ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಶಿಕ್ಷಣ ಬೇಡ: ವಿದ್ಯಾರ್ಥಿಗಳ ವಾದ

Last Updated 5 ಜೂನ್ 2020, 20:00 IST
ಅಕ್ಷರ ಗಾತ್ರ

ಶಿಕ್ಷಣ ಕೇಂದ್ರ ಸಜ್ಜುಗೊಳ್ಳಲಿ
ಗ್ರಾಮಗಳಲ್ಲಿ ದುರ್ಬಲ ಇಂಟರ್‌ನೆಟ್‌ ಸಂಪರ್ಕ, ಆನ್‌ಲೈನ್‌ ಬೋಧನೆಗೆ ಶಿಕ್ಷಕರು ಇನ್ನೂ ಸಜ್ಜುಗೊಳ್ಳದಿರುವುದು ಮತ್ತು ಡಿಜಿಟಲ್‌ ಅಧ್ಯಯನ ಸಾಮಗ್ರಿಗಳ ಕೊರತೆ ಇರುವುದರಿಂದ ಸದ್ಯಕ್ಕೆ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಜಾರಿಗೆ ತರುವುದು ಸರಿಯಲ್ಲ. ಶಿಕ್ಷಣ ಕೇಂದ್ರಗಳನ್ನು ಮೊದಲು ಆಧುನೀಕರಣಗೊಳಿಸುವ ಕೆಲಸ ಮಾಡಬೇಕು.

ಕೊರೊನಾ ಸೋಂಕು ಹರಡುವ ಕಾರಣದಿಂದ ಆನ್‌ಲೈನ್‌ ಶಿಕ್ಷಣ ಅನಿವಾರ್ಯ ಎನ್ನುವುದು ಸರಿಯಲ್ಲ. ಪರೀಕ್ಷೆಯ ಕುರಿತೂ ಚರ್ಚೆ ನಡೆಯುತ್ತಿದೆ. ಪರ್ಯಾಯ ಮಾರ್ಗಗಳನ್ನು ಅನುಸರಿಸುವ ಮೂಲಕವೂ ಪರೀಕ್ಷೆ ನಡೆಸಬಹುದಾಗಿದೆ. ಹಲವು ಸೆಮಿಸ್ಟರ್‌ಗಳ‌ ಬದಲು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ವಾರ್ಷಿಕ ಪರೀಕ್ಷೆ ಮಾಡಬೇಕು, ಪರೀಕ್ಷೆ ನಡೆಸಲು ಸಾಧ್ಯವಾಗದಿದ್ದರೆ ಘಟಕ ಅಥವಾ ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿನ ಅಂಕಗಳನ್ನು ಆಧರಿಸಿ ಉತ್ತೀರ್ಣ ಮಾಡಬೇಕು. ಅಂತರವಿಶ್ವವಿದ್ಯಾಲಯ ವರ್ಗಾವಣೆ ನೀತಿ ಜಾರಿಗೆ ತಂದು, ವಿದ್ಯಾರ್ಥಿಗಳಿದ್ದಲ್ಲಿಯೇ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿದರೆ ಒಳ್ಳೆಯದು. ಆನ್‌ಲೈನ್‌ ಮೂಲಕ ಸಂಶೋಧನಾ ಪ್ರಬಂಧ ಮಂಡಿಸಲು ಅವಕಾಶ ನೀಡಿದರೆ ಅನುಕೂಲ.

-ಪ್ರತೀಕ್‌ ಮಾಳಿ, ಎಬಿವಿಪಿ ರಾಜ್ಯ ಕಾರ್ಯದರ್ಶಿ

**

ಶಾಶ್ವತ ಅಸಮಾನತೆಗೆ ದಾರಿ
ಶೈಕ್ಷಣಿಕ ಕ್ಷೇತ್ರದಲ್ಲಿ ಶಾಶ್ವತ ಅಸಮಾನತೆಗೆ ಕಾರಣವಾಗಲಿರುವ ಆನ್‌ಲೈನ್‌ ಶಿಕ್ಷಣಕ್ಕೆ ನಮ್ಮ ವಿರೋಧವಿದೆ. ಈವರೆಗೆ ಪೋಷಕರ ಆರ್ಥಿಕ ಶಕ್ತಿಯನ್ನು ನೋಡಲಾಗುತ್ತಿತ್ತು. ಮುಂದೆ, ಗ್ರಾಮೀಣ ಅಥವಾ ಗುಡ್ಡಗಾಡು ಪ್ರದೇಶದಲ್ಲಿರುವವರ ಸಾಮಾಜಿಕ ಸ್ಥಿತಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆನ್‌ಲೈನ್‌ ಶಿಕ್ಷಣ ಜಾರಿಯಾದರೆ, ತಳಸಮುದಾಯದ ಮತ್ತು ಸಕಲ ಸೌಲಭ್ಯ ಇರದಂತಹ ಪೋಷಕರ ಮಕ್ಕಳು ಶಾಶ್ವತವಾಗಿ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ.

ಆನ್‌ಲೈನ್‌ ಶಿಕ್ಷಣದ ಬೋಧನೆ ಹಿಂದೆ ಸ್ಮಾರ್ಟ್‌ಫೋನ್‌, ಡಿಜಿಟಲ್‌ ಸಾಮಗ್ರಿಗಳ ದೊಡ್ಡ ಮಾರುಕಟ್ಟೆಯ ವ್ಯವಸ್ಥೆಯೇ ಇದೆ. ಖಾಸಗಿ ಶಾಲೆಗಳ ಲಾಬಿಯೂ ಇದರ ಹಿಂದಿದೆ. ವೇದಾಂತ್‌, ಝೂಮ್‌ನಂತಹ ಆ್ಯಪ್‌ಗಳಲ್ಲಿ 40 ನಿಮಿಷಕ್ಕಿಂತ ಹೆಚ್ಚು ಹೊತ್ತು ಪಾಠ ಕೇಳಿದರೆ ದುಡ್ಡು ಕಟ್ಟಬೇಕಾಗುತ್ತದೆ. ಬಡ ಪೋಷಕರು ಇದರಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ.

ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಸಾಕಷ್ಟು ಹಣ ವಿನಿಯೋಗಿಸಬೇಕಾಗುತ್ತದೆ. ಇದರ ಬದಲು, ಶಾಲಾ–ಕಾಲೇಜುಗಳ ಕೊಠಡಿಗಳ ಸಂಖ್ಯೆ ಹೆಚ್ಚು ಮಾಡಿ, ಮೂಲಸೌಕರ್ಯ ಒದಗಿಸಲು ಹೆಚ್ಚು ಹಣ ಮೀಸಲಿಡಬೇಕು.

-ಕೆ. ವಾಸುದೇವ ರೆಡ್ಡಿ, ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ

**

ಭವಿಷ್ಯದಲ್ಲಿ ನೋಡೋಣ
ಆನ್‌ಲೈನ್‌ ಶಿಕ್ಷಣ ಜಾರಿ ಮಾಡಿದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಎಷ್ಟೋ ಪೋಷಕರ ಬಳಿ ಸ್ಮಾರ್ಟ್‌ ಫೋನ್‌‌ ಇಲ್ಲ. ಎಲ್ಲ ವ್ಯವಸ್ಥೆ ಇದ್ದರೂ ನೆಟ್‌ವರ್ಕ್‌ ಸಿಗುವುದೇ ಇಲ್ಲ. ಶಿಕ್ಷಕರು ಏನಾದರೂ ಬೋರ್ಡ್‌ ಮೇಲೆ ಬರೆದರೆ ಮೊಬೈಲ್‌ ಪರದೆಯಲ್ಲಿ ಅದು ಸರಿಯಾಗಿ ಕಾಣುವುದಿಲ್ಲ. ಲ್ಯಾಪ್‌ಟಾಪ್‌ ಬೇಕಾಗುತ್ತದೆ. ಫೋನ್‌ ಬೇಕು, ಲ್ಯಾಪ್‌ಟಾಪ್‌ ಬೇಕು ಎಂದು ಮಕ್ಕಳು ಇದ್ದಕ್ಕಿದ್ದಂತೆ ಕೇಳತೊಡಗಿದರೆ ಪೋಷಕರಿಗೆ ಹೊರೆಯಾಗುತ್ತದೆ.

ಕೊರೊನಾ ಕಾರಣದಿಂದ, ಹಳ್ಳಿಯ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದ ಐಟಿ ಕಂಪನಿ ಉದ್ಯೋಗಿಗಳು ನೆಟ್‌ವರ್ಕ್‌ ಸಿಗದ ಕಾರಣ ನಗರ ಪ್ರದೇಶಕ್ಕೆ ವಾಪಸ್‌ ಹೋಗುತ್ತಿದ್ದಾರೆ. ನಾವು ನಡೆಸಿದ ಸಮೀಕ್ಷೆಯಲ್ಲಿ, ಈ ವ್ಯವಸ್ಥೆಯಡಿ ಕಲಿಯುವುದು ಕಷ್ಟವಾಗುತ್ತಿದೆ ಎಂದು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಹೇಳಿದ್ದಾರೆ. ಭವಿಷ್ಯದಲ್ಲಿ ಆನ್‌ಲೈನ್‌ ಶಿಕ್ಷಣ ಅನಿವಾರ್ಯವಾಗಬಹುದು. ಅದಕ್ಕೆ ತಕ್ಕ ಸಿದ್ಧತೆಯನ್ನು ಸರ್ಕಾರ ಮಾಡಿಕೊಳ್ಳಬೇಕು, ಸೌಲಭ್ಯ ಕಲ್ಪಿಸಬೇಕು. ನಂತರವೇ ಈ ಬಗ್ಗೆ ಯೋಚಿಸಬೇಕು.

-ಮಮತಾ ನೇರ್ಲಿಗೆ, ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ

**

ಖಾಸಗೀಕರಣದ ಹುನ್ನಾರ
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸುತ್ತಿರುವವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು. ಮುಂದೆ ಆನ್‌ಲೈನ್‌ ಶಿಕ್ಷಣ ಕಡ್ಡಾಯ ಮಾಡಿದರೆ ಅವರು ತೊಂದರೆಗೀಡಾಗುತ್ತಾರೆ. ಖಾಸಗಿ ಶಾಲೆಗಳ ಲಾಬಿ ಮತ್ತು ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಉದ್ದೇಶ ಇದರ ಹಿಂದಿದೆ.

ನಮ್ಮ ದೇಶ ಈ ವ್ಯವಸ್ಥೆಗೆ ಇನ್ನೂ ಸಿದ್ಧವಾಗಿಲ್ಲ. ಈಗ,ಚಂದನವಾಹಿನಿಯಲ್ಲಿ ಪಾಠ ಕೇಳಿ ಎನ್ನುತ್ತಿದ್ದಾರೆ. ನೆಲಮಂಗಲದಂತಹ ಬೆಂಗಳೂರಿಗೆ ಹತ್ತಿರವಿರುವ ಪಟ್ಟಣದಲ್ಲಿಯೇ ವಿದ್ಯುತ್‌ ಇಲ್ಲದೆ ಟಿವಿ ನೋಡಲು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ.ಮಲೆನಾಡಿನಲ್ಲಿ ಮಳೆ ಬಂದಾಗ ಮರಗಳು ಬಿದ್ದು ವಿದ್ಯುತ್‌ ಸಂಪರ್ಕವೇ ಇರುವುದಿಲ್ಲ. ಈಗಾಗಲೇ, ಆನ್‌ಲೈನ್‌ ಬೋಧನೆ ವೇಳೆ ನೀಲಿಚಿತ್ರ ಪ್ರಸಾರವಾಗುವಂತಹ ಅವಾಂತರಗಳನ್ನೂ ನಾವು ನೋಡುತ್ತಿದ್ದೇವೆ.

ಆಂಧ್ರಪ್ರದೇಶದಲ್ಲಿ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸದಿರಲು ತೀರ್ಮಾನಿಸಲಾಗಿದೆ. ಪೂರ್ವಸಿದ್ಧತಾ ಪರೀಕ್ಷೆಯಲ್ಲಿನ ಅಂಕಗಳ ಆಧಾರದ ಮೇಲೆ ಉತ್ತೀರ್ಣಗೊಳಿಸಲು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರವೂ ಈ ಕ್ರಮ ಅನುಸರಿಸಬೇಕು.

-ಜ್ಯೋತಿ, ಎಐಎಸ್‌ಎಫ್‌ ರಾಜ್ಯ ಅಧ್ಯಕ್ಷೆ

**

ಮೊದಲು ತಜ್ಞರ ಸಲಹೆ ಕೇಳಿ
ದೇಶದಲ್ಲಿ ಅಂತರ್ಜಾಲ ಬಳಕೆ ಗೊತ್ತಿರುವವರ ಸಂಖ್ಯೆ ಶೇ 37ರಷ್ಟು ಮಾತ್ರ. ಅದರಲ್ಲಿಯೂ ಆನ್‌ಲೈನ್‌ ಶಿಕ್ಷಣ ಕಡ್ಡಾಯ ಮಾಡಿದರೆ ದೇಶದ ಶೇ 15ರಷ್ಟು ಜನ ಮಾತ್ರ ಈ ಸೌಲಭ್ಯ ಪಡೆಯಲು ಬೇಕಾದ ವ್ಯವಸ್ಥೆ ಹೊಂದಿದ್ದಾರೆ. ಅಂದರೆ, ಶೇ 85ರಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ.

ಶೈಕ್ಷಣಿಕವಾಗಿ ಒಂದು ವರ್ಷ ವ್ಯರ್ಥವಾದರೂ ಪರವಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಜಾರಿಗೆ ತರಬಾರದು.ತರಗತಿ ಬೋಧನೆಗೆ, ಆನ್‌ಲೈನ್‌ ಶಿಕ್ಷಣ ಪರ್ಯಾಯವಾಗುವುದಕ್ಕೆ ಸಾಧ್ಯವೇ ಇಲ್ಲ.

6,000ಕ್ಕೂ ಹೆಚ್ಚು ಸರ್ಕಾರಿ ಶಾಲಾ–ಕಾಲೇಜುಗಳನ್ನು ಕ್ವಾರಂಟೈನ್‌ ಕೇಂದ್ರಗಳನ್ನಾಗಿ ಮಾಡಿದ್ದಾರೆ. ಅವುಗಳನ್ನು ಯಾವ ರೀತಿ ಸೋಂಕು ಮುಕ್ತಗೊಳಿಸಿ ಹಿಂದಿರುಗಿಸುತ್ತಾರೋ ಗೊತ್ತಿಲ್ಲ. ಆನ್‌ಲೈನ್‌ ಶಿಕ್ಷಣದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸರ್ಕಾರವು ಶಿಕ್ಷಣ ತಜ್ಞರ ಸಲಹೆ ಪಡೆಯಬೇಕು. ಸದ್ಯಕ್ಕಂತೂ, ಪೋಷಕರು ಆತಂಕದಲ್ಲಿದ್ದಾರೆ. ಬಹಳಷ್ಟು ಜನ ಆನ್‌ಲೈನ್‌ ಶಿಕ್ಷಣ ಬೇಡ ಎಂದೇ ಹೇಳುತ್ತಿದ್ದಾರೆ.

-ಅಜಯ್‌ ಕಾಮತ್‌, ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT