ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ವಿಭಜಿಸಿದರೆ ಬೆಂಕಿ ಹೊತ್ತಿಕೊಳ್ತದೆ : ಜಿ.ಸೋಮಶೇಖರ ರೆಡ್ಡಿ ಆಕ್ರೋಶ

Last Updated 30 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಬಳ್ಳಾರಿ: ‘ಜಿಲ್ಲೆಯನ್ನು ವಿಭಜಿಸುವ ವಿಚಾರ ಸಚಿವ ಸಂಪುಟದಲ್ಲಿ ಅನುಮೋದನೆಯಾದರೆ ಬೆಂಕಿ ಹೊತ್ತಿಕೊಳ್ಳುತ್ತದೆ. ಹಾಗಾಗಲು ಬಿಡೆವು’ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಿಗೇ, ಜಿಲ್ಲೆ ಪ್ರತ್ಯೇಕಗೊಳ್ಳಬೇಕು ಎಂದು ಸಿರುಗುಪ್ಪ ಶಾಸಕ ಎಂ.ಎಸ್‌.ಸೋಮಲಿಂಗಪ್ಪ ಪ್ರತಿಪಾದಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ‘ಸಚಿವ ಸಂಪುಟ ಸಭೆಯನ್ನು ಮುಂದೂಡುವ ಸಾಧ್ಯತೆ ಇದೆ. ಸಭೆ ನಡೆದರೂ ಸಚಿವ ಬಿ.ಶ್ರೀರಾಮುಲು ಅವರು ವಿಭಜನೆಗೆ ವಿರೋಧ ವ್ಯಕ್ತಪಡಿಸಲಿದ್ದಾರೆ’ ಎಂದರು.

‘ಬಳ್ಳಾರಿ ನಗರವೊಂದನ್ನೇ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಹೇಗಿರುತ್ತದೆ? ಬಳ್ಳಾರಿ ಅಖಂಡ ಜಿಲ್ಲೆಯಾಗಿರಬೇಕು. ನಾವು ಅಣ್ಣ ತಮ್ಮಂದಿರಂತಿದ್ದೇವೆ. ಬಂದ್‌ಗೆ ನಮ್ಮ ಪರೋಕ್ಷ ಬೆಂಬಲವಿದೆ’ ಎಂದರು.

‘ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರಿಗೆ ದೂರವಾಣಿ ಕರೆ ಮಾಡಿದಾಗ, ಬಹಿರಂಗವಾಗಿ ಹೇಳಿಕೆಗಳನ್ನು ಕೊಡಬಾರದು ಎಂದು ಹೇಳಿದರು. ಜಿಲ್ಲೆಯ ಜನರ ಪರವಾಗಿ ನಿಂತಿದ್ದೇನೆ ಎಂದು ಸ್ಪಷ್ಟಪಡಿಸಿರುವೆ. ಯಡಿಯೂರಪ್ಪನವರೂ ನನ್ನೊಂದಿಗೆ ಚರ್ಚಿಸಿದ್ದಾರೆ’ ಎಂದು ಹೇಳಿದರು.

ಪ್ರತ್ಯೇಕವಾಗಲಿ:

ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಲಿಂಗಪ್ಪ, ‘ಬಳ್ಳಾರಿ ದೊಡ್ಡ ಜಿಲ್ಲೆ. ಶ್ರೀಕೃಷ್ಣ ದೇವರಾಯರು ನೆಲೆಸಿದ್ದ ಕಾರಣ ವಿಜಯನಗರ ಎಂದು ಹೆಸರಿಡಲಿ. ಅಭಿವೃದ್ಧಿ ದೃಷ್ಟಿಯಿಂದ ಹೊಸಪೇಟೆಯನ್ನು ವಿಜಯನಗರ ಜಿಲ್ಲಾ ಕೇಂದ್ರವನ್ನಾಗಿಸಲಿ’ ಎಂದು ಪ್ರತಿಪಾದಿಸಿದರು.

ವಿರೋಧಿಸುವವರು ಆಂಧ್ರದ ರೆಡ್ಡಿಗಳು: ಕುಂ.ವೀ

ಹೊಸಪೇಟೆ: ‘ಬಳ್ಳಾರಿ ವಿಭಜನೆಯನ್ನು ವಿರೋಧಿಸುತ್ತಿರುವ ರೆಡ್ಡಿ ಸಹೋದರರು ಆಂಧ್ರದವರು. ವಿಭಜನೆಯಿಂದ ಜನಸಾಮಾನ್ಯರಿಗಾಗುವ ಪ್ರಯೋಜನವೇನೆಂದು ಅವರಿಗೆ ಗೊತ್ತಿಲ್ಲ. ಅಧಿಕಾರ ವಿಕೇಂದ್ರೀಕರಣಕ್ಕಾಗಿ ಆಂಧ್ರ ಮತ್ತು ತೆಲಂಗಾಣದಲ್ಲಿ ಚಿಕ್ಕ ಜಿಲ್ಲೆಗಳನ್ನು ಮಾಡಲಾಗುತ್ತಿದೆ. ವಿಶಾಲವಾದ ಬಳ್ಳಾರಿಯನ್ನು ವಿಭಜಿಸುವುದರಲ್ಲಿ ತಪ್ಪಿಲ್ಲ’ ಎಂದು ಲೇಖಕ ಕುಂ.ವೀರಭದ್ರಪ್ಪ ಪ್ರತಿಪಾದಿಸಿದರು.

‘ರೆಡ್ಡಿ ಸಹೋದರರು, ಆನಂದ್‌ ಸಿಂಗ್‌ ಮುಖ್ಯವಲ್ಲ. ಹೊಸ ಜಿಲ್ಲೆಗಾಗಿ ಜನ ದಶಕದಿಂದ ಹೋರಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಯಾರ ಒತ್ತಡಕ್ಕೂ ಮಣಿಯದೇ ಹೊಸ ಜಿಲ್ಲೆ ಘೋಷಿಸಬೇಕು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಜಯನಗರ ವ್ಯಾಪ್ತಿಗೆ ಬರಲಿರುವ ಪಶ್ಚಿಮ ತಾಲ್ಲೂಕುಗಳ ಪೈಕಿ ಕೆಲವು ಬಳ್ಳಾರಿಯಿಂದ 150 ಕಿ.ಮೀ.ಗೂ ಹೆಚ್ಚಿನ ದೂರದಲ್ಲಿವೆ. ಹೊಸಪೇಟೆ ಜಿಲ್ಲಾ ಕೇಂದ್ರವಾದರೆ ಅಂತರ ಕಡಿಮೆಯಾಗುತ್ತದೆ. ಹಂಪಿ, ತುಂಗಭದ್ರಾ ಜಲಾಶಯ, ವಿಮಾನ ನಿಲ್ದಾಣ ಸೌಲಭ್ಯವುಳ್ಳ ಹೊಸಪೇಟೆಗೆ ಜಿಲ್ಲಾ ಕೇಂದ್ರವಾಗಲು ಎಲ್ಲ ಅರ್ಹತೆಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT