್ತದೆ. ಅದನ್ನು ಬಿಟ್ಟು ಸದನಕ್ಕೆ ಗೈರಾದರೆ ಪ್ರಯೋಜನವೇನು' ಎಂದ ಬೇಸರ ವ್ಯಕ್ತಪಡಿಸಿದರು.

'ರಾಜ್ಯ ಒಂದೇ ಅಲ್ಲ ಇಡೀ ದೇಶಕ್ಕೆ ಭ್ರಷ್ಟಾಚಾರದ ಪಿಡುಗು ಕಾಡುತ್ತಿದೆ. ಇದನ್ನು ಸುಧಾರಿಸಲು ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ಹಾಗೂ ಚುನಾವಣೆ ಸುಧಾರಣೆ ಕಾಯ್ದೆ ಜಾರಿಯಾಗಬೇಕು'ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT