ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಕಾಣಿಸಿಲ್ಲವೆಂದು ತಾತ್ಸಾರ ಸಲ್ಲದು: ರಮೇಶ ಜಾರಕಿಹೊಳಿ

Last Updated 19 ಏಪ್ರಿಲ್ 2020, 10:21 IST
ಅಕ್ಷರ ಗಾತ್ರ

ಅಥಣಿ: ‘ತಾಲ್ಲೂಕಿನಲ್ಲಿ ಈವರೆಗೆ ಕೋವಿಡ್-19 ಪ್ರಕರಣ ಕಾಣಿಸಿಕೊಂಡಿಲ್ಲ. ಹಾಗೆಂದು ಉದಾಸೀನ ಮಾಡಬಾರದು. ಜಿಲ್ಲೆ ಮತ್ತು ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಅಧಿಕವಾಗುತ್ತಿದ್ದು ಎಚ್ಚರಿಕೆಯಿಂದ ಇರಬೇಕು. ಅಂತರ ಕಾಯ್ದುಕೊಳ್ಳಬೇಕು. ಮನೆಯಲ್ಲಿಯೇ ಇದ್ದು ಲಾಕ್‌ಡೌನ್ ಯಶಸ್ಸಿಗೆ ಸಹಕರಿಸಬೇಕು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ‌ ಹೇಳಿದರು.

ಇಲ್ಲಿ ಭಾನುವಾರ ನಡೆದ ತಾಲ್ಲೂಕು ಕಾರ್ಯಪಡೆಯ ಸಭೆಯಲ್ಲಿ ಅವರು ಮಾತನಾಡಿದರು.

‘ನೆರೆಯ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು. ವೈರಸ್ ಹರಡುವಿಕೆಯ ನಿಯಂತ್ರಣ ಕುರಿತಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಕೊರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಅಲ್ಲದೇ ಚಿಕಿತ್ಸೆಗೆ ಬೇಕಾಗುವ ಸವಲತ್ತು ಮತ್ತು ಹಣಕಾಸಿನ ನೆರವು ನೀಡುತ್ತಿವೆ. ಈ ವೈರಾಣು ಹರಡದಂತೆ ಸುರಕ್ಷಾ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಜನರು ಮನೆಯಿಂದ ಹೊರಗೆ ಬಾರದಂತೆ ತಿಳಿವಳಿಕೆ ನೀಡಿ, ಅವರಿಗೆ ಬೇಕಾಗುವ ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.

‘ಅಥಣಿ ತಾಲ್ಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗದೇ ಇರುವುದು ಸಮಾಧಾನಕರ ಸಂಗತಿ. ಆದರೆ, ಮೈಮರೆಯಬಾರದು’ ಎಂದು ಎಚ್ಚರಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ದೆಹಲಿಯ ನಿಜಾಮುದ್ದೀನ್‌ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದವರಿಂದ ಜಿಲ್ಲೆಯಲ್ಲಿ ಕೊರೊನಾ ಹೆಚ್ಚು ಹರಡಲು ಕಾರಣವಾಯಿತು. ಇನ್ನೂ ಹೆಚ್ಚಿನ ತೊಂದರೆಯಾಗದಂತೆ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌, ವಿವಿಧ ಮಂತ್ರಿಗಳು, ಶಾಸಕರು, ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ’ ಎಂದರು.

‘ಬೇಸಿಗೆ ಬಂದಿರುವುದರಿಂದ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

ಶಾಸಕ ಮಹೇಶ ಕುಮಠಳ್ಳಿ, ‘ಶತಮಾನ ಕಂಡರಿಯದ ಸಮಸ್ಯೆಗೆ ಸಿಲುಕಿದ್ದೇವೆ. ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಶಾಸಕರು ಕ್ಷೇತ್ರದಲ್ಲಿ ಇಲ್ಲ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆದರೆ ನಾನು ಎಲ್ಲ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸಲಹೆ-ಸೂಚನೆಗಳು ಕೊಡುತ್ತಿದ್ದೇನೆ. ಶಾಸಕನಾಗಿ ನಾನೇ ಜನರನ್ನು ಗುಂಪುಗೂಡಿಸಿಕೊಂಡು ತಿರುಗಾಡಿ ಪ್ರಚಾರ ಗಿಟ್ಟಿಸಿಕೊಳ್ಳಲು ಮನಸ್ಸಿಲ್ಲ. ಹೀಗಾಗಿ, ಕ್ಷೇತ್ರದಲ್ಲಿ ಓಡಾಡುತ್ತಿಲ್ಲ. ಆದರೆ, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಂಡಿದ್ದೇನೆ’ ಎಂದು ತಿಳಿಸಿದರು.

ಗ್ರೇಡ್–2 ತಹಶೀಲ್ದಾರ್‌ ರಾಜಕುಮಾರ ಬುರ್ಲಿ, ಇಒ ರವಿ ಬಂಗಾರಪ್ಪನವರ, ಡಿಎಸ್‌ಪಿ ಎಸ್.ವಿ. ಗಿರೀಶ್, ಸಿಪಿಐ ಶಂಕರಗೌಡ ಬಸನಗೌಡ, ಸಮಾಜ ಕಲ್ಯಾಣ ಅಧಿಕಾರಿ ಬಿ.ಎಸ್. ಯಾದವಾಡ, ಉಪತಹಶೀಲ್ದಾರ್‌ ಎಂ.ವಿ. ಬಿರಾದಾರ ಪಾಟೀಲ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT